ಕೋಲಾರ:(ಆ.9) ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸಿ ಕಷ್ಟಪಟ್ಟು ಮನೆಯವರನ್ನೂ ಒಪ್ಪಿಸಿ ಮದುವೆಯಾಗಿದ್ದ ಜೋಡಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೊಡೆದಾಡಿಕೊಂಡು ಮಸಣ ಸೇರಿದ್ದಾರೆ. ಈ ಘಟನೆ ಇಡೀ ಕೋಲಾರವನ್ನೇ ಬೆಚ್ಚಿಬೀಳಿಸಿದ್ದು, ಇವರ ಸಾವಿಗೆ ನಿಖರ ಕಾರಣ ಮಾತ್ರ ತಿಳಿದು ಬಂದಿಲ್ಲ. ಆದರೆ ಒಂದಿಲ್ಲೊಂದು ಬೆಳವಣಿಗೆಗಳು ನಡೆಯುತ್ತಿವೆ. ನಿನ್ನೆ ಆ ಕೊಲೆಯಲ್ಲಿ ಮೂರನೇ ವ್ಯಕ್ತಿ ಇರುವ ಶಂಕೆ ವ್ಯಕ್ತವಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ಅಂಶಗಳು ಬಯಲಾಗಿವೆ. ಅಲ್ಲದೆ ಜನ ಸೇನೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನವೀನ್ ಗ್ರಾಮ ಪಂಚಾಯಿತಿ ಚುನಾವಣೆಗೂ ಸ್ಪರ್ಧಿಸಿದ್ದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ; 🔴Paris Olympics 2024: ಹಾಕಿಯಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡ
ಮದುವೆಗಾಗಿ ಮನೆ ಮುಂದೆ ಹಾಕಿದ್ದ ಚಪ್ಪರ, ಹೂವು ಬಾಡಿಲ್ಲ. ಮದುವೆಗೆಂದು ಬಂದಿದ್ದ ಕುಟುಂಬಸ್ಥರು ವಾಪಾಸ್ ಆಗಿಲ್ಲ. ಆದರೆ ಮುಂಜಾನೆ ಮದುವೆಯಾಗಿ ಅರುಂಧತಿ ನಕ್ಷತ್ರ ನೋಡಿ ಮನೆ ಸೇರಿಕೊಂಡಿದ್ದ ದಂಪತಿ ಸಂಜೆ ಪರಸ್ಪರ ಬಡಿದಾಡಿಕೊಂಡು ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಂಬಾರಸನಹಳ್ಳಿ ಗ್ರಾಮದಲ್ಲಿ ಲಿಖಿತಾಶ್ರೀ ಹಾಗೂ ನವೀನ್ ಮೃತಪಟ್ಟಿದ್ದಾರೆ.
ಸಂಜೆ ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡ ದಂಪತಿ ಪರಸ್ಪರ ಹೊಡೆದಾಡಿಕೊಂಡಿದ್ದರು. ಲಿಖಿತಾಶ್ರೀ ಕೆಜಿಎಫ್ ಆಸ್ಪತ್ರೆಯಲ್ಲಿ ಮೊನ್ನೆ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ನವೀನ್ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿನ್ನೆ ಪ್ರಾಣಬಿಟ್ಟಿದ್ದಾರೆ. ಈ ಘಟನೆಯಲ್ಲಿ ದಂಪತಿ ಬಾಳು ಅಂತ್ಯವಾಗಲು ನಿಖರ ಕಾರಣವೇನೆಂಬುವುದು ಪತ್ತೆಯಾಗಿಲ್ಲ. ಆದರೆ ಮೂರನೇ ವ್ಯಕ್ತಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸದ್ಯ ನವ ವಧು ವರನ ಮರಣೋತ್ತರ ಪರೀಕ್ಷೆಯಲ್ಲಿ ಕೆಲವು ಅಂಶಗಳು ಬಯಲಾಗಿವೆ.
ಮರಣೋತ್ತರ ಪರೀಕ್ಷೆಯಲ್ಲಿ ಮತ್ತಷ್ಟು ಅಂಶಗಳು ಬಯಲು:
ಲಿಖಿತಾಶ್ರೀ ಬಲ ಅಂಗೈ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವರ ನವೀನ್ ತಲೆಯ ನೆತ್ತಿಯ ಭಾಗ ಹಾಗೂ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದ ಗಾಯಗಳಾಗಿವೆ. ಮೊದಲು ಲಿಖಿತಶ್ರೀ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ನಂತರ ತಾನೂ ತಲೆಗೆ ಮಚ್ಚಿನಿಂದ ಹೊಡೆದುಕೊಂಡಿದ್ದಾನೆ ಎಂಬ ಶಂಕೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ವ್ಯಕ್ತವಾಗಿದೆ. ಲಿಖಿತಶ್ರೀ ನವೀನ್ ಮೇಲೆ ಹಲ್ಲೆ ಮಾಡಿಲ್ಲ ಅನ್ನೋದು ಸ್ಪಷ್ಟವಾಗಿದೆ. ಇಬ್ಬರಿಗೂ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆ ಒಬ್ಬರೂ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಸದ್ಯ ಕೋಲಾರ ಜಿಲ್ಲೆ ಕೆಜಿಎಫ್ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ದ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.