ಕಾರ್ಕಳ :(ಜು.28) ಪುಲ್ಕೇರಿಯ ಫ್ಲಾಟ್ ಒಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಜು.27ರಂದು ರಾತ್ರಿ ಸಂಭವಿಸಿದೆ. ಫುಡ್ ಬಾಸ್ಕೆಟ್ ಮುಂಭಾಗದಲ್ಲಿರುವ ಕಟ್ಟಡದ ಉದಯ ಕೋಟ್ಯಾನ್ ಎಂಬವರ ಫ್ಲಾಟ್‌ನಲ್ಲಿ ರಾತ್ರಿ ಸುಮಾರು 11.30ರ ವೇಳೆಗೆ ನಾಲ್ಕನೇ ಮಹಡಿಯ ಹೊರಭಾಗದಲ್ಲಿ ಇಟ್ಟಿದ ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿ ಬೆಂಕಿ ಆವರಿಸಿಕೊಂಡಿದೆ.
ಸಿಲಿಂಡರ್ ಸಮೀಪ ದೀಪ ಇದ್ದದ್ದು ಸ್ಪೋಟಕ್ಕೆ ಕಾರಣ ಎನ್ನಲಾಗಿದೆ. ಆದರೆ ಸ್ಫೋಟದ ನಿಖರ ಕಾರಣ ಇನ್ನಷ್ಟೆ ತಿಳಿದು ಬರಬೇಕಾಗಿದೆ.
ನಿನ್ನೆಯಷ್ಟೇ ಬಂದಿದ್ದ ಸಿಲಿಂಡರನ್ನು ಮನೆಯ ಹೊರಗೆ ಇಟ್ಟಿದ್ದರು. ಈ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ಬಿರುಸಿಗೆ ಹಲವು ಫ್ಲಾಟ್‌ಗಳ ಕಿಟಿಕಿ ಗಾಜುಗಳು ಒಡೆದು ರಸ್ತೆಗೆ ಬಿದ್ದಿವೆ. ಸಿಲಿಂಡರ್‌ನಲ್ಲಿ ಸೋರಿಕೆ ಇದ್ದ ಕಾರಣ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು , ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್ ಅವಘಡದಿಂದ ಯಾವುದೇ ಪ್ರಾಣಾಪಾಯವಾಗಿಲ್ಲ, ಮಹಿಳೆಯೋರ್ವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಂಕಿಯಿಂದಾಗಿ ಉಳಿದ ಮಹಡಿಗಳಿಗೂ ಹೊಗೆ ಆವರಿಸಿಕೊಂಡಿದ್ದು ಕೆಲವು ಪೀಠೋಪಕರಣಗಳಿಗೆ ಹಾನಿಯಾಗಿದೆ.
ಅಗ್ನಿಶಾಮಕ ದಳದ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ನೇತೃತ್ವದದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದ್ದು, ಸಿಬ್ಬಂದಿ ಅಚ್ಯುತ್ ಕರ್ಕೇರ, ಸುರೇಶ್ ಕುಮಾರ್, ಜಯ ಮೂಲ್ಯ, ನಿತ್ಯಾನಂದ, ರವಿಚಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.