ಮಂಗಳೂರು :(ಆ.7) ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಮುಕ್ತವಾಗಿ ಸಂಚರಿಸಲು ಅನುಮತಿ ನೀಡಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: 🛑ಮಂಗಳೂರು: ಜೋಕಟ್ಟೆಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಬಾಲಕಿಯ ಬರ್ಬರ ಹತ್ಯೆ..!
ಜಿಲ್ಲಾಧಿಕಾರಿಗಳು ಈ ಸಂಬಂಧ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಯನ್ನು ಹಿಂಪಡೆದಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳು ಜು.26ರಂದು ಆದೇಶ ಹೊರಡಿಸಿದ್ದರೂ ತಡವಾಗಿ ಇದು ಬಹಿರಂಗಗೊಂಡಿದೆ.
ವಲಯ 1-ರಲ್ಲಿ ಎಲ್ಲ ಆಟೋರಿಕ್ಷಾಗಳೊಂದಿಗೆ ಇ- ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಒಳಗೊಂಡಂತೆ ಆಟೋ ರಿಕ್ಷಾದ ಮಧ್ಯ ಭಾಗದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿ ಯಾಗಿ ಬಳಿಯುವುದು ಹಾಗೂ ಆಟೊ ರಿಕ್ಷಾದ ಮಧ್ಯಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯುವುದು. ವಲಯ ಸಂಖ್ಯೆ (1)ಕ್ಕೆ ಚೌಕಾಕೃತಿ ಆಕಾರದ ಆಕಾಶ ನೀಲಿ ಬಣ್ಣದ ಸ್ಟಿಕ್ಕರ್ /ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖಾ ವತಿಯಿಂದ ಪಡೆದು ಅಂಟಿಸಿಕೊಳ್ಳುವಂತೆ ಆದೇಶ ಹೊರಡಿಸಲಾಗಿತ್ತು.
ವಲಯ 2 ರಲ್ಲಿ ಇ-ಆಟೋರಿಕ್ಷಾಗಳು ಹಾಗೂ ಮೆಥನಾಲ್ ಮತ್ತು ಇಥನಾಲ್ ಬಳಸಿ ಸಂಚರಿಸುವ ಆಟೋರಿಕ್ಷಾಗಳು ಇದೇ ರೀತಿ ಬಣ್ಣ ಬಳಿಯಬೇಕು. ವಲಯ ಸಂಖ್ಯೆ (2)ಕ್ಕೆ ವೃತ್ತಾಕಾರದ ಹಳದಿ ಬಣ್ಣದ ಸ್ಟಿಕ್ಕರ್/ಗುರುತಿನ ಸಂಖ್ಯೆಗಳನ್ನು ಪೊಲೀಸ್ ಇಲಾಖಾ ವತಿಯಿಂದ ಪಡೆದು ಅಂಟಿಸಿಕೊಳ್ಳುವಂತೆ ಈ ಹಿಂದೆ ನೀಡಲಾಗಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಇದೀಗ ನೀಡಲಾದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರ್‌ಟಿಒ ಅಧಿಕಾರಿಗಳಿಗೆ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಮೋಟಾರು ವಾಹನ ಕಾಯ್ದೆಯಂತೆ ಪಾರ್ಕಿಂಗ್ ಸ್ಥಳಗಳನ್ನು ಮತ್ತು ಆಟೋ ರಿಕ್ಷಾ ನಿಲುಗಡೆ ಸ್ಥಳಗಳನ್ನು ನಿರ್ಧರಿಸಲು ಮಂಗಳೂರು ನಗರದಲ್ಲಿ ಮಹಾನಗರಪಾಲಿಕೆ ಆಯುಕ್ತರು ಹಾಗೂ ಇತರೆ ಪ್ರದೇಶಗಳಲ್ಲಿ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಿ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.