ಉಳ್ಳಾಲ :(ಜು.11) ಡ್ಯೂಟಿ ಹಾಕಲು ಕಿರಿಯ ಪೊಲೀಸರಿಂದ 18,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ, ಕೆಎಸ್ ಆರ್ ಪಿ ಇನ್ಸ್ಪೆಕ್ಟರ್ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಎಂಬಲ್ಲಿ ನಡೆದಿದೆ. ಲಂಚ ಸ್ವೀಕರಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆ ನಿವಾಸಿ ಕೆಎಸ್‌ಆರ್‌ಪಿ ಇನ್ಸ್ಪೆಕ್ಟರ್ ಮೊಹಮ್ಮದ್ ಆರೀಸ್ ಲೋಕಾಯುಕ್ತ ಕೈಗೆ ರೆಡ್ ಹ್ಯಾಂಡಾಗಿ ಸಿಲುಕಿದ್ದಾರೆ.
ಮಹಮ್ಮದ್ ಆರೀಸ್ ಎಂಬುವವರು ಕರ್ತವ್ಯ ನಿರ್ವಹಿಸಬೇಕಾದರೆ ತನಗೆ 20,000 ರೂ. ಗಳನ್ನು ನೀಡಬೇಕೆಂದು ಹಾಗೂ ಪ್ರತಿ ತಿಂಗಳು ತನಗೆ 6,000 ರೂ.ಯಂತೆ ಹಣ ನೀಡುವಂತೆ ಕೇಳಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ. ಈಗಾಗಲೇ ದೂರುದಾರರು ಮಹಮ್ಮದ್ ಆರೀಸ್ ಗೆ ಪ್ರತಿ ತಿಂಗಳು 6,000 ರೂ. ಯನ್ನು ಲಂಚವನ್ನಾಗಿ ನೀಡುತ್ತಾ ಬಂದಿದ್ದಾರೆ. ಈವರೆಗೆ ಒಟ್ಟು 50,000 ರೂಪಾಯಿ ಹಣವನ್ನು ಮಹಮ್ಮದ್ ಆರೀಸ್ ನೀಡಿದ್ದಾರೆ.
ದೂರುದಾರರು ತಮ್ಮ ತಂದೆಯ ಅನಾರೋಗ್ಯದ ನಿಮಿತ್ತ 2024ರ ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗಿನ 3 ತಿಂಗಳ ಬಾಪ್ತು ರೂ 18,000 ರೂ. ಲಂಚವಾಗಿ ಕೊಡಬೇಕಾದ ಹಣವನ್ನು ಮಹಮ್ಮದ್ ಆರೀಸ್‌ರವರಿಗೆ ಕೊಡಲು ದೂರುದಾರರಿಗೆ ಸಾಧ್ಯವಾಗಿರುವುದಿಲ್ಲ. ದೂರುದಾರರು 3 ತಿಂಗಳ ಬಾಪ್ತು 18,000 ರೂ. ಹಣವನ್ನು ನೀಡಿಲ್ಲ ಎಂಬುದಾಗಿ ಪ್ರತಿ ದಿನಾಲೂ ದೂರುದಾರರಿಗೆ ಕರೆ ಮಾಡಿ ನೀಡಲು ಬಾಕಿ ಇರುವುದನ್ನು ನೀಡು, ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂಬುದಾಗಿ ದೂರುದಾರರಿಗೆ ತಿಳಿಸಿ 18,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಇನ್ನು ಇಂದು ಮಹಮ್ಮದ್ ಆರೀಸ್ ದೂರುದಾರರಿಂದ 18,000 ಲಂಚದ ಹಣವನ್ನು ಸ್ವೀಕರಿಸುವಾಗ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಇನ್ನೂ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು ಬಳಿಕ ಮಂಗಳೂರು ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಹಾಜರುಪಡಿಸಲಿದ್ದಾರೆ.
ಮಂಗಳೂರು ಲೋಕಾಯುಕ್ತ ಎಸ್ಪಿ ಎಂ.ಎ.ನಟರಾಜ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್,ಚಂದ್ರಶೇಖರ್ ಸಿ.ಎಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.