Wed. Nov 20th, 2024

Wayanad Incident : ಚೀರಾಡಿ ಕುಟುಂಬವನ್ನು ಕಾಪಾಡಿದ ಹಸು !!

ಚಾಮರಾಜನಗರ(ಜು.31): ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತಕ್ಕೂ ಮುನ್ನವೇ ಹಸುವೊಂದು ಕೂಗುವ ಮೂಲಕ ಚಾಮರಾಜನಗರದ ಕುಟುಂಬವನ್ನು ಅಪಾಯದಿಂದ ಕಾಪಾಡಿದೆ ಎಂದು ಮಾಹಿತಿ ಬಂದಿದೆ.

ಇದನ್ನೂ ಓದಿ; 🚌ಮಂಗಳೂರು: ಮಳೆ ನೀರಿನಲ್ಲೇ ಬಸ್ ಚಲಾಯಿಸಿ ಎಡವಟ್ಟು ಮಾಡಿಕೊಂಡ KSRTC ಬಸ್ ಡ್ರೈವರ್

ಚೂರಲ್ ಮಲೆಯಲ್ಲಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬುವವರು ದುರಂತದಿಂದ ಪಾರಾಗಿದ್ದು, ಚಾಮರಾಜನಗರಕ್ಕೆ (ಮಾವನ ಮನೆಗೆ) ಸುರಕ್ಷಿತವಾಗಿ ಬಂದಿದ್ದಾರೆ.

ವಿನೋದ್ ಪತ್ನಿ ಬಾಣಂತಿಯಾದ ಕಾರಣ ಪ್ರವಿದಾ, ಅತ್ತೆ ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಎಂಬುವವರು ಮೆಪಾಡಿಯಲ್ಲಿದ್ದರು. ವಿನೋದ್ ಮತ್ತು ನಾಲ್ವರು ಚೂರಲ್ ಮಲೆಯಲ್ಲಿದ್ದರು‌. ಚೂರಲ್ ಮಲೆಗೂ, ಮೆಪಾಡಿಗೂ 6 ಕಿ.ಮೀ. ದೂರದಲ್ಲಿದೆ.

ಚೂರಲ್ ಮಲೆಯಲ್ಲಿ ವಿನೋದ್ ಕುಟುಂಬ ನಿದ್ರಿಸುತ್ತಿದ್ದಾಗ ಕೊಟ್ಟಿಗೆಯಲ್ಲಿದ್ದ ಹಸು ಚೀರಾಡಿದೆ. ಕೂಡಲೇ ಎಚ್ಚೆತ್ತ ವಿನೋದ್, ಕೊಟ್ಟಿಗೆಗೆ ತೆರಳಿ ನೋಡಿದಾಗ ನೀರು ತುಂಬಿಕೊಂಡಿತ್ತು.

ಇದನ್ನು ಕಂಡು ವಿನೋದ್ ಕೂಡಲೇ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ಬಳಿಕ, ನೋಡ, ನೋಡುತ್ತಿದ್ದಂತೆ ತಾವಿದ್ದ ಮನೆ, ವಾಹನ ಎಲ್ಲವೂ ಭೂಮಿಯಡಿ ಹುದುಗಿ ಹೋಗಿದೆ. ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ.

ಈ ಮಧ್ಯೆ, ಗುಡ್ಡದ ಮೇಲೆ ಆಶ್ರಯ ಪಡೆದಿದ್ದ ವಿನೋದ್ ಹಾಗೂ ಮತ್ತಿತ್ತರನ್ನು ರಕ್ಷಣಾ ಪಡೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದೆ. ಕೂಡಲೇ ಮೆಪಾಡಿಯಲ್ಲಿದ್ದ ಪತ್ನಿಗೂ ವಿಚಾರ ತಿಳಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ವಿನೋದ್ ಸೂಚಿಸಿದ್ದು, ಪ್ರವಿದಾ, ಲಕ್ಷ್ಮೀ ಹಾಗೂ ಪುಟ್ಟಸಿದ್ದಮ್ಮ ಸುರಕ್ಷಿತ ಸ್ಥಳಕ್ಕೆ ಆಗಮಿಸಿದ್ದಾರೆ.

ಬಳಿಕ, ಕಾರಿನಲ್ಲಿ ಮಂಗಳವಾರ ಸಂಜೆ ಚಾಮರಾಜನಗರ ತಲುಪಿದ್ದಾರೆ. ಸಾಕಿದ್ದ ಹಸು ದೇವರಂತೆ ಕುಟುಂಬಕ್ಕೆ ಅಪಾಯದ ಬಗ್ಗೆ ಎಚ್ಚರಿಸಿ ಇಡೀ ಕುಟುಂಬವನ್ನು ಪಾರು ಮಾಡಿದೆ.

Leave a Reply

Your email address will not be published. Required fields are marked *