Wed. Nov 20th, 2024

Bengaluru: No entry to GT Mall for a farmer wearing panche – Minister Bhairati Suresh said to lock GT Mall for 7 days!!

ಬೆಂಗಳೂರು:(ಜು.18) ಹಾವೇರಿ ಮೂಲದ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತ ಸಾಂಪ್ರದಾಯಿಕ ಪಂಚೆ ಧರಿಸಿ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡದೆ ಅವಮಾನಿಸಿದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಜಿ ಟಿ ಮಾಲ್ ಗೆ 7 ದಿನ ಬೀಗ ಬಿದ್ದಿದೆ.

ಇಂದು ಬೆಳಗ್ಗೆ ಸದನದಲ್ಲಿ ಜಿ.ಟಿ ಮಾಲ್ ನಲ್ಲಿ ರೈತನಿಗೆ ಅವಮಾನ ಆದ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಜಿಟಿ ಮಾಲ್ ಒಳಗೆ ಪಂಚೆ ಉಟ್ಟ ರೈತನನ್ನ ಬಿಡದೆ ಅವಮಾನಿಸಿದ ವಿಚಾರವಾಗಿ ಸ್ಪೀಕರ್ ಯು.ಟಿ.ಖಾದರ್ ಗರಂ ಆದರು. ಅವನು ಎಷ್ಟೇ ದೊಡ್ಡವನು ಇರಲಿ, ಅವಮಾನ ಮಾಡಿದ್ದನ್ನು ಖಂಡಿಸಬೇಕು. ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದರು.

ಎಲ್ಲ ಮಾಲ್ ಗಳಿಗೂ ಒಂದೇ ರೂಲ್ಸ್ ಮಾಡಬೇಕು. ಪಂಚೆ ನಮ್ಮ ಸಂಸ್ಕೃತಿ ಎಂದ ಸ್ಪೀಕರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಲಕ್ಷ್ಮಣ ಸವದಿ, ಸರ್ಕಾರದಿಂದ ಒಂದು ಆದೇಶ ಹೊರಡಿಸಲಿ, ಆ ಮಾಲ್ ಗೆ ವಾರಗಳ ಕಾಲ ಪವರ್ ಕಟ್ ಮಾಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸದಸ್ಯ ಅಶೋಕ್ ಪಟ್ಟಣ ಮಾತನಾಡಿ, ರಾಜ್ಯದ ಎಲ್ಲ ಕ್ಲಬ್ ಗಳು, ಮಾಲ್ ಗಳಲ್ಲಿ ಒಂದೇ ರೂಲ್ಸ್ ತರಬೇಕು. ಪಂಚೆ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸುವುವರಿಗೆ ಎಂಟ್ರಿ ಕೊಡಬೇಕು ಎಂದರು.

ಇದನ್ನೂ ಓದಿ: https://uplustv.com/2024/07/18/uttara-kannada-shiruru-hill-collapse-case-avantikas-dead-body-found/

ದೇವೇಗೌಡರು, ಸಿದ್ದರಾಮಯ್ಯ ಅವರು ಪಂಚೆ ಉಡ್ತಾರೆ, ಅವರು ಕ್ಲಬ್ ಗಳಿಗೆ ಏನಾದ್ರೂ ಹೋದರೆ ಬಿಡ್ತಾರೆ. ಆದರೆ, ಬೇರೆಯವರಿಗೆ ಆ ರೂಲ್ಸ್ ಇಲ್ವಾ ಎಂದು ಸಚಿವ ಭೈರತಿ ಸುರೇಶ್ ಪ್ರಶ್ನಿಸಿದರು. ಅಲ್ಲದೆ, ಸಚಿವ ಭೈರತಿ ಸುರೇಶ್, 7 ದಿನಗಳ ಕಾಲ‌ ಮಾಲ್ ಮುಚ್ಚಿಸುತ್ತೇವೆ. ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ, ಸರ್ಕಾರದ ಕ್ರಮ ಕೈಗೊಳ್ಳಬಹುದು ಎಂದರು.

ರೈತ ಸಮುದಾಯಕ್ಕೆ, ಸಂಪ್ರದಾಯಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ. ಮುಂದೆ ಇಂತಹ ಘಟನೆ ನಡೆಯಬಾರದು ಎಂಬುದಕ್ಕೆ ಈ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಸಚಿವ ಭೈರತಿ ಸುರೇಶ್ ಹೇಳಿದರು.

ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಮಾಲ್ ನ ಮಾಲೀಕರು ಒಳಗೆ ಬಿಡದ ವಾಚ್ ಮ್ಯಾನ್ ನನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ, ರೈತ ಫಕೀರಪ್ಪನನ್ನು ಕರೆದು ಮಾಲ್ ನಲ್ಲಿ ಸನ್ಮಾನಿಸಿದ್ದಾರೆ. ಮಾಲ್​ ಇನ್​​ಚಾರ್ಜ್ ಸುರೇಶ್​​​ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.

Leave a Reply

Your email address will not be published. Required fields are marked *