ಮಂಗಳೂರು: (ಜು.31) ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ, ಬಸ್ಸು ಚಾಲಕ ಹಾಗೂ ನಿರ್ವಾಹಕ ಬಸ್ಸನ್ನು ಆಂಬುಲೆನ್ಸ್ ವೇಗದಲ್ಲಿ ಆಸ್ಪತ್ರೆಗೆ ಕೊಂಡೊಯ್ದು, ವಿದ್ಯಾರ್ಥಿನಿಗೆ ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: 🔴ಬೆಳ್ತಂಗಡಿ: ಬಿಜೆಪಿ ರಾಜ್ಯ ಯುವಮೋರ್ಚಾ ಘಟಕದ ವತಿಯಿಂದ ಪೂರ್ವಭಾವಿ ಸಮಾಲೋಚನಾ ಸಭೆ
ಮಂಗಳೂರಿನಲ್ಲಿ ಮಂಗಳವಾರ ನಡೆದ ಈ ಘಟನೆಯಲ್ಲಿ ಸಮಯ ಪ್ರಜ್ಞೆ ತೋರಿದ ಚಾಲಕ ಹಾಗೂ ನಿರ್ವಾಹಕನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ರೂಟ್ ನಂ.13 ಎಫ್‌ನ ಕೃಷ್ಣ ಪ್ರಸಾದ್ ಬಸ್ಸಿನಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಯಾಣಿಸುತ್ತಿದ್ದಾಗ ಆಕೆಗೆ ಹಠಾತ್ ಎದೆ ನೋವು ಕಾಣಿಸಿದೆ.
ಹೃದಯಾಘಾತವಾಗುವ ಸಾಧ್ಯತೆಯನ್ನು ಮನಗಂಡ ಚಾಲಕ ಗಜೇಂದ್ರ ಕುಮಾರ್ ಮತ್ತು ನಿರ್ವಾಹಕರಾದ ಮಹೇಶ್ ಪೂಜಾರಿ ಮತ್ತು ಸುರೇಶ್
ಇತರ ಪ್ರಯಾಣಿಕರೊಂದಿಗೆ ಬಸ್ಸನ್ನು ಆಂಬುಲೆನ್ಸ್ ಮಾದರಿಯಲ್ಲಿ ಸೈರನ್ ಹಾಕಿಕೊಂಡು 6 ಕಿ.ಮೀ ದೂರ ಕೇವಲ 6 ನಿಮಿಷದಲ್ಲಿ ಆಸ್ಪತ್ರೆಗೆ ತಲುಪಿಸಿ, ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿನಿಗೆ ನಗರದ ಕಂಕನಾಡಿ ಆಸ್ಪತ್ರೆಯಲ್ಲಿ ತಕ್ಷಣ ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಾಲಕ, ನಿರ್ವಾಹಕರ ಸಮಯ ಪ್ರಜ್ಞೆ ಹಾಗೂ ಜನಪರ ಕಾಳಜಿ ಬಗ್ಗೆ ಜಿಲ್ಲಾ ಖಾಸಗಿ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಅಭಿನಂದಿಸಿದ್ದಾರೆ.