Wed. Nov 20th, 2024

ಬೆಂಗಳೂರು: ಭ್ರಷ್ಟರಿಗೆ ನಡುಕ ಹುಟ್ಟಿಸಿದ ಲೋಕಾಯುಕ್ತ ದಾಳಿ; ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ – 9 ಜಿಲ್ಲೆ, 56 ಕಡೆ ರೇಡ್​.!!

ಬೆಂಗಳೂರು:(ಜು.11) ಬೆಳ್ಳಂಬೆಳಗ್ಗೆ ರಾಜ್ಯದಲ್ಲಿ ಲೋಕಾಯುಕ್ತ ದಾಳಿ ಮಾಡಿದೆ. ಬೆಂಗಳೂರು ಸೇರಿ ಒಟ್ಟು 9 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಲಾಗಿದೆ. 56 ಕಡೆಗಳಲ್ಲಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆದಿದೆ.

ರಾಜ್ಯಾದ್ಯಂತ ಸುಮಾರು 56 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಬೆಂಗಳೂರು, ಮಂಡ್ಯ , ಚಿತ್ರದುರ್ಗ, ಧಾರವಾಡ, ಬೆಳಗಾವಿ, ದಾವಣಗೆರೆ, ಕೋಲಾರ , ಮೈಸೂರು ಹಾಗೂ ಹಾಸನದ ಎರಡು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳ ತಂಡ, 11 ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಳಿ ಮಾಡಿದ್ದಾರೆ.

11 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ. ಕೋಲಾರ ತಹಶೀಲ್ದಾರ್ ವಿಜಿಣ್ಣ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ. ಅತ್ತ ಹಾಸನದಲ್ಲಿ ಗ್ರೇಡ್-1 ಕಾರ್ಯದರ್ಶಿ ಜಗದೀಶ್ ಮನೆ ಮೇಲೆ ದಾಳಿ ನಡೆದಿದೆ. ದಾವಣಗೆರೆ EE D.H ಉಮೇಶ್, AAEE ಪ್ರಭಾಕರ್ ಮನೆಗಳ ಮೇಲೆ ರೇಡ್ ಆಗಿದೆ. ದಾಳಿಯಲ್ಲಿ ನೂರಕ್ಕೂ ಹೆಚ್ಚು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಮನಗರ: ಜಿಲ್ಲೆಯ ಆರೋಹಳ್ಳಿ ತಹಶೀಲ್ದಾರ್ ವಿಜಿಯಣ್ಣ ಅವರಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ದಾಳಿ ನಡೆದಿದೆ. ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗು ತುಮಕೂರಿನ ತಲಾ ಎರಡು ಸ್ಥಳಗಳು, ‌ರಾಮನಗರದ ಆರೋಹಳ್ಳಿ ಹಾಗೂ ಮಂಡ್ಯದ ಒಂದೆಡೆ ದಾಳಿ ನಡೆಸಲಾಗಿದೆ. ವಿಜಿಯಣ್ಣ ಈ ಮೊದಲು ಕೋಲಾರ ತಹಶೀಲ್ದಾರ್ ಆಗಿದ್ದರು. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ‌ ಪರಿಶೀಲನೆ ನಡೆಯುತ್ತಿದೆ.

ಕಲಬುರಗಿ: ಬಿಬಿಎಂಪಿ ಕೆಂಗೇರಿ ವಿಭಾಗದ ಕಂದಾಯ ಅಧಿಕಾರಿ ಬಸವರಾಜ್ ಮಾಗಿ ಅವರ ಬೆಂಗಳೂರು ಹಾಗು ಕಲಬುರಗಿಯ ಎಂ.ಬಿ.ನಗರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದೆ.

ಬೆಳಗಾವಿ: ಜಿಲ್ಲಾ ಪಂಚಾಯತಿ ಎಇಇ ದುರದುಂಡೇಶ್ವರ ಬನ್ನೂರ ಅವರಿಗೆ ಸೇರಿದ ಸೇರಿದ ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಗೋಕಾಕ, ಹೊನಗಾ, ಹಿಂಡಲಗಾ ಹಾಗೂ ಯಳ್ಳೂರ ಸೇರಿ 4 ಕಡೆ ದಾಳಿ ನಡೆದಿದೆ. ಗೋಕಾಕದ‌ ನಿವಾಸ, ಹೊನಗಾ ಫಾರ್ಮ್ ಹೌಸ್, ಯಳ್ಳೂರು ಮನೆ ಹಿಂಡಲಗಾ ಅಪಾರ್ಟ್‌ಮೆಂಟ್​ಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ನಾಲ್ಕು ತಿಂಗಳ ಹಿಂದಷ್ಟೇ ಲೋಕಾಯುಕ್ತ ಅಧಿಕಾರಿಗಳು ಮಹಾದೇವ ಬನ್ನೂರ ಮೇಲೆ ದಾಳಿ ಮಾಡಿದ್ದರು. ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದರು.

ಮಂಡ್ಯ: ನಗರದ ನಿವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಿವರಾಜು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ‌. ಎಸ್‌ಪಿ ಸುರೇಶ್ ಬಾಬು ನೇತೃತ್ವದ ತಂಡ ನಗರ ಸೇರಿದಂತೆ ಜಿಲ್ಲೆಯ ನಾಗಮಂಗಲ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಮನೆ, ಫಾರ್ಮ್‌ಹೌಸ್, ಕ್ರಷರ್ ಹಾಗೂ ಮೈಸೂರಿನ ಶಿವರಾಜು ಅಳಿಯನ ಮನೆ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸುತ್ತಿದೆ.

ಮೈಸೂರು: ನಗರದ ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆ‌.ಸಿ.ಬಡಾವಣೆಯಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಕೆ.ಮಹೇಶ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮಹೇಶ್ ಕಾರ್ಯ ನಿರ್ವಹಿಸುವ ಗೋಕುಲಂನಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮೇಲೆ ದಾಳಿ ಮಾಡಿ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ದಾವಣಗೆರೆ: ನಗರದಲ್ಲಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಹೆಚ್.ಉಮೇಶ್ ಹಾಗೂ ಎಇಇ ಬೆಸ್ಕಾಂ ಜಾಗೃತದಳ ಇಂಜಿನಿಯರ್ ಎಂ.ಎಸ್.ಪ್ರಭಾಕರ್ ಮನೆ ಹಾಗೂ ಕಚೇರಿಗಳು ಸೇರಿ ಒಟ್ಟು 6 ಕಡೆಗಳಲ್ಲಿ ಲೋಕಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿಗೊಳಗಾದ ಅಧಿಕಾರಿಗಳ ವಿವರ:
ಬಸವರಾಜ್ ಮಾಗಿ – ಕೆಂಗೇರಿ ಬಿಬಿಎಂಪಿ ರೆವಿನ್ಯೂ ಆಫೀಸರ್, ನಿವೃತ್ತ ಕಾರ್ಯಪಾಲಕ ಅಭಿಯಂತರ.
ಶಿವರಾಜ್ ಎಸ್ – ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗ, ಮಂಡ್ಯ.
ಶೇಖರ್ ಗೌಡ – ಪ್ರಾಜೆಕ್ಟ್ ಮ್ಯಾನೇಜರ್, ಧಾರವಾಡ.
ದುರದುಂಡೇಶ್ವರ ಬನ್ನೂರ – ಅಸಿಸ್ಟೆಂಟ್‌ ಇಂಜಿನಿಯರ್, ಬೆಳಗಾವಿ.
ಡಿ.ಹೆಚ್.ಉಮೇಶ್ – ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ.
ಎಂ.ಎಸ್.ಪ್ರಭಾಕರ್ – ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ದಾವಣಗೆರೆ
ವಿಜಿಯಣ್ಣ – ಆರೋಹಳ್ಳಿ ತಹಶೀಲ್ದಾರ್.
ಮಹೇಶ್ ಕೆ – ಸೂಪರಿಂಟೆಂಡೆಂಟ್ ಇಂಜಿನಿಯರ್.
ಎಂ.ಎನ್.ಜಗದೀಶ್ – ಗ್ರೇಡ್-1 ಸೆಕ್ರೆಟರಿ, ಹಾಸನ.
ಕೆ.ಜಿ.ಜಗದೀಶ್ – ಸೂಪರಿಂಟೆಂಡೆಂಟ್ ಇಂಜಿನಿಯರ್.

Leave a Reply

Your email address will not be published. Required fields are marked *