Wed. Nov 20th, 2024

Mangalore: ರಾಜ್ಯದಲ್ಲಿ ಹಗರಣಗಳ ಸರಮಾಲೆಯೊಂದಿಗೆ ದಲಿತ ಬಂಧುಗಳ ಶೋಷಣೆ – ಶಾಸಕ ಕಾಮತ್

ಮಂಗಳೂರು:(ಆ.5) ರಾಜ್ಯವನ್ನು ಲೂಟಿ ಹೊಡೆಯಲೆಂದೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹಗರಣಗಳ ಸರಮಾಲೆಯನ್ನು ಸುತ್ತಿಕೊಂಡು, ಇದೀಗ ದಲಿತರ ಶೋಷಣೆಗೂ ನಿಂತಿದೆ. ಆ ಶೋಷಣೆ ಸಾವಿನ ಮಟ್ಟಕ್ಕೂ ತಲುಪಿರುವುದು ರಾಜ್ಯ ಕಂಡು ಕೇಳರಿಯದ ಪರಿಸ್ಥಿತಿಗೆ ತಲುಪಿದಂತಾಗಿದೆ.

ಇದನ್ನೂ ಓದಿ: 🛑ಬೆಳ್ತಂಗಡಿ: ಬೆಳ್ತಂಗಡಿ ಪ್ರವಾಸಿ ಬಂಗಲೆ ನೂತನ ಕಟ್ಟಡ ನಿರ್ಮಾಣದಲ್ಲಿ ಭಾರೀ ಭ್ರಷ್ಟಾಚಾರವಾಗಿದೆ: ರಕ್ಷಿತ್ ಶಿವರಾಮ್

ಪ್ರಾಮಾಣಿಕ ಅಧಿಕಾರಿಯೊಬ್ಬರ ಆತ್ಮಹತ್ಯೆಯಿಂದಾಗಿ ಬುಡಕಟ್ಟು ಸಮುದಾಯದ ಬಡವರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿಗಳನ್ನು ಸರ್ಕಾರವೇ ಲೂಟಿ ಹೊಡೆಯಲು ನಿಂತಿದ್ದ ಪ್ರಕರಣ ಬೆಳಕಿಗೆ ಬಂತು. ಮೊದಲಿಗೆ ಸರ್ಕಾರ ಆರೋಪಿಗಳನ್ನು ರಕ್ಷಿಸಲು ಯತ್ನಿಸಿದರೂ ವಿರೋಧ ಪಕ್ಷಗಳ ಸಮರ್ಥ ಹೋರಾಟ ಹಾಗೂ ಮಾಧ್ಯಮಗಳ ನಿರಂತರ ವರದಿಯ ಫಲವಾಗಿ ಸರ್ಕಾರದ ಮಂತ್ರಿಗಳು ರಾಜೀನಾಮೆ ಕೊಡುವಂತಾಯಿತು. ಮುಖ್ಯಮಂತ್ರಿಗಳು ಎಸ್ಐಟಿ ರಚಿಸಿ ಇಡೀ ಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿದರೂ ಇ.ಡಿ ತನಿಖಾ ಸಂಸ್ಥೆ ಭ್ರಷ್ಟರ ಹೆಡೆಮುರಿ ಕಟ್ಟುತ್ತಿದೆ.

ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ 25 ಸಾವಿರ ಕೋಟಿಗೂ ಅಧಿಕ ರೂಪಾಯಿಗಳನ್ನು ಕಾಂಗ್ರೆಸ್ ಸರ್ಕಾರ ನಿಯಮ ಬಾಹಿರವಾಗಿ ಅನ್ಯ ಉದ್ದೇಶಕ್ಕೆ ಬಳಸಿಕೊಂಡು ದಲಿತರಿಗೆ ಮಹಾ ಮೋಸ ಮಾಡಿದ್ದು ರಾಷ್ಟ್ರೀಯ ಪರಿಶಿಷ್ಟ ಜಾತಿ-ಪಂಗಡ ಆಯೋಗವು ಕೂಡ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ಕೋರುವ ಪತ್ರದ ಮೂಲಕ ಚಾಟಿ ಬೀಸಿದೆ. ಬಡ ದಲಿತ ಬಂಧುಗಳ ಉನ್ನತೀಕರಣಕ್ಕೆ ಮೀಸಲಿಟ್ಟ ನಾಡಿನ ಜನರ ಬೆವರಿನ ದುಡಿಮೆಯನ್ನು ಲೂಟಿಗೈಯುತ್ತಿರುವ ದಲಿತ ವಿರೋಧಿ ಕಾಂಗ್ರೆಸ್ಸಿಗೆ ಕೊಂಚವೂ ಮನಃಸಾಕ್ಷಿ ಇಲ್ಲವೇ?

ಮುಡಾ ಸೈಟ್ ಹಗರಣ;- 4 ಸಾವಿರ ಕೋಟಿಯ ಮೈಸೂರು ಮುಡಾ ಸೈಟ್ ಹಗರಣದಲ್ಲಿ ಸ್ವತಃ ರಾಜ್ಯದ ಮುಖ್ಯಮಂತ್ರಿಗಳ ಹೆಸರು ಕೇಳಿ ಬಂದಿದ್ದು, ಮೈಸೂರಿನಲ್ಲಿ ತಮ್ಮ ಈ ಹಿಂದಿನ ಆಸ್ತಿಯ ಬದಲಿಗೆ, ನಾಲ್ಕೈದು ಪಟ್ಟಿಗೂ ಅಧಿಕ ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡಿರುವುದು ಎಷ್ಟು ಸರಿ? ಮುಖ್ಯಮಂತ್ರಿಗಳು ನಿಜವಾಗಿಯೂ ಪ್ರಾಮಾಣಿಕರಾಗಿದ್ದರೆ 50:50 ಅನುಪಾತದಲ್ಲಿ ತಮ್ಮ ಆಸ್ತಿಯ ಮೌಲ್ಯಕ್ಕೆ ಸರಿ ಸಮಾನವಾಗಿಯೇ ಬೇರೆ ಆಸ್ತಿ ಪಡೆದುಕೊಳ್ಳಬೇಕಿತ್ತು. ಅದು ಬಿಟ್ಟು ಸಿಕ್ಕಿದ್ದೇ ಲಾಭ ಎಂದುಕೊಂಡು ಬಹು ಮೌಲ್ಯದ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ನನ್ನದೇನೂ ತಪ್ಪಿಲ್ಲ, ನಾನು ಪ್ರಾಮಾಣಿಕ, ಎಂದರೆ ನ್ಯಾಯವೇ?
ಈ ಬಗ್ಗೆ ಅಧಿವೇಶನದಲ್ಲಿ ನಾವು ಪ್ರಶ್ನಿಸಿದ ಕೂಡಲೇ ಉತ್ತರಿಸಲಾಗದೇ ಒಂದು ದಿವಸಕ್ಕೂ ಮೊದಲೇ ಅಧಿವೇಶನವನ್ನು ಮುಗಿಸಿಬಿಟ್ಟರು. ಹಾಗಾಗಿ ಈಗ ಮೈಸೂರು ಚಲೋ ಪಾದಯಾತ್ರೆ ಮೂಲಕ ದೊಡ್ಡ ಜನಾಂದೋಲನವೇ ಸೃಷ್ಟಿಯಾಗಿದ್ದು ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ತಮ್ಮ ಘನತೆ ಉಳಿಸಿಕೊಳ್ಳಬೇಕು. ಅಲ್ಲದೇ ವೈಯಕ್ತಿಕ ಸ್ವಾರ್ಥಕ್ಕಾಗಿ ಬಹುಮೌಲ್ಯದ ಮೂಡ ಸೈಟ್ ಪಡೆದುಕೊಂಡು ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದು ಆ ನಷ್ಟವನ್ನು ತುಂಬಿಕೊಡಬೇಕು ಎಂದು ಆಗ್ರಹಿಸುತ್ತೇನೆ.

ಅಕ್ಕಿ ಹಗರಣ:-
ರಾಜ್ಯದಲ್ಲಿ ಶಿಕ್ಷಣ ಇಲಾಖೆ ಮಧ್ಯಾಹ್ನದ ಊಟಕ್ಕೆ ಒಂದು ಕೆಜಿ ಅಕ್ಕಿಯನ್ನು 29 ರೂ.ಗೆ ಖರೀದಿಸುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅನ್ನಭಾಗ್ಯ ಯೋಜನೆಗೆ ಒಂದು ಕೆಜಿ ಅಕ್ಕಿಯನ್ನು 34 ರೂ.ಗೆ ಖರೀದಿಸುತ್ತಿದೆ. ಇದರಿಂದ ಒಂದೇ ರಾಜ್ಯದಲ್ಲಿ ಎರಡು ಬೆಲೆಯಲ್ಲಿ ಅಕ್ಕಿ ಖರೀದಿಯ ಮಹಾ ಮೋಸ ಬಯಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಏಕೆ ಹೆಚ್ಚು ಪಾವತಿಸುತ್ತಿದೆ ಮತ್ತು ಹಣ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಅಧಿವೇಶನದಲ್ಲೇ ಪ್ರಶ್ನಿಸಿದರೂ ಸರ್ಕಾರ ಕೇವಲ ಹಾರಿಕೆ ಉತ್ತರ ನೀಡಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ಭ್ರಷ್ಟಾಚಾರದ ಸರಮಾಲೆ ನಮ್ಮ ಜಿಲ್ಲೆಯನ್ನೂ ಬಿಟ್ಟಿಲ್ಲ. ದಕ್ಷಿಣ ಕನ್ನಡ ಜಿಲ್ಲಾ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ವೆನ್ಲಾಕ್ ನಲ್ಲಿ ಬಡ ರೋಗಿಗಳ ಔಷಧ ಖರೀದಿ ಪ್ರಕ್ರಿಯೆಯಲ್ಲಿ ಕೆಟಿಪಿಪಿ ನಿಯಮ ಉಲ್ಲಂಘಿಸಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆದಿದ್ದು ಕೇವಲ ಕಚೇರಿ ಅಧೀಕ್ಷಕರೊಬ್ಬರನ್ನು ಮಾತ್ರ ಅಮಾನತುಗೊಳಿಸಿ ಉನ್ನತ ಮಟ್ಟದ ಅಧಿಕಾರಿಗಳನ್ನು ರಕ್ಷಿಸುವ ಜೊತೆಗೆ ಹಗರಣವನ್ನೇ ಮುಚ್ಚಿ ಹಾಕುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿದೆ.
ಹಗರಣದ ಬಗ್ಗೆ ಸುಳಿವು ಹೊರ ಬಿದ್ದ ಕೂಡಲೇ ಇದು ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಸಮಾಜಯಿಷಿ ನೀಡಿ ಜಿಲ್ಲಾಧಿಕಾರಿಗಳನ್ನೇ ದಾರಿ ತಪ್ಪಿಸುವ ಪ್ರಯತ್ನವಾಗಿತ್ತು. ಆದರೆ ವಿವಿಧ ಹಂತದಲ್ಲಿ ತನಿಖೆ ನಡೆದ ಮೇಲೆ ಕಚೇರಿ ಅಧೀಕ್ಷಕ ಮಾತ್ರವಲ್ಲದೇ ಉನ್ನತ ಅಧಿಕಾರಿಗಳೂ ಸಹ ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ದಾಖಲೆ ಸಮೇತ ಸ್ಪಷ್ಟವಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮವಾಗಿಲ್ಲ.
ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರನ್ನು ಕೋರಲಾಗಿದ್ದು ಎರಡು ತಿಂಗಳು ಕಳೆದರೂ ಈವರೆಗೆ ಯಾವುದೇ ತನಿಖೆ ನಡೆಯದಂತೆ ಕಾಣದ “ಕೈ”ಗಳು ಪ್ರಭಾವ ಬೀರಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಆರೋಗ್ಯ ಸಚಿವರಾಗಿರುವ ದಿನೇಶ್ ಗುಂಡೂರಾವ್ ರವರಿಗೆ ತಮ್ಮ ಇಲಾಖೆಯಲ್ಲೇ ನಡೆದಿರುವ ಈ ಅವ್ಯವಹಾರದ ಬಗ್ಗೆ ಮಾಹಿತಿ ಇಲ್ಲವೇ? ಅಥವಾ ಇದು ರಾಜ್ಯ ಸರ್ಕಾರ ಪ್ರಾಯೋಜಿತ ಭ್ರಷ್ಟಾಚಾರವೆಂದು ಸುಮ್ಮನಿದ್ದಾರೆಯೇ? ಇವೆಲ್ಲದರ ನಡುವೆ ಇದೇ ಹಗರಣಕ್ಕೆ ಸಂಬಂಧಿಸಿ ಬಿಲ್ ಪಾವತಿಗಾಗಿ ಸದ್ದಿಲ್ಲದೇ ಕಡತಗಳು ಮುಂದೆ ಹೋಗುತ್ತಿದ್ದು ಒಂದು ವೇಳೆ ಅವ್ಯವಹಾರದ ನಡೆದರೆ ಅದರ ನೇರ ಹೊಣೆಯನ್ನು ಇಲಾಖೆಯ ಸಚಿವರ ಸಹಿತ ಸರ್ಕಾರವೇ ಹೊರಬೇಕಾಗುತ್ತದೆ.

ಅಧಿಕಾರಕ್ಕೇರಿದ ಕೇವಲ 15 ತಿಂಗಳಲ್ಲೇ ಈ ಸರ್ಕಾರ ಹಗರಣಗಳಲ್ಲಿ ದಾಖಲೆಯನ್ನು ಬರೆದಿದೆ. ಒಂದು ಸರ್ಕಾರ ಹೇಗಿರಬಾರದು ಎಂಬುದಕ್ಕೆ ಇಡೀ ದೇಶದಲ್ಲಿ ಕರ್ನಾಟಕ ಉತ್ತಮ ಉದಾಹರಣೆಯಾಗುವಷ್ಟರಮಟ್ಟಿಗೆ ರಾಜ್ಯದ ಘನತೆಯನ್ನು ಈ ಕಾಂಗ್ರೆಸಿನವರು ಹಾಳು ಮಾಡಿದ್ದಾರೆ.
• ಕರ್ನಾಟಕ ರಾಜ್ಯ ರಾಜೀವ್‌ ಗಾಂಧಿ ವಸತಿ ನಿಗಮದ ಅಧೀನದಲ್ಲಿರುವ ಹ್ಯಾಬಿಟೇಟ್‌ ಕೇಂದ್ರವು ಕೆಟಿಪಿಪಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ಇಲ್ಲದೇ ₹400 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿದೆ.
• ಕಾರ್ಮಿಕರ ಹೆಲ್ತ್ ಚೆಕ್ ಅಪ್ ನಲ್ಲೂ ಭಾರೀ ಅಕ್ರಮವಾಗಿದ್ದು ಸೂಕ್ತ ತನಿಖೆ ನಡೆಸುವಂತೆ ಕಾರ್ಮಿಕರ ಸಂಘದ ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
• ಅಪೆಕ್ಸ್ ಬ್ಯಾಂಕಿನ 2 ಸಾವಿರ ಕೋಟಿ ಅವ್ಯವಹಾರ ಆರೋಪಕ್ಕೆ ಹಲವು ಸಾಕ್ಷ್ಯ ಸಿಕ್ಕಿದ್ದು ಕೂಡಲೇ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಹೈಕೋರ್ಟ್ ಸೂಚಿಸಿದ್ದು ಕಾಂಗ್ರೆಸ್ಸಿನ ಮತ್ತೊಬ್ಬ ಸಚಿವರ ಹಗರಣ ಬೆಳಕಿಗೆ ಬರಲು ಕ್ಷಣಗಣನೆ ಆರಂಭವಾಗಿದೆ.
• ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆಯ ದೊಡ್ಡ ದಂಧೆಯೇ ನಡೆಯುತ್ತಿದೆ ಎಂದು ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಯವರೇ ಹೇಳಿದ್ದಾರೆ.
• ಅಷ್ಟು ಮಾತ್ರವಲ್ಲದೇ, K I A D B ಹಗರಣ, ಪ್ರವಾಸೋದ್ಯಮ ಹಗರಣ, ಕೋಟ್ಯಂತರ ರೂಪಾಯಿಗಳ ವಕ್ಫ್ ಹಗರಣ, ಹೀಗೆ ಪ್ರತಿಯೊಂದು ಇಲಾಖೆಯಲ್ಲೂ ಹಗರಣಗಳ ಸರಮಾಲೆಯ ಬಗ್ಗೆ ದಿನನಿತ್ಯ ಮಾಧ್ಯಮಗಳಲ್ಲೇ ವರದಿಯಾಗುತ್ತಿದೆ. ಆದರೂ ಸೂಕ್ತ ತನಿಖೆ ನಡೆಯುತ್ತಿಲ್ಲ
ಈ ನಡುವೆ ಕರಾವಳಿ ಭಾಗದಲ್ಲಿ ಅಪರಿಚಿತ ಮುಸುಕುಧಾರಿ ಆಗಂತುಕರ ಹಾವಳಿ ವಿಪರೀತವಾಗಿ ಜನತೆಯಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿದ್ದು, ಮಧ್ಯರಾತ್ರಿಯಲ್ಲಿ ಮನೆಗಳಿಗೆ, ಫ್ಲ್ಯಾಟುಗಳಿಗೆ ನುಗ್ಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ರಾಜ್ಯದಲ್ಲಿ ಹುಬ್ಬಳ್ಳಿಯ ನೇಹಾ ಕೊಲೆ, ಅಂಜಲಿ ಕೊಲೆ, ಮಡಿಕೇರಿಯಲ್ಲಿ ರುಂಡ ಕತ್ತರಿಸಿ ಕೊಲೆ, ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಕೊಲೆ, ಹೀಗೆ ಸಾಲು ಸಾಲು ದಾರುಣ ಹತ್ಯೆ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿವೆ. ಈ ಎಲ್ಲಾ ಪ್ರಕರಣಗಳಲ್ಲಿ ರಾಜ್ಯ ಗೃಹ ಇಲಾಖೆ ಜನತೆಗೆ ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಸುವುದು ಯಾವಾಗ?. ಇವೆಲ್ಲವನ್ನು ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಪೊಲೀಸರು ಅತ್ಯಂತ ಸಮರ್ಥರಿದ್ದಾರೆ. ಆದರೆ ಈ ಸರ್ಕಾರ ಅವರನ್ನೂ ಸಹ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಬಿಡುತ್ತಿಲ್ಲ. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ಪಿಎಸ್ಐ ಪರಶುರಾಮ್ ರವರ ಸಾವು ನಮ್ಮ ಕಣ್ಣ ಮುಂದೆ ಇದೆ.

ಪಿಎಸ್ಐ ಪರಶುರಾಮ್ ಅನುಮಾನಾಸ್ಪದ ಸಾವು:-
ರಾಜ್ಯದಲ್ಲಿ ಈಗ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಅದೇ ಅಕ್ಷಮ್ಯ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದ್ದು ಅದಕ್ಕೆ ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ಮತ್ತೊಂದು ಉದಾಹರಣೆಯಾಗಿದೆ. ಅವರ ಏಳು ತಿಂಗಳ ಗರ್ಭಿಣಿ ಪತ್ನಿ ಮಾಧ್ಯಮಗಳ ಮುಂದೆ “ನಿನ್ನಂತಹ ಕೀಳು ಜಾತಿಯವನು ನನ್ನ ಕ್ಷೇತ್ರದಲ್ಲಿ ಇರಬಾರದು, ಹಾಗೊಂದು ವೇಳೆ ಇಲ್ಲೇ ಇರಬೇಕಾದರೆ 30 ಲಕ್ಷ ಕೊಡು, ಇಲ್ಲವಾದರೆ ಜಾಗ ಖಾಲಿ ಮಾಡು ಎಂದು ನನ್ನ ಪತಿಗೆ ಇಲ್ಲಿನ ಶಾಸಕರು ಹಾಗೂ ಅವರ ಮಗ ಅವಮಾನ ಮಾಡಿದ್ದರಿಂದ ಸಾಕಷ್ಟು ನೊಂದಿದ್ದರು. ನಾವು ದಲಿತ ಸಮುದಾಯದಲ್ಲಿ ಹುಟ್ಟಿದ್ದೇ ತಪ್ಪಾ? ನನ್ನ ಪತಿ ಪ್ರಾಮಾಣಿಕರಾಗಿ ಕರ್ತವ್ಯ ನಿರ್ವಹಿಸಿದ್ದೇ ತಪ್ಪಾ? ಶಾಸಕರೇ ಹೀಗೆ ಲಂಚಕ್ಕಾಗಿ ಪೀಡಿಸಿದರೆ ನಾವು ಯಾರ ಬಳಿ ನ್ಯಾಯ ಕೇಳಬೇಕು?” ಎಂದು ಕಣ್ಣೀರು ಹಾಕುತ್ತಾ ಆರೋಪಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಪ್ತ ಶಾಸಕರ ಮೇಲೆ ಪ್ರಕರಣ ದಾಖಲಿಸಲು ಪೊಲೀಸರು ಸಹ ಧೈರ್ಯ ತೋರಲಿಲ್ಲ ಎಂದರೆ ಅವರ ಮೇಲೆ ಸರ್ಕಾರದ ಒತ್ತಡ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. ನಂತರ ವಿರೋಧ ಪಕ್ಷಗಳು, ದಲಿತ ಸಂಘಟನೆಗಳು ಈ ಬಗ್ಗೆ ಧ್ವನಿ ಎತ್ತಿದ ನಂತರ 18 ತಾಸುಗಳ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ. ಹಾಗಾಗಿ ಈ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಸಿಐಡಿ ಬದಲು ಸಿಬಿಐಗೆ ವಹಿಸಬೇಕು, ಆ ಮೂಲಕ ಈ ಅನ್ಯಾಯದ ಸಾವಿಗೆ ನ್ಯಾಯ ಸಿಗಬೇಕು.

ಹಿಂದೆ ಇದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಿರುಕುಳದಿಂದ ಬೇಸತ್ತು ಡಿವೈಎಸ್ಪಿ ಗಳಾದ ಗಣಪತಿ ಹಾಗೂ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಮಾಡಿಕೊಂಡರು. ಒಂದಷ್ಟು ಅಧಿಕಾರಿಗಳು ಸಹವಾಸವೇ ಬೇಡವೆಂದು ರಾಜೀನಾಮೆ ಕೊಟ್ಟು ಹೋದರು. ಮೊನ್ನೆ ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು, ಈಗ ಪರಶುರಾಮ್‌ ಅವರ ಸಾವಾಗಿದೆ. ಈ ಸರ್ಕಾರದಲ್ಲಿ ನಿಷ್ಠಾವಂತ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಸಾಥ್ ನೀಡಬೇಕು, ಇಲ್ಲವೇ ಹೀಗೆ ಬದುಕು ಕಳೆದುಕೊಳ್ಳಬೇಕು. ರಾಜ್ಯದಲ್ಲಿ ಇಂತಹ ಜಂಗಲ್ ರಾಜ್ ಕಾನೂನು ಸೃಷ್ಟಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಮಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆಯನ್ನು ನೀಡಿದರು.

Leave a Reply

Your email address will not be published. Required fields are marked *