ಬೆಳ್ತಂಗಡಿ:(ಆ.6) ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ (ರಿ.) ಬೆಳ್ತಂಗಡಿ ತಾಲೂಕು ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ (ಲಿ.) ಬೆಳ್ತಂಗಡಿ ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಇವುಗಳ ಸಹಯೋಗದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಇದರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಕೆಸರ್ ಕಂಡೊಡು ಗೌಡೆರೆ ಗೌಜಿ ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭವು ಆ.18 ರಂದು ವಾಣಿ ಶಿಕ್ಷಣ ಸಂಸ್ಥೆಗಳ ಹಿಂಭಾಗದ ಗದ್ದೆ (ಎ.ಪಿ.ಎಂ.ಸಿ ಸಮೀಪ) ಯಲ್ಲಿ ನಡೆಯಲಿದೆ ಎಂದು ವಾಣಿ ಕಾಲೇಜಿನ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಸಂಘದ ಗೌರವಾಧ್ಯಕ್ಷ ಹೆಚ್. ಪದ್ಮಗೌಡ ಬೆಳಾಲು ಹೇಳಿದರು.
ಇದನ್ನೂ ಓದಿ: 🛑Bangla Violence: ಬಾಂಗ್ಲಾ ಹಿಂಸಾಚಾರಕ್ಕೆ ಕಾರಣವೇನು?
ಬೆಳ್ತಂಗಡಿ ತಾಲೂಕಿನಲ್ಲಿ ಗೌಡ ಸಮುದಾಯದ ಜನರ ಸಂಘಟನೆ ಹಾಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ 1983ರಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಸ್ತಿತ್ವಕ್ಕೆ ಬಂದಿತ್ತು. ತಾಲೂಕು ಸಂಘದ ಸತತ ಪ್ರಯತ್ನದ ಫಲವಾಗಿ 1990ರಲ್ಲಿ ವಾಣಿ ಆಂಗ್ಲ ಮಾಧ್ಯಮ ಶಾಲೆ ಕಾರ್ಯರಂಭವಾಯಿತು. ಇಂದು ವಾಣಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಸೇವೆಯನ್ನು ಸಲ್ಲಿಸುತ್ತಿವೆ. 2004ರಲ್ಲಿ ಪ್ರಾರಂಭವಾದ ವಾಣಿ ಪದವಿಪೂರ್ವ ಕಾಲೇಜು ತಾಲೂಕಿನ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ಬರೆದಿದೆ. 2019ರಲ್ಲಿ ಪ್ರಾರಂಭವಾದ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮೂಲಕ ಆರ್ಥಿಕ ರಂಗಕ್ಕೆ ಪಾದಾರ್ಪಣೆ ಮಾಡಲಾಯಿತು. 2020ರಿಂದ ಸ್ಪಂದನಾ ಸೇವಾ ಸಂಘದ ಮೂಲಕ ಸಮಾಜದ ಆರ್ಥಿಕವಾಗಿ ಹಿಂದುಳಿದ ಅನಾರೋಗ್ಯ ಪೀಡಿತರಿಗೆ, ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಆರ್ಥಿಕ ಸಹಕಾರ ನೀಡುವ ಕೈಂಕರ್ಯವನ್ನು ಕಾರ್ಯಗೊಳಿಸಲಾಗುತ್ತಿದೆ. ಸಮಾಜದ ಪುನರ್ ಸಂಘಟನೆ ಮತ್ತು ಸಮಾಜ ಬಂಧುಗಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಈ ಬಾರಿ “ಕೆಸರು ಕಂಡೊಡು ಗೌಡೆರೆ ಗೌಜಿ ಗಮ್ಮತ್” ಎಂಬ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಬಾಲಕ-ಬಾಲಕಿಯರಿಗೆ ರಿಲೇ ಸ್ಪರ್ಧೆಗಳು, ನೂತನ ದಂಪತಿಗಳಿಗೆ ಉಪ್ಪು ಮುಡಿ ಓಟ, 50 ವರ್ಷ ಮೇಲ್ಪಟ್ಟ ಪುರುಷರಿಗೆ ಲಿಂಬೆ ಚಮಚ ಓಟ, ಮಹಿಳೆಯರಿಗೆ ಸೊಂಟದಲ್ಲಿ ಕೊಡಪಾನ ಇಟ್ಟು ನೀರು ತರುವುದು, 35-45 ವರ್ಷದ ದಂಪತಿಗಳಿಗೆ ಅಡಿಕೆ ಹಾಳೆ ಎಳೆಯುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಅಂತೆಯೇ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಭಾರತೀಯ ಸೇನೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜದ ಬಂಧುಗಳನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾದ ಭೋಜೆ ಗೌಡ ಹಾಗೂ ಯೋಗಾಸನದ ಮೂಲಕ ಗೋಲ್ಡನ್ ಬುಕ್ ವರ್ಲ್ಡ್ ವಿಜೇತರಾದ ಕುಶಾಲಪ್ಪ ಗೌಡ ನೆಕ್ಕರಾಜೆ ಮುಗೆರಡ್ಕ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಿಧ ಗ್ರಾಮ ಸಮಿತಿಗಳ ವತಿಯಿಂದ ಜಾನಪದ ಸಂಸ್ಕೃತಿಯನ್ನು ಬಿಂಬಿಸುವ ಪಥ ಸಂಚಲನ ವಾಣಿ ಶಿಕ್ಷಣ ಸಂಸ್ಥೆಗಳ ಮೈದಾನದಿಂದ ಕ್ರೀಡಾಕೂಟ ನಡೆಯುವ ಗದ್ದೆಯ ವರೆಗೆ ಸಾಗಿಬರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಜೊತೆ ಕಾರ್ಯದರ್ಶಿ ಕೆ.ಎಂ. ಶ್ರೀನಾಥ್, ಮಹಿಳಾ ವೇದಿಕೆಯ ಜೊತೆ ಕಾರ್ಯದರ್ಶಿ ಮೀನಾಕ್ಷಿ ಎನ್. ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಸ್ವಾಗತಿಸಿ, ಯುವ ವೇದಿಕೆ ಅಧ್ಯಕ್ಷ ಚಂದ್ರಕಾಂತ ಗೌಡ ನಿಡ್ಡಾಜೆ ಧನ್ಯವಾದವಿತ್ತರು.