Wed. Nov 20th, 2024

ಮಂಗಳೂರು: ಬಿಜೆಪಿ ಕಾರ್ಯಕರ್ತರು ತೈಲ ಬೆಲೆಯೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗಲೇ ಹೆಡ್ ಕಾನ್ಸ್ ಟೇಬಲ್ ಪರ್ಸ್ ಕದ್ದ ಖದೀಮ

ಮಂಗಳೂರು( ಜೂನ್.21) : ನಗರದ ಪಿವಿಎಸ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ತೈಲ ಬೆಲೆಯೇರಿಕೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾಗಲೇ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಒಬ್ಬರ ಜೇಬಿನಿಂದ ಕಳ್ಳನೊಬ್ಬ ಪಿಕ್ ಪಾಕೆಟ್ ಮಾಡಿದ್ದಾನೆ.
ಬಿಜೆಪಿ ಕಾರ್ಯಕರ್ತರು 15 ನಿಮಿಷ ಕಾಲ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದ ಬಳಿಕ ಪೊಲೀಸರು ರಸ್ತೆ ತೆರವು ಮಾಡಲು ಯತ್ನಿಸಿದರು. ಈ ವೇಳೆ, ವೃತ್ತದ ಬಳಿಯಲ್ಲೇ ಒಂದಷ್ಟು ಕಾರ್ಯಕರ್ತರು ನೆಲದಲ್ಲಿ ಕುಳಿತು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗುತ್ತಿದ್ದರು. ಸಿವಿಲ್ ಡ್ರೆಸ್ ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಕಾರ್ಯಕರ್ತರನ್ನು ಎಬ್ಬಿಸಲು ಪ್ರಯತ್ನ ಪಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸಿವಿಲ್ ಡ್ರೆಸ್ ನಲ್ಲಿದ್ದ ಪಾಂಡೇಶ್ವರ ಠಾಣೆಯ ಹೆಡ್ ಕಾನ್ಸ್‌ ಟೇಬಲ್ ಒಬ್ಬರ ಹಿಂಬದಿ ಪ್ಯಾಂಟ್ ಜೇಬಿನಿಂದ ಕಳ್ಳನೊಬ್ಬ ಪರ್ಸ್‌ ಎಗರಿಸಿದ್ದಾನೆ. ಪರ್ಸ್‌ ಎಗರಿಸಿರುವುದು ಹಿಂದೆ ನಿಂತು ವಿಡಿಯೋ ಮಾಡುತ್ತಿದ್ದ ಮಾಧ್ಯಮದ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದು ಕೈಯಲ್ಲಿ ಕೊಡೆ ಹಿಡಿದುಕೊಂಡಿದ್ದ ವ್ಯಕ್ತಿಯೊಬ್ಬ ಇನ್ನೊಂದು ಕೈಯಲ್ಲಿ ಪರ್ಸ್ ಎಗರಿಸಿ ಅಲ್ಲಿಂದ ಎಸ್ಕೆಪ್ ಆಗುತ್ತಿರುವುದು ಕಂಡುಬಂದಿದೆ.ಆತ ಬಿಜೆಪಿ ಪ್ರತಿಭಟನೆಗೆ ಬಂದ ವ್ಯಕ್ತಿಯ ರೀತಿ ಕಾಣುತ್ತಿಲ್ಲ. ಯಾರೋ ದಾರಿಹೋಕ ವ್ಯಕ್ತಿ ಜನರು ಗುಂಪು ಕೂಡಿದ್ದಾಗ ಪರ್ಸ್ ಕಿತ್ತುಕೊಂಡು ಚಾಕಚಕ್ಯತೆ ಮೆರೆದಿದ್ದಾನೆ. ಪೊಲೀಸ್ ಸಿಬಂದಿ ಕೂಡಲೇ ಅಲ್ಲಿದ್ದ ಮಾಧ್ಯಮದವರ ಬಳಿ ಪರ್ಸ್ ಕಳವಾದ ವಿಚಾರ ಹೇಳಿಕೊಂಡಿದ್ದರು. ನೂರಕ್ಕೂ ಹೆಚ್ಚು ಜನರು ಸೇರಿದ್ದರಿಂದ ಯಾರೆಂದು ಪತ್ತೆ ಮಾಡುವುದು ಸಾಧ್ಯವಾಗದ ಸ್ಥಿತಿಯಿತ್ತು.ಹಣ ಹೆಚ್ಚೇನೂ ಇರಲಿಲ್ಲ. 500 ರೂ. ಆಸುಪಾಸು ಇತ್ತು ಅಷ್ಟೇ. ಪರ್ಸ್ ನಲ್ಲಿ ಡ್ರೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಓಟರ್ ಐಡಿಯಂತಹ ದಾಖಲೆ ಪತ್ರಗಳಿದ್ದವು. ಒಂದೇ ಬಾರಿ ಇವೆಲ್ಲ ಕಳವಾಗಿದ್ದು ತೊಂದರೆ ಆಗಿದೆ. ಬಂದರು ಠಾಣೆಯಲ್ಲಿ ದೂರು ಕೊಡಬೇಕೆಂದಿದ್ದೇನೆ. ಆತ ಪ್ರೊಫೆಶನಲ್ ಕಳ್ಳನೇ ಆಗಿರಬೇಕು ಎಂದು ಪರ್ಸ್‌ ಕಳಕೊಂಡ ಪೊಲೀಸ್‌ ಸಿಬಂದಿಯಲ್ಲಿ ಪ್ರತಿಕ್ರಿಯೆ ಕೇಳಿದಾಗ ಹೆಡ್ ಲೈನ್ ಕರ್ನಾಟಕಕ್ಕೆ ನೋವು ಹೇಳಿಕೊಂಡಿದ್ದಾರೆ. ಮಕ್ಕಳು ಕಳ್ಳ ಪೊಲೀಸ್ ಆಟ ಆಡೋದು ನೋಡಿದ್ದೇವೆ. ಇಲ್ಲಿಯೂ ಕಳ್ಳ ಟಾರ್ಗೆಟ್ ಇಡ್ಕೊಂಡು ಪೊಲೀಸರದ್ದೇ ಪರ್ಸ್ ಎಗರಿಸಿ ಯಾರಿಗೂ ಕಾಣದಂತೆ ಕಾಲ್ಕಿತ್ತಿದ್ದಾನೆ. ಬೇರೆ ಇನ್ಯಾರೆಲ್ಲ ಪರ್ಸ್‌ ಕಳಕೊಂಡಿದ್ದಾರೋ ಗೊತ್ತಿಲ್ಲ.

ಇನ್ನಷ್ಟು ಸುದ್ದಿಗಳು