ಬೆಳ್ತಂಗಡಿ:(ಆ.6) ತಾಲೂಕಿನಲ್ಲಿ ಪುಂಜಾಲಕಟ್ಟೆಯಿಂದ – ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪ್ರಯಾಣಿಕರು ಅನುಭವಿಸುತ್ತಿರುವ ಸಂಕಟಗಳು ಒಂದೆಡೆಯಾದರೆ, ರಸ್ತೆಯ ಬದಿಗಳಲ್ಲಿ ವಾಸಿಸುವ ಮನೆಗಳಿಗೆ ನೀರು ನುಗ್ಗಿ ಸಂಕಷ್ಟದಲ್ಲಿದ್ದಾರೆ. ಇದೀಗ ಕಾಶೀಬೆಟ್ಟುವಿನಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿ ಲಕ್ಷಾಂತರ ಸಾಲಮಾಡಿ ವ್ಯವಹಾರಗಳನ್ನು ನಡೆಸುತ್ತಿರುವವರ ಬದುಕನ್ನೂ ಈ ಹೆದ್ದಾರಿ ಕಾಮಗಾರಿ ಕಸಿದುಕೊಳ್ಳುತ್ತಿದೆ.
ಇದನ್ನೂ ಓದಿ: 🛑ಉಡುಪಿ: ಉಡುಪಿಯ ವರದಿಗಾರ ಜಯಕರ ಸುವರ್ಣ ಇನ್ನಿಲ್ಲ
ಕಾಶಿಬೆಟ್ಟುವಿನಲ್ಲಿ ಹೆದ್ದಾರಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಹಾಕಲಾಗಿದೆ, ಇದೀಗ ಇವರಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿದೆ. ಕೆಸರು ನೀರು ನೇರವಾಗಿ ಅಂಗಡಿಗಳಿಗೆ ಫ್ಯಾಕ್ಟರಿ ಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಯಾರಲ್ಲಿ ದೂರು ನೀಡಿದರೂ ಯಾರೂ ಇವರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದೀಗ ಇಲ್ಲಿನ ವ್ಯವಹಾರ ನಡೆಸುವವರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಅಧಿಕಾರಿಗಳೇ, ಜನಪ್ರತಿನಿಧಿಗಳೇ, ಇಂಜಿನಿಯರ್ ಗಳೇ ನಮ್ಮ ಕೂಗು ಕೇಳುತ್ತಿಲ್ಲವೇ..?, ಇನ್ನು ಎಷ್ಟು ತಿರುಗಬೇಕು ಯಾರಲ್ಲಿ ಹೇಳಬೇಕು ಗೊತ್ತಿಲ್ಲ. ನಮ್ಮ ಕುಟುಂಬಕ್ಕೆ ಅನ್ನ ಕೊಡುವ ದಾರಿಯನ್ನೇ ಮುಚ್ಚಿದ್ದೀರಿ, ನಮ್ಮ ತಾಳ್ಮೆ ಪರೀಕ್ಷೀಸುತ್ತಿದ್ದೀರಾ ? ಶೀಘ್ರವೇ ಪರಿಹರಿಸದಿದ್ದಲ್ಲಿ ಬಹಿರಂಗ ಪ್ರತಿಭಟನೆ ಮಾಡುವೆವು ಎಂಬ ಫಲಕ ಹಾಕಿದ್ದಾರೆ.
ಈ ಬಗ್ಗೆ ಕೈಗಾರಿಕಾ ಅಭಿವೃದ್ಧಿಯ ಸಂಚಾಲಕ ಪ್ರಶಾಂತ್ ಲಾಯಿಲ ಹಾಗೂ ಸಮಿತಿಯವರು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿಗಳನ್ನು ನೀಡಿದ್ದಾರೆ. ಇದೀಗ ಯಾವುದೇ ರೀತಿಯ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಜನರು ಪ್ರತಿಭಟನೆಯ ಹಾದಿಯನ್ನು ಹಿಡಿಯಲು ಮುಂದಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಹೆದ್ದಾರಿ ಗುತ್ತಿಗೆದಾರರು ಎಚ್ಚೆತ್ತುಕೊಂಡು ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.