ಪುತ್ತೂರು:(ಆ.6) ಪುತ್ತೂರಿನ ಸಂಪ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ರಿಕ್ಷಾ ಚಾಲಕರೋರ್ವರು ಕೆರೆಗೆ ಹಾರಿ ಆತ್ಮಹತ್ಯೆಗೈದ ಘಟನೆ ಸಂಪ್ಯ ಕೊಲ್ಯ ಎಂಬಲ್ಲಿ ಆ. 6ರಂದು ನಡೆದಿದೆ. ಮೂಲತಃ ಪುರುಷರಕಟ್ಟೆಯ ಪಾಪೆತ್ತಡ್ಕ ನಿವಾಸಿ ಮಹಮ್ಮದ್ (48 ವ.) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ.
ಸಂಪ್ಯದ ಕೊಲ್ಯ ಎಂಬಲ್ಲಿರುವ ಗಣಪತಿ ವಿಗ್ರಹ ವಿಸರ್ಜನೆಯ ಕೆರೆಗೆ ಮಹಮ್ಮದ್ ರವರು ಹಾರಲು ಯತ್ನಿಸಿದ ವೇಳೆ ಸುತ್ತಮುತ್ತಲಿನವರು ಬೊಬ್ಬೆ ಹಾಕಿ ಹಾರದಂತೆ ಹೇಳಿದ್ದಾರೆ. ಆದರೂ ‘ಸಾಯುತ್ತೇನೆ’ ಎಂದು ಹೇಳಿ ಮಹಮ್ಮದ್ ರವರು ಕೆರೆಗೆ ಹಾರಿದ್ದಾರೆ ಎನ್ನಲಾಗಿದೆ.
ತಕ್ಷಣ ಸ್ಥಳೀಯ ರಿಕ್ಷಾ ಚಾಲಕರು, ಸಾರ್ವಜನಿಕರು ಸ್ಥಳದಲ್ಲಿ ಸೇರಿದಾಗಲೂ ಮಹಮ್ಮದ್ ರವರು ನೀರಿನಲ್ಲಿ ಮೇಲೆ ಕೆಳಗೆ ಹೋಗುತ್ತಿದ್ದರು. ಮಾಹಿತಿ ತಿಳಿದು ಪೊಲೀಸರು ಬರುವಾಗ ಮಹಮ್ಮದ್ ರವರು ನೀರಿನಲ್ಲಿ ಸಂಪೂರ್ಣ ಮುಳುಗಿದ್ದರು. ಪೊಲೀಸರು ಮತ್ತು ರಿಕ್ಷಾ ಚಾಲಕ ಪ್ರತಾಪ್ ಸಂಪ್ಯ ರವರು ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಪುತ್ತೂರಿನ ಸಂಪ್ಯ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.