ಬಾಗಲಕೋಟೆ :(ಜು.17) ದುಷ್ಕರ್ಮಿಗಳ ಗ್ಯಾಂಗ್ವೊಂದು ಹೊಲದಲ್ಲಿದ್ದ ಶೆಡ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪರಿಣಾಮ ಇಬ್ಬರು ಮಹಿಳೆಯರು ಸಜೀವವಾಗಿ ದಹನಗೊಂಡಿದ್ದರು.
ಬಾಗಲಕೋಟೆ ಜಿಲ್ಲೆಯ ಬೆಳಗಲಿ ವ್ಯಾಪ್ತಿಯ ಹೊಲವೊಂದರಲ್ಲಿ ನಡೆದ ಈ ಘಟನೆಯಲ್ಲಿ ಪಿಎಸ್ಐ ಅಧಿಕಾರಿ ಆಗಬೇಕು ಎಂದುಕೊಂಡಿದ್ದ ಕನಸೊಂದು ಬೆಂಕಿಯಲ್ಲೇ ನಶಿಸಿ ಹೋಗಿದೆ.
ಮಹಾಲಿಂಗಪೂರ ಮೂಲದ ದಸ್ತಗಿರಿ ಸಾಬ ಮೌಲಾಸಾಬ್ ಪೆಂಡಾರಿ ಎಂಬುವರು ಹೊಲದಲ್ಲಿ ಶೆಡ್ ನಿರ್ಮಿಸಿಕೊಂಡು ಕುಟುಂಬದ ಜೊತೆ ವಾಸವಿದ್ದರು. ಇವರ ಮಗಳು ಸಭಾನಾ ಪೆಂಡಾರಿ (26) ಓದಿನಲ್ಲಿ ಮುಂದೆ ಇದ್ದರು. ಮುಂದಿನ ಬದುಕಿಗಾಗಿ ಸಾಕಷ್ಟು ಕನಸು ಕಂಡಿದ್ದರು. ಅದಕ್ಕಾಗಿ ಒಂದೊಂದೆ ಮೆಟ್ಟಿಲು ಏರುತ್ತ ಇಲ್ಲಿವರೆಗೆ ಬಂದಿದ್ದರು.
ಇನ್ನೊಂದು ಮೆಟ್ಟಿಲು ಏರಿದ್ದರೇ ಆ ಪಿಎಸ್ಐ ಕನಸು ಕೈಗೂಡುತ್ತಿತ್ತು. ಹೀಗಾಗಿಯೇ ಸಭಾನಾ ಮುಧೋಳದಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತ ಪಿಎಸ್ಐ ಪರೀಕ್ಷೆ ಓದಿಗೆ ಹೆಚ್ಚಿನ ಗಮನ ಕೊಟ್ಟಿದ್ದರು.
ಇತ್ತೀಚೆಗೆ ನಡೆದಿದ್ದ ಪಿಎಸ್ಐ ಪರೀಕ್ಷೆಗೂ ಹಾಜರಾಗಿದ್ದರು. ಕಳೆದ ಒಂದು ವಾರದ ಹಿಂದೆಯಷ್ಟೇ ಮನೆಗೆ ಬಂದಿದ್ದರು.
ಪಿಎಸ್ಐ ಪರೀಕ್ಷೆ ಬರೆದಿದ್ದರಿಂದ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಾಗ ದುಷ್ಕರ್ಮಿಗಳು ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಗೆ ಬಿದ್ದ ಬೆಂಕಿಯ ಕೆನ್ನಾಲಿಗೆಗೆ ಸಭಾನಾ ಸಜೀವವಾಗಿ ದಹನಗೊಂಡಿದ್ದಾರೆ. ಮನೆಗೆ ಹಚ್ಚಿದಾಗ ಒಟ್ಟು 5 ಮಂದಿ ಒಳಗೆ ಮಲಗಿದ್ದರು.
ಇದರಲ್ಲಿ ಸಭಾನಾ ಹಾಗೂ 60 ವರ್ಷದ ಜಯನಬಿ ಪೆಂಡಾರಿ ಬಲಿಯಾಗಿದ್ದಾರೆ. ಉಳಿದ ಮೂವರು ಸ್ವಲ್ಪದರಲ್ಲೇ ಜೀವ ಉಳಿಸಿಕೊಂಡಿದ್ದಾರೆ. ಪಿಎಸ್ಐ ಆಗಬೇಕೆಂದು ನೂರಾರು ಕನಸುಗಳ ಜೊತೆ ಸಭಾನಾ ಕೂಡ ಅಗ್ನಿಯಲ್ಲೇ ಸುಟ್ಟು ಹೋಗಿದ್ದಾರೆ.
ಇನ್ನು ಘಟನೆಯಲ್ಲಿ ಸ್ಕೂಟಿ, ಸ್ಕಾರ್ಪಿಯೋ ಕಾರು, ಬುಲೆಟ್ ಬೈಕ್ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟು ಹೋಗಿವೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿಯಿಂದ ಎಫ್ಎಸ್ಎಲ್ ತಂಡವನ್ನ ಕರೆಸಲಾಗಿದ್ದು ಸ್ಥಳದಲ್ಲಿದ್ದ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹ ಮಾಡುತ್ತಿದ್ದಾರೆ.