ಬೆಳ್ತಂಗಡಿ:(ಜು.29) ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಉಜಿರೆ ಹಳೆಪೇಟೆ ಸಹಿಪ್ರಾ ಶಾಲೆಗೆ ಗ್ರೀನ್ ಬೋರ್ಡ್ ಗಳನ್ನು ಸೋಮವಾರ ಹಸ್ತಾಂತರಿಸಲಾಯಿತು.
ಇದನ್ನೂ ಓದಿ: https://uplustv.com/2024/07/29/bengaluru-ಧರ್ಮಸ್ಥಳ-ಕುಕ್ಕೆ-ಸುಬ್ರಹ್ಮಣ್ಯಕ್ಕೆ-ಹೊರಟವರಿಗೆ-ಶಾಕ್
ಗ್ರೀನ್ ಬೋರ್ಡ್ ಹಸ್ತಾಂತರಿಸಿ ಮಾತನಾಡಿದ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ “ಉತ್ತಮ ವಾತಾವರಣ ಇರುವ ಶಾಲೆಗಳಲ್ಲಿ ಮಕ್ಕಳ ಕಲಿಕೆಯ ಉತ್ಸಾಹ ಹೆಚ್ಚಿರುತ್ತದೆ. ಇಂದಿನ ದಿನಗಳಲ್ಲಿ ಅಂಕಗಳೇ ಮಾನದಂಡವಲ್ಲ. ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ತಕ್ಕ ಶಿಕ್ಷಣ ನೀಡಿ ಅವರ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿದೆ” ಎಂದರು.
ಶಾಲೆಯ ಅಭಿವೃದ್ಧಿಗೆ ಮುತುವರ್ಜಿ ವಹಿಸಿದ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ ಕುಮಾರ್ ಮಾತನಾಡಿ “ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಪೋಷಕರ ಪಾತ್ರವು ಮಹತ್ವದ್ದು. ಪೋಷಕರು ಶಾಲೆಗಳಿಗೆ ಆಗಾಗ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳಿಗೆ ಸ್ಪಂದಿಸಬೇಕು. ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಕೈಗಳು ಒಟ್ಟಾದರೆ ತ್ವರಿತ ಪ್ರಗತಿ ಸಾಧ್ಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಲೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಯೋಜನೆ ರೂಪಿಸಲಾಗಿದೆ” ಎಂದರು.
ಇಲಾಖೆಯ ವತಿಯಿಂದ ಮಕ್ಕಳಿಗೆ ಶೂ-ಸಾಕ್ಸ್ ವಿತರಿಸಿ ಮಾತನಾಡಿದ ಬೆಳ್ತಂಗಡಿ ಬಿಇಒ ತಾರಕೇಸರಿ “ಶಾಲಾ ಚಟುವಟಿಕೆಗಳಿಗೆ ಗ್ರೀನ್ ಬೋರ್ಡ್ ಗಳು ಅತ್ಯಗತ್ಯವಾಗಿದ್ದು ತಾಲೂಕಿನ 179 ಸರಕಾರಿ ಶಾಲೆಗಳ ಪೈಕಿ ಬೆರಳೆಣಿಕೆಯ ಶಾಲೆಗಳಲ್ಲಿ ಮಾತ್ರ ಈ ಸೌಲಭ್ಯವಿದೆ. ಮಕ್ಕಳಿಗೆ ಸಂಸ್ಕೃತಿಯೊಂದಿಗೆ ವಿದ್ಯೆ ನೀಡಬೇಕು. ಉತ್ತಮ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಣ ಮಕ್ಕಳ ಶಿಕ್ಷಣಕ್ಕೆ ಅಡಿಪಾಯ ಹಾಕುವುದರ ಜತೆ ಪ್ರೌಢಶಾಲೆಗಳಲ್ಲಿ ಹೆಚ್ಚಿನ ಫಲಿತಾಂಶಕ್ಕೆ ಕಾರಣವಾಗುತ್ತದೆ” ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾಕಿರಣ ಕಾರಂತ ಶುಭ ಹಾರೈಸಿದರು.
ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರತಿ, ಮುಖ್ಯ ಶಿಕ್ಷಕಿ ಸಾವಿತ್ರಿ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ ರಾವ್, ಮಾಜಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಜತೆ ಕಾರ್ಯದರ್ಶಿ ಮನೋಹರ ಬಳಂಜ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತರ ಸಂಘದ ಉಪಾಧ್ಯಕ್ಷ ಶಿಬಿ ಧರ್ಮಸ್ಥಳ, ಖಜಾಂಚಿ ಪುಷ್ಪರಾಜ ಶೆಟ್ಟಿ, ಸದಸ್ಯರಾದ ಬಿ.ಎಸ್. ಕುಲಾಲ್, ಅರವಿಂದ ಹೆಬ್ಬಾರ್, ಸಂತೋಷ್ ಕೋಟ್ಯಾನ್, ಅಚುಶ್ರೀ ಬಾಂಗೇರು, ತುಕಾರಾಂ ಬಿ. ಭಾಗವಹಿಸಿದ್ದರು.