ರಾಣೆಬೆನ್ನೂರು:(ಜು.14) ಬೈಕ್ ಕೊಡಿಸಿ ಎಂದು ಪಾಲಕರ ಜತೆಗೆ ಹಠ ಮಾಡಿದ್ದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇದನ್ನು ಕಂಡ ತಾಯಿಯೂ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕರೂರ ಗ್ರಾಮದಲ್ಲಿ ಶನಿವಾರ ನಡೆದಿದೆ.
ಧನರಾಜ ಸುರೇಶ ನಾಯಕ (18) ಹಾಗೂ ಆತನ ತಾಯಿ ಭಾಗ್ಯಮ್ಮ ನಾಯಕ (43) ಆತ್ಮಹತ್ಯೆ ಮಾಡಿಕೊಂಡವರು.
ಇದನ್ನೂ ಓದಿ:https://uplustv.com/2024/07/14/karkala-ಪತ್ರಿಕಾ-ಮಾಸಾಚಾರಣೆ
ಹರಿಹರದಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ ಧನರಾಜ ಬೈಕ್ ಖರೀದಿಗೆ ಹಣ ಬೇಕೆಂದು ಹೆತ್ತವರ ಬಳಿ ಜಗಳ ತೆಗೆದಿದ್ದ, ಬೈಕ್ ಕೊಡಿಸುವ ವಿಚಾರಕ್ಕೆ ತಾಯಿ ಹಾಗೂ ಮಗನ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ತಾರಕಕ್ಕೇರಿದಾಗ ಮಗನನ್ನು ಹೆದರಿಸಲೆಂದು ನಾನು ಸಾಯುತ್ತೇನೆ ಎಂದ ಭಾಗ್ಯಮ್ಮ ಪಕ್ಕದ ಮನೆಗೆ ಹೋಗಿದ್ದರು. ಈ ಸಮಯದಲ್ಲಿ ಪುತ್ರ ಧನರಾಜ್ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೂಲಿ ಮಾಡಿಕೊಂಡಿರುವ ತಂದೆ ಸುರೇಶ, ಹೇಗಾದರೂ ಮಾಡಿ ಕೊಡಿಸುವೆ ಎಂದು ಹೇಳಿ ಕೆಲಸಕ್ಕೆ ಹೋಗಿದ್ದರು.
ತಾಯಿ ಮನೆಗೆ ಬರುತ್ತಿದ್ದಂತೆ ಮಗನ ಸ್ಥಿತಿ ಕಂಡು ದುಃಖಿತರಾಗಿ ಕರೂರ ರೈಲು ನಿಲ್ದಾಣ ಬಳಿ ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2 ವರ್ಷದ ಹಿಂದೆ ಸುರೇಶ ಅವರ 14 ವರ್ಷದ ಪುತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈಗ ಪತ್ನಿ, ಪುತ್ರನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗುವಂತಾಗಿದೆ.