ಉಳ್ಳಾಲ:(ಜು.27) ಮಾಡೂರು ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕಾರ್ಮಿಕರಿಬ್ಬರು ಇರಿಸಿದ್ದ ಬಟ್ಟೆಗಳಿಂದ ಪ್ಯಾಂಟ್ ಧರಿಸಿದ್ದ ಅಪರಿಚಿತ ಕಳ್ಳನೋರ್ವ ಹಣ ಕಳವುಗೈದ ಘಟನೆ ಇಂದು ಸಂಜೆ ವೇಳೆ ಸಂಭವಿಸಿದ್ದು, ಕಳ್ಳನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾಡೂರು ನಿವಾಸಿ ಶಶಿ ಎಂಬವರಿಗೆ ಸೇರಿದ ಕಟ್ಟಡದಿಂದ ಕಳವು ನಡೆದಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಇಬ್ಬರು ಕಾರ್ಮಿಕರು ಟೈಲ್ಸ್ ಹಾಕುವ ಕೆಲಸವನ್ನು ನಿರ್ವಹಿಸುತ್ತಿದ್ದರು.
ಸಂಜೆ 4.30 ಸುಮಾರಿಗೆ ಗಟ್ಟಿಮುಟ್ಟಾದ ಪ್ಯಾಂಟ್ ಧರಿಸಿದ 30 ರಿಂದ 35ರ ಹರೆಯದ ವ್ಯಕ್ತಿ ಕಟ್ಟಡದೊಳಕ್ಕೆ ತೆರಳಿದ್ದಾನೆ. ಕಾರ್ಮಿಕರಿಬ್ಬರು ಕೆಲಸ ಮಾಡುತ್ತಿದ್ದ ಕೋಣೆಯನ್ನು ಬಿಟ್ಟು ಬೇರೆ ಕೋಣೆಗೆ ತೆರಳಿ ಅಲ್ಲಿ ಇಬ್ಬರು ಬಟ್ಟೆಗಳಲ್ಲಿ ಇರಿಸಿದ್ದ ನಗದು ಕಳವು ನಡೆಸಿದ್ದಾನೆ.
ಇಬ್ಬರಲ್ಲಿದ್ದ ಸುಮಾರು ರೂ.2,000 ದಷ್ಟು ನಗದು ಕಳವು ನಡೆಸಿದ್ದಾನೆ. ಸಂಜೆ ವೇಳೆ ಇಬ್ಬರು ಮನೆಗೆ ತೆರಳಲು ಕಿಸೆಗೆ ಕೈ ಹಾಕುವಾಗ ಇಬ್ಬರ ಜೇಬುಗಳು ಖಾಲಿಯಾಗಿತ್ತು.
ಬಸ್ಸಿಗೆ ತೆರಳಲು ಹಣ ಇರದೇ ಪೇಚಿಗೆ ಸಿಲುಕಿದ ಇಬ್ಬರು ಕಾರ್ಮಿಕರು ಕಟ್ಟಡದ ಮಾಲೀಕರಲ್ಲಿ ವಿಚಾರ ತಿಳಿಸಿದ್ದಾರೆ.
ಅವರು ಸಿಸಿಟಿವಿ ಮೂಲಕ ಪರಿಶೀಲಿಸಿದಾಗ ಅಪರಿಚಿತನೋರ್ವ ಕಟ್ಟಡದ ಒಳಗಿನಿಂದ ಹೊರಹೋಗಿ, ದೇರಳಕಟ್ಟೆ ಕಡೆಗೆ ಹೋಗುವ ರಿಕ್ಷಾವನ್ನು ಹತ್ತಿರುವುದು ಬೆಳಕಿಗೆ ಬಂದಿದೆ.
ಎರಡು ದಿನಗಳ ಹಿಂದೆಯೂ ಇದೇ ರೀತಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಕಾರ್ಮಿಕರ ಸುಮಾರು ರೂ.8,000 ನಗದು ಕಳವು ನಡೆಸಲಾಗಿತ್ತು.
ಇದನ್ನೂ ಓದಿ: https://uplustv.com/2024/07/27/today-the-people-from-this-zodiac-sign-may-be-defamed/
ಈ ಕುರಿತು ವೀಡಿಯೋ ಹಾಗೂ ಮಾಡೂರು-ಕೋಟೆಕಾರಿನಲ್ಲಿ ಪ್ಯಾಂಟ್ ಗ್ಯಾಂಗ್ ಸಕ್ರಿಯ ಅನ್ನುವ ಸಾಮಾಜಿಕ ಜಾಲತಾಣದ ಸಂದೇಶ ಸ್ಥಳೀಯರನ್ನು ಆತಂಕಕ್ಕೆ ಒಳಪಡಿಸಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.