Fri. Apr 4th, 2025

Wayanad Landslide: ಪಾಪುವನ್ನು ಹಿಡಿಯುವಷ್ಟರಲ್ಲಿ ಗೋಡೆ ಕುಸಿದು ಬಿತ್ತು – ತಾಯಿಯ ಕಣ್ಣೀರು

ಮಂಡ್ಯ:(ಜು.31) ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭಯಾನಕ ಭೂ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಏರುತ್ತಲೇ ಇದೆ. ಮಂಡ್ಯ ಜಿಲ್ಲೆಯ ಕೆಆರ್‌ ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಕುಟುಂಬವೊಂದು ಈ ದುರಂತದಲ್ಲಿ ಸಿಲುಕಿದೆ. ಈ ಕುಟುಂಬದ ಅಜ್ಜಿ, ಮೊಮ್ಮಗ ಸಾವನ್ನಪ್ಪಿದ್ದು, ಇನ್ನುಳಿದ ಮೂವರಿಗೆ ಗಾಯಗಳಾಗಿವೆ. ಭೂ ಕುಸಿತದ ಭೀಕರತೆ ಕುರಿತು ನೆನೆದು ಮೃತ ಮಹಿಳೆಯ ಮಗಳು ಮಂಜುಳಾ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: 🔴ಬೆಂಗಳೂರು: ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಬೆಂಬಲಕ್ಕೆ ನಿಂತ ಶಾಸಕ ಹರೀಶ್‌ ಪೂಂಜ

ಮಳೆ ಜಾಸ್ತಿ ಆಗುತ್ತಿದೆ ಅಂತ ಟಿವಿಯಲ್ಲಿ ತೋರಿಸುತ್ತಿದ್ದಾರೆ ಬಂದು ಬಿಡಿ ಅಂದೆ. ಆದರೆ ಇಲ್ಲಿ ಅಷ್ಟು ಮಳೆಯಿಲ್ಲ, ನಾಳೆ ಬರುತ್ತೇವೆ ಬ್ಯಾಗ್‌ ಪ್ಯಾಕ್‌ ಮಾಡಿಕೊಳ್ಳುತ್ತಿದ್ದೇವೆ ಎಂದರು. ಆದರೆ ಬೆಳಿಗ್ಗೆ ಆಗುವ ಹೊತ್ತಿಗೆ ನೀರಲ್ಲಿ ಕೊಚ್ಚಿ ಹೋದರು ಎಂದು ಪುತ್ರಿ ಮಂಜುಳಾ ಕಣ್ಣೀರಿಡುತ್ತಾ ಹೇಳಿದ್ದಾರೆ.

ನಾವು ಹೊಸದಾಗಿ ಮನೆ ಕಟ್ಟಿದ್ದೇವೆ. ಮುಂದಿನ ತಿಂಗಳು ಗೃಹಪ್ರವೇಶವಿತ್ತು. ಅಷ್ಟರಲ್ಲಿ ಅಮ್ಮ ಕೊಚ್ಚಿ ಹೋಗಿದ್ದಾರೆ. ಪಾಪು ನಿಹಾಲ್‌ನ ಹಿಡಿದುಕೊಳ್ಳೋಣ ಎಂದು ಅಂದುಕೊಳ್ಳುವಷ್ಟರಲ್ಲಿ ಅವನ ಮೇಲೆ ಗೋಡೆ ಬಿದ್ದಿದೆ. ನನ್ನ ತಂದೆ ಪಾಪುವಿಗಾಗಿ ಹುಡುಕಾಡಿದ್ದಾರೆ. ಎಲ್ಲೂ ಸಿಕ್ಕಿಲ್ಲ. ನನ್ನ ಅನಿಲ್‌ ಹೇಗೋ ಬಚಾವಾಗಿದ್ದಾನೆ. ಅವನಿಗೆ ಕಣ್ಣು, ಮೂಗು, ಶ್ವಾಸಕೋಶಕ್ಕೆ ಮಣ್ಣು ತುಂಬಿದೆ. ಬೆನ್ನು ಮೂಳೆ ತುಂಡಾಗಿದೆ ಎಂದು ಮಂಜುಳಾ ಅಳುತ್ತಾ ಹೇಳಿದ್ದಾರೆ.

ಅಮ್ಮನ ಬಳಿ ಕಡೆಯದಾಗಿ ಮಾತನಾಡಿದಾಗ, ಬೇಗ ಬನ್ನಿ ಅಂದೆ ನಾಳೆ ಬರುತ್ತೀವಿ ಅಂದರು. ನೀವು ಬರಲಿಲ್ಲ ಅಂದರೆ ಸಾಯಿರಿ ಅಲ್ಲೇ. ಮಗುನಾದರೂ ಕಳುಹಿಸಿ ಅಂದೆ. ಅವರು ಸಾಯುತ್ತಾರೆ ಅಂತ ಗೊತ್ತಿರಲಿಲ್ಲ. ಒಂದೇ ಒಂದು ಸಾರಿ ಅವರನ್ನು ನೋಡಬೇಕು. ಪಾಪುವಿಗಾಗಿ ಸೈಕಲ್‌, ಬುಕ್ಸ್‌ ಎಲ್ಲಾ ತೆಗೆದಿಟ್ಟಿದ್ದೆ. ಈಗ ನೋಡಿದ್ರೆ ಹೀಗಾಗಿದೆ. ದೇವರಿಗೆ ಕರುಣೆನೇ ಇಲ್ಲ. ಹೇಗಾದರು ಮಾಡಿ ಮೃತದೇಹ ಕರ್ನಾಟಕಕ್ಕೆ ತನ್ನಿ, ಕಡೆ ಬಾರಿ ಮುಖ ನೋಡಿಕೊಳ್ತೀವಿ ಎಂದು ಮಂಜುಳಾ ವಿನಂತಿಸಿದ್ದಾರೆ.

ಕತ್ತರಘಟ್ಟ ಗ್ರಾಮದ ದೇವರಾಜು, ಲೀಲಾವತಿ, ಅನಿಲ್, ಝಾನ್ಸಿ ಹಾಗೂ ಎರಡೂವರೆ ವರ್ಷದ ನಿಹಾಲ್ ಅಲ್ಲಿದ್ದರು. ಗುಡ್ಡ ಕುಸಿತವಾದ ವೇಳೆ, ಇವರು ವಾಸವಿದ್ದ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಈ ವೇಳೆ 55 ವರ್ಷದ ಲೀಲಾವತಿ ಗುಡ್ಡದ ಮಣ್ಣಿನ ಕೆಳಭಾಗದಲ್ಲಿ ಸೇರಿಕೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಎರಡೂವರೆ ವರ್ಷದ ನಿಹಾಲ್ ಮಣ್ಣು ಹಾಗೂ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಇದಲ್ಲದೇ ದೇವರಾಜು, ಅನಿಲ್, ಝಾನ್ಸಿ ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ರು. ಬಳಿಕ ಗಾಯಳುಗಳ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಇದೀಗ ಈ ಮೂವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *