ಪುತ್ತೂರು:(ಆ.2) ನಿರಂತರ ಮಳೆಯಿಂದ ಅಲ್ಲಲ್ಲಿ ಮಣ್ಣು ಸಡಿಲಗೊಂಡು ಗುಡ್ಡ ಕುಸಿತದಂತಹ ಕೆಲವು ಘಟನೆಗಳು ನಡೆಯುತ್ತಿವೆ. ಅದೇ ರೀತಿ ಗಾಳಿ ಮಳೆ ಮುನ್ಸೂಚನೆ ಇರುವ ಹಿನ್ನಲೆಯಲ್ಲಿ ಜನರು ಮನೆಯಲ್ಲಿದ್ದು, ಸುರಕ್ಷಿತವಾಗಿರಿ ಎಂದು ಸಹಾಯಕ ಕಮೀಷನರ್ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಗುಡ್ಡ ಕುಸಿತ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ಅವರು, ನಿರಂತರವಾಗಿ ಸುರಿದ ಮಳೆಯಿಂದ ಹಲವು ಕಡೆ ಅಪಾಯಕಾರಿ ಸ್ಥಿತಿ ಎದುರಾಗಿದೆ.
ಬೈಪಾಸ್ ರಸ್ತೆಯಲ್ಲಿ ಮಣ್ಣು ತೆರವು ಮಾಡಿ ಸಂಚಾರ ಪೊಲೀಸರು ಪರಿಶೀಲಿಸಿದ ಬಳಿಕ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಿದ್ದಾರೆ. ಅದೇ ರೀತಿ ಗುಡ್ಡದಿಂದ ಮಣ್ಣು ಬೀಳುವ ಕಡೆ ಅರ್ಧ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು.
ಸಂಚಾರ ಪೊಲೀಸರು ಈ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಹಲವು ಕಡೆ ಮಣ್ಣುಕುಸಿತ, ಕೃತಕ ನೆರೆ ಉಂಟಾಗುತ್ತಿದೆ. ಅದೇ ರೀತಿ ಹವಾಮಾನ ಇಲಾಖೆಯಿಂದ ಬಂದ ಮಾಹಿತಿಯಂತೆ ಗಾಳಿ ಮಳೆ ಆಗುವ ಸಾಧ್ಯತೆ ಇದೆ.
ಇಂತಹ ಪರಿಸ್ಥಿತಿಯಲ್ಲಿ ಜನರು ಅಗತ್ಯವಿದ್ದರೆ ಮಾತ್ರ, ಕೆಲಸ ಕಾರ್ಯಕ್ಕೆ ತೆರಳುವುದು. ಇಲ್ಲವಾದಲ್ಲಿ ಮನೆಯಲ್ಲೇ ಇದ್ದು ರಕ್ಷಣೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದರ ಜೊತೆಗೆ ಅಪಾಯಕಾರಿ ಮನೆಗಳಿದ್ದರೆ ನಗರಸಭೆ ಮತ್ತು ಗ್ರಾ.ಪಂ. ಕಡೆಯಿಂದ ನೋಟೀಸ್ ನೀಡಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಜನರು ಸಹಕಾರ ನೀಡಬೇಕು. ಅಪಾಯಕಾರಿ ಮನೆಗಳನ್ನು ಬಿಟ್ಟು ಇಲಾಖೆಯಿಂದ ತೋರಿಸಿದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯಬೇಕು. ಜೀವ ಉಳಿಸುವ ಕೆಲಸ ಪ್ರಮುಖವಾದದ್ದು. ಸಾಕು ದನಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಅದನ್ನು ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭ ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ, ಪುತ್ತೂರು ನಗರಸಭೆ ಪೌರಾಯುಕ್ತ ಮಧು , ಎಸ್ ಮನೋಹರ್ ಮತ್ತಿತ್ತರರು ಉಪಸ್ಥಿತರಿದ್ದರು.