ಮಂಗಳೂರು:(ಆ.3) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಕಾರಣದಿಂದ ಇಲ್ಲಿಯ ವರೆಗೆ ಒಟ್ಟು 167.73 ಕೋ.ರೂ. ನಷ್ಟವಾಗಿದೆ. ಪ್ರಾಕೃತಿಕ ವಿಕೋಪ ನಿರ್ವಹಣೆ ಬಳಕೆಗಾಗಿ ಜಿಲ್ಲಾ ವಿಪತ್ತು ಪರಿಹಾರ ನಿಧಿಯಲ್ಲಿ 14.22 ಕೋ.ರೂ. ಹಾಗೂ ತಾಲೂಕುಗಳಲ್ಲಿ ಒಟ್ಟು 4.14 ಕೋ.ರೂ. ಲಭ್ಯವಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: Praveen Nettaru Murder: – ಆಶ್ರಯ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ
ದಕ್ಷಿಣ ಕನ್ನಡ ಜಿಲ್ಲಾದ್ಯಂತ ಮಳೆ ಹಾಗೂ ನೆರೆಹಾನಿಯಿಂದ ತತ್ತರಿಸಿದ ವಿವಿಧ ಪ್ರದೇಶ ಗಳಿಗೆ ಶುಕ್ರವಾರ ಭೇಟಿ ನೀಡಿ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 11 ಮಂದಿ ಸಾವನ್ನಪ್ಪಿದ್ದು, 9 ಮಂದಿ ಗಾಯಗೊಂಡಿದ್ದಾರೆ. 154 ಮನೆಗಳು ಸಂಪೂರ್ಣ ಹಾಗೂ 484 ಭಾಗಶಃ ಹಾನಿಗೀಡಾಗಿವೆ. 18 ಪ್ರಾಣಿಗಳು ಮೃತಪಟ್ಟಿವೆ.
ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಮತ್ತು ನೆರೆಗೆ ನೇತ್ರಾವತಿ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಭೇಟಿ ನೀಡಿದರು. ಮಳೆಗೆ ಗುಡ್ಡ ಜರಿತವಾಗಿರುವ ಗೂಡಿನಬಳಿ , ನೆರೆ ನೀರು ನುಗ್ಗಿ ಸಂತ್ರಸ್ತ ರಾದ ಆಲಡ್ಕ ಮತ್ತು ನಾವೂರ ಭಾಗದ ಜನರ ಸಮಸ್ಯೆ ಆಲಿಸಿದ ಸಚಿವರು ಬಳಿಕ ಮಳೆಗೆ ಕೊಚ್ಚಿಹೋದ ಕಂಚಿಕಾರ್ ಪೇಟೆ ರಸ್ತೆ ಹಾಗೂ ಸರಪಾಡಿ ಭಾಗದಲ್ಲಿ ನಡೆದ ಹಾನಿಗಳ ಬಗ್ಗೆ ವೀಕ್ಷಣೆ ನಡೆಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನೆರೆಯಿಂದ ಮಳುಗಡೆಯಾದ ಆಲಡ್ಕದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆಗುತ್ತದೆ. ಸಂತ್ರಸ್ತರು ವಾಸವಾಗಿರುವ ಜಾಗದ ಮೇಲೆ ಕುಮ್ಕಿ ಜಾಗವೆಂದು ಕೇಸು ದಾಖಲಾಗಿದ್ದು, ಪ್ರಕರಣ ಜಿಲ್ಲಾಧಿಕಾರಿಯವರ ಮುಂದೆ ಇದೆ, ಆದಷ್ಟು ಬೇಗ ಜಾಗದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಜಮೀನು ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇನೆ .ಸಮಸ್ಯೆ ಪರಿಹಾರವಾದರೆ ಮನೆ ಕಟ್ಟಲು ಸರಕಾರದ ಸಹಾಯಧನ ನೀಡಲಾಗುತ್ತದೆ ಎಂದರು.
ಪಂಚಾಯತ್‌ರಾಜ್ ಇಲಾಖೆ ಸಂಬಂಧಪಟ್ಟ ರಸ್ತೆ ಹಾನಿಯಾಗಿ 32.31 ಕೋ.ರೂ., ಕಿರು ಸೇತುವೆ-ಕಾಲುಸಂಕ ಹಾನಿಯಾಗಿ 21.81 ಕೋ.ರೂ., ಲೋಕೋಪಯೋಗಿ ಎಂಡಿಆರ್ ರಸ್ತೆ ಹಾನಿಯಾಗಿ 41.20 ಕೋ.ರೂ., ಎಸ್‌ಎಚ್ ರಸ್ತೆ ಹಾನಿಯಾಗಿ 40.49 ಕೋ.ರೂ., ಸೇತುವೆ-ಕಾಲು ಸಂಕ ಹಾನಿಯಾಗಿ 21.78 ಕೋ.ರೂ. ಹಾಗೂ ಮೆಸ್ಕಾಂಗೆ ಸಂಬಂಧಪಟ್ಟ ಟ್ರಾನ್ಸ್‌ಫಾರ್ಮರ್, ಕಂಬ ಸಹಿತ 10.14 ಕೋ.ರೂ ಮೌಲ್ಯದ ಸೊತ್ತು ನಷ್ಟವಾಗಿದೆ ಎಂದರು.
ಮಂಗಳೂರು, ಉಳ್ಳಾಲ ಹಾಗೂ ಕಡಬ ಸಹಿತ 3 ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 234 ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬಂಟ್ವಾಳ ತಾಲೂಕಿನಲ್ಲಿ 0.40 ಹೆಕ್ಟೇರ್ ಪ್ರದೇಶ ಹಾನಿಗೀಡಾಗಿದೆ. ಜಿಲ್ಲೆಯಲ್ಲಿ ಒಟ್ಟು 7.190 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ಹಾನಿಯಾಗಿದೆ ಎಂದರು.