Thu. Dec 26th, 2024

Feature Story: ಮತ್ತೊಮ್ಮೆ ಮಗುವಾಗುವಾಸೆ..!

Feature Story: ಅಂದು ಜೋರು ಮಳೆ… ಸಿಡಿಲು… ತಂಪು ನೀರು ಕುಡಿದು ದಿಂಬಿಗೆ ತಲೆ ಒರಗಿಸಿದೆ, ನಿದ್ರಾದೇವಿ ಆವರಿಸಿದಳು. ಒಂದು ಕ್ಷಣ ನಿದ್ರೆಯಲ್ಲಿ ಅಮ್ಮ ಕಣ್ಮುಂದೆ ಬಂದಳು ಕನಸಿನಲ್ಲಿ ಅಮ್ಮನ ನೆನಪು ಕಾಡತೊಡಗಿತು. ನನ್ನಮ್ಮ ಒಂದೇ ಸೀರೆಯಲ್ಲಿ ಜೀವನ ಸಾಗಿಸುತ್ತಿದ್ದಳು, ದಿನ ಬೆಳಗಾದರೆ ಸೂರ್ಯನಂತೆ ಹೊಳೆಯುತ್ತಿದ್ದ ಮುಖ ಅವಳದ್ದು, ಮುಖದಲ್ಲಿ ಮಂದಹಾಸ, ಮುಗ್ಧತೆ ಎದ್ದು ಕಾಣುತ್ತಿತ್ತು. ಚಟುವಟಿಕೆ, ಲವಲವಿಕೆಯಿಂದ ಎಲ್ಲಾ ಕೆಲಸಗಳನ್ನು ನಿಭಾಯಿಸುತ್ತಿದ್ದಳು. ನನಗೇನು ಬೇಕು ಎಂದು ಮೊದಲೇ ಅರಿತಿದ್ದ ಅವಳು ನಾನು ಕೇಳುವ ಮೊದಲೇ ಕೊಡುತ್ತಿದಳು..ಎದ್ದು ಪಾಪು… ಶಾಲೆಗೆ ತಡ ಆಯ್ತು.. ಎಂದು ಕೂಗುತ್ತ ಬಂದಳು. ಅಪ್ಪ ನನ್ನನ್ನು ರೆಡಿ ಮಾಡಿಸಿ, ತಲೆ ಬಾಚಿದರೇ, ಅಮ್ಮ ತುತ್ತು ತಿನ್ನಿಸುತ್ತ ಇದ್ದಳು.

ಅಪ್ಪನ ಕೆಲಸಕ್ಕೆ ತಡವಾಗುತ್ತಿದ್ದರೂ ಸ್ಕೂಲಿಗೆ ಕರೆದುಕೊಂಡು ಹೋಗುತ್ತಿದ್ದರು. ನನ್ನನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು. ಬಹುತೇಕ ಅಲ್ಲಿ ಬರುತ್ತಿದ್ದ ಎಲ್ಲರೂ ಶ್ರೀಮಂತರ ಮಕ್ಕಳು, ಅಪ್ಪನಿಗೆ ಬರುತ್ತಿದ್ದ 500 ರೂ ಸಂಬಳದಲ್ಲಿ ಹೇಗೆ ಅಷ್ಟು ದೊಡ್ಡ ಶಾಲೆಗೆ ಸೇರಿಸಿದ್ದರು, ಮನೆಯ ಜೊತೆ ನನ್ನ ಇಷ್ಟ ಕಷ್ಟಗಳನ್ನು ಹೇಗೆ ನಿಭಾಯಿಸುತ್ತಿದ್ದರೋ ಗೊತ್ತಿಲ್ಲ. ಹೀಗಿರುವಾಗ ಅಮ್ಮ ದಿನಾಲೂ ಬಿರು ಬಿಸಿಲಿನಲ್ಲಿ ನಡೆದುಕೊಂಡೇ ಮಧ್ಯಾಹ್ನ ಬಿಸಿ ಬಿಸಿ ಊಟವನ್ನು ಶಾಲೆಗೆ ತರುತ್ತಿದಳು, ಸ್ನೇಹಿತರೆಲ್ಲ ಬಗೆ ಬಗೆಯ ತಿಂಡಿ ತಿನಿಸುಗಳು, ಸಿಹಿ ಪದಾರ್ಥಗಳನ್ನು ತಂದು ತಿನ್ನುತ್ತಿದ್ದರು. ನಾನು ಬೇರೆಯವರ ಊಟ, ಅವರು ತರುತ್ತಿದ್ದ ತಿಂಡಿಯನ್ನು ನೋಡಿ ಆಸೆ ಪಡುತ್ತೇನೆ ಎಂದು ಭಾವಿಸಿ, ಮನೆಯ ಹತ್ತಿರವೇ ಇದ್ದ ಶೆಟ್ಟರ ಅಂಗಡಿಯಲ್ಲಿ ಸಾಲ ಮಾಡಿ 5 ರೂ ಬಿಸ್ಕೇಟ್ ತರುತ್ತಿದ್ದಳು. ಒಮ್ಮೊಮ್ಮೆ ಶೆಟ್ಟರು ಸಹ ಸಾಲ ನೀಡುತ್ತಿರಲಿಲ್ಲ. ಬೇಸರದಿಂದಲೇ ಅಮ್ಮ ಶಾಲೆಗೆ ಬರುತ್ತಿದ್ದಳು. ಶಾಲೆ ಬಿಟ್ಟ ಕೂಡಲೆ ಮನೆಯ ಬಾಗಿಲಲ್ಲಿ ನಿಂತು ಕಾಯುತ್ತಾ ಬಂದ ಕೂಡಲೇ ತಬ್ಬಿ, ಮುದ್ದಾಡಿ ಮನೆಗೆ ಕರೆದುಕೊಂಡು ಹೋಗಿ ಊಟ ಮಾಡಿಸುತ್ತಿದಳು. ಯಾಕೆ ಶಾಲೆಗೆ ಬೇಗ ಬರನಿಲ್ಲ ಎಂದು ಕೇಳಿದರೇ.. ಏನೇನೋ ಉತ್ತರ ಹೇಳಿ ತಿನ್ನಿಸುತ್ತಿದ್ದಳು.

ಅಂದು ಭಾನುವಾರ.. ಅಮ್ಮ ಬೆಳಗ್ಗೆ ಬೇಗ ಎದ್ದು, ಮನೆ ಮುಂದೆ ಕಸ ಗುಡಿಸುತ್ತಿದ್ದರೇ, ಅವಳೊಟ್ಟಿಗೆ ನಾನು ಎದ್ದು ಚಿಕ್ಕ ಪೊರಕೆ ಹಿಡಿದು ಗುಡಿಸುತ್ತಿದ್ದೆ. ಅಮ್ಮ, ನಾನು ಮಾಡುವುದನ್ನು ನೋಡಿ ಖುಷಿ ಪಡುತ್ತಿದ್ದಳು. ಅಂಗಳಕ್ಕೆ ನೀರು ಹಾಕಿ, ಚುಕ್ಕಿ ಇಟ್ಟು ರಂಗೋಲಿಯನ್ನು ಬಿಡಿಸುತ್ತಿದ್ದನ್ನು ನೋಡುವುದೇ ಖುಷಿ ಸಿಗುತ್ತಿತ್ತು. ಭಾನುವಾರದಂದು ನನ್ನ ಆಟ ಜೋರು, ಸ್ನೇಹಿತರ ಮನೆಗೆ ಹೋದರೆ ಸಮಯಕ್ಕೆ ಸರಿಯಾಗಿ ಹಿಂದಿರುಗುತ್ತಿರನಿಲ್ಲ ಎಂದು ಒಮ್ಮೊಮ್ಮೆ ಪೆಟ್ಟು ಕೊಡುತ್ತಿದ್ದಳು. ಹಾಗೆ ಸಮಾಧಾನವೂ ಮಾಡುತ್ತಿದ್ದಳು, ನನ್ನ ವಿದ್ಯಾಭ್ಯಾಸದಲ್ಲಿ ನನಗಿಂತ ಅಮ್ಮನಿಗೆ ಭಯ ಜಾಸ್ತಿ. ಆದರೂ ಹೇಗೋ ಕಷ್ಟ ಪಟ್ಟು ಓದಿಸಿ. ಅರ್ಥ ಮಾಡಿಸುವಷ್ಟರಲ್ಲಿ ಭಾನುವಾರ ರೈಲಿನ ಹಾಗೆ ಬೇಗನೆ ಓಡುತ್ತಿತ್ತು.

ನಾವಿದ್ದ ಮನೆ ಚಿಕ್ಕದು, ಅಲ್ಲಿ ಇಲಿ, ಜಿರಳೆ ಹೀಗೆ ಅನೇಕ ಕೀಟಗಳು, ಹುಳುಗಳ ಕಾಟ. ನಾನು ಹುಟ್ಟಿದ ದಿನದಂದೇ ಅಪ್ಪ ಮನೆಗೆ ಟಿವಿ ತಂದರಂತೆ, ಅದು ಸಹ ನನ್ನ ದೊಡ್ಡಪ್ಪನ ಮನೆಯ ಟಿವಿ. ಟಿವಿ ಬಂದಮೇಲೆ ಬಹಳ ಖುಷಿಯಿಂದ ಕುಣಿದಾಡಿದೆ. ಶಾಲೆಯಲ್ಲೂ ಟಿವಿಯದ್ದೆ ಚಿಂತೆ. ಅದೊಂದು ದಿನ ಶಾಲೆಗೆಯಿಂದ ಬರುವಾಗ ದಾರಿಯಲ್ಲಿ ಒಂದು ನಾಯಿ ಮರಿ ಸಿಕ್ಕಿತು. ನೋಡಲು ಬಹಳ ಮುದ್ದಾಗಿತ್ತು. ಸುಮ್ಮನೆ ಮುಟ್ಟಲು ಹೋದೆ, ಸ್ವಲ್ಪ ಹೊತ್ತು ಅದರೊಟ್ಟಿಗೆ ಇದ್ದು ತಲೆ ಸವರುತ್ತಾ ನಾಯಿ ಮರಿಯನ್ನು ಅಲ್ಲೇ ಬಿಟ್ಟು ಮನೆಗೆ ಬಂದೆ. ಹಿಂದೆ ತಿರುಗಿ ನೋಡಿದರೆ ನಾಯಿ ಮರಿಯು ನನ್ನ ಜೊತೆಯೇ ಬಂದಿದೆ. ಅಮ್ಮ ಅಪ್ಪನಿಗೆ ನಾಯಿ ನನ್ನ ಜೊತೆ ಬಂದಿದೆ ಅದು ನಮ್ಮ ಮನೆಯಲ್ಲಿ ಇರಲಿ ಎಂದು ಹೇಳಿದೆ. ಬೇಡವೆಂದರೂ ನನಗಾಗಿ ನಾಯಿ ಮರಿಯನ್ನು ಸಾಕಲು ಸಮ್ಮತಿ ನೀಡಿದರು. ಮರುದಿನ ಶಾಲೆಗೂ ನಾಯಿ ಮರಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹಠ ಹಿಡಿದ್ದೆ, ಅಮ್ಮ ಸಮಾಧಾನ ಮಾಡಿಸಿ ನಾಯಿ ಮರಿಗೆ ಬೇರೆ ಶಾಲೆಗೆ ಸೇರಿಸೋಣ ಎಂದು ನನ್ನನ್ನು ನಂಬಿಸಿ ಶಾಲೆಗೆ ಬಿಡುತ್ತಿದ್ದಳು.

ನಾಯಿ ಮರಿಗೆ ಚಿಂಟು ಎಂದು ನಾಮಕರಣ ಮಾಡಿದ್ದರು, ಚಿಂಟು ಅಮ್ಮನೇ ಇಟ್ಟ ಹೆಸರು. ನನ್ನದು ವಿದ್ಯಾಭ್ಯಾಸ ಸಾಗುತ್ತಾ ಸಾಗುತ್ತಾ ಹತ್ತನೇ ತರಗತಿ ಮುಗಿದು. ಫಲಿತಾಂಶವು ಬಂತು. ಮುಂದೆ ಪಿಯುಸಿಗೆ ಹೋಗಬೇಕಲ್ಲ, ನಮ್ಮ ಸಂಬಂಧಿಕರೆಲ್ಲ ಮೈಸೂರಿನಲ್ಲಿ ಇದ್ದದ್ದು. ನಾನಿದ್ದ ಊರಿನಲ್ಲಿ ಪಿಯುಸಿ ತರಗತಿ ಇದ್ದರು ನನಗೆ ಸೇರಲು ಇಷ್ಟವಿರಲಿಲ್ಲ. ಅಮ್ಮ ಅಪ್ಪನಿಗೆ ನನ್ನನ್ನು ದೂರ ಕಳಿಸುವ ಮನಸ್ಸು ಮಾಡನಿಲ್ಲ. ಆದರೆ ನನ್ನ ಹಠದಿಂದಲೇ. ಅಪ್ಪ ಆಯಿತು ಎಂದು ಮನಸಿಲ್ಲದೆ ಒಪ್ಪಿದರು.

ದೊಡ್ಡಪ್ಪನ ಮನೆಯಲ್ಲಿ ಇರಲು ಅನುಮತಿ ಸಿಕ್ಕಿತು. ಮೈಸೂರಿಗೆ ಹೋಗಬೇಕಾದ ಹಿಂದಿನ ದಿನ ಅಮ್ಮ ಬಹಳ ಬೇಸರದಿಂದಲೇ ಇದ್ದಳು. ಕಣ್ಣಿನಲ್ಲಿ ನೀರು ತುಂಬಿತ್ತು. ಅಮ್ಮಾ.. ಎಂದು ಹಿಂಬದಿಯಿಂದ ತಬ್ಬಿದೆ ಅಮ್ಮನ ಕಣ್ಣೀರು ನನ್ನ ಕೈ ಮೇಲೆ ಜಿನುಗುತ್ತಿತ್ತು. ಅಮ್ಮನ ಮಾತು ಒಂದೇ ನೀನು ಅಷ್ಟು ದೂರ ಹೋಗಬೇಕಾ..!! ನೀನು ಹೋದರೆ ನಾನು ಇಲ್ಲಿ ಒಂಟಿ ಆಗುತ್ತೇನೆ ಎಂದು ಅಳುತ್ತಿದಳು. ಅಪ್ಪ ಅಮ್ಮನಿಗೆ ಅವಳು ಪಿಯುಸಿ ಮುಗಿಸಿ ಬರುತ್ತಾಳೆ. ಎಲ್ಲಿ ಹೋಗುತ್ತಾಳೆ? ಎಂದು ಅಮ್ಮನನ್ನು ಸಮಾಧಾನ ಮಾಡುತ್ತಿದ್ದರು.

ನಾಳೆ ಹೊರಡುವ ದಿನ ಬಂದೇ ಬಿಟ್ಟಿತು ಅಮ್ಮ ನನಗಾಗಿ ತಿನ್ನಲು ಚಕ್ಕುಲಿ, ಕೋಡುಬಳೆ ಅಂತ ತಿಂಡಿಯನ್ನು ಡಬ್ಬಿಯಲ್ಲಿ ಹಾಕಿ ನನ್ನ ಬ್ಯಾಗಿಗೆ ತುಂಬಿದರು. ತಬ್ಬಿಕೊಂಡು ಹಣೆಯ ಮೇಲೆ ಮುತ್ತು ಇಟ್ಟು ಹೋಗಿ ಬಾ ಮಗಳೇ ಎಂದು ಕಣ್ಣೀರಿಟ್ಟರು. ಅಮ್ಮನಿಗೆ ನಾನು ದೇಶವನ್ನೇ ಬಿಟ್ಟು ಹೋಗುತ್ತಿದ್ದೇನೆ ಎಂಬ ಅನುಭವ ಕಾಡುತಿತ್ತು. ಆದರೂ ಹೋಗಲೇ ಬೇಕಲ್ಲ, ಮುಂದಿನ ವಿದ್ಯಾಭ್ಯಾಸ ಮಾಡ್ಬೇಕು ಎಂದು ಮನಸಿನಲ್ಲಿ ಅಂದುಕೊAಡು ಮೈಸೂರಿನ ಬಸ್ ಹತ್ತಿದೆ. ನನಗರಿವಿಲ್ಲದೆ ಕಣ್ಣಿನಿಂದ ನೀರು ಜಾರಿತು. ಹೇಗೋ ಧೈರ್ಯ ಮಾಡಿ ಪ್ರಯಾಣ ಆರಂಭಿಸಿದೆ.

ಕಾಲೇಜು ದಿನಗಳ ಪಯಣ:
ಹೊಸ ಊರು, ಗೊತ್ತಿಲ್ಲದ ಮಾರ್ಗ ಎಲ್ಲವೂ ಒಮ್ಮೆ ಭಯ ಹುಟ್ಟಿಸಿತು. ಮೊದಲ ದಿನ ನನ್ನ ದೊಡ್ಡಪ್ಪನ ಮಗಳು ಕರೆದುಕೊಂಡು ಹೋಗಿ ಕಾಲೇಜಿಗೆ ಸೇರಿಸಿದಳು. ಎರಡು ಮೂರು ದಿನ ಕಾಲೇಜಿಗೆ ಬಿಟ್ಟು ಕರೆದುಕೊಂಡು ಹೋಗುತ್ತಿದ್ದಳು. ಅಂದಿನಿಂದ ನನ್ನ ಕೆಲಸವನ್ನು ನಾನೇ ಮಾಡಿಕೊಳ್ಳುವ ಪರಿಸ್ಥಿತಿ ಬಂದಿತು. ಮನೆಯಲ್ಲಿ ಅಮ್ಮ ನನ್ನ ಎಲ್ಲಾ ಕೆಲಸಗಳನ್ನು ಮಾಡಿ ಕೊಡುತ್ತಿದ್ದಳು. ಇಲ್ಲಿ ಪ್ರತಿಯೊಂದಕ್ಕೂ ನಾನೇ.. ಜಾಸ್ತಿ ಮಾತನಾಡುವ ಹಾಗಿಲ್ಲ, ಓಡಾಡುವ ಅವಕಾಶ ಇರನಿಲ್ಲ. ಹೊಸ ಊರಿನಲ್ಲಿ ಎಲ್ಲಿ ಹೋಗಬೇಕು ಎಂದು ಗೊತ್ತಿಲ್ಲ. ಹೊಸ ಸ್ನೇಹಿತರ ಪರಿಚಯವಾಯಿತು. ನಾನು ದಿನ ಕಾಲೇಜಿಗೆ ನಡೆದುಕೊಂಡೇ ಹೋಗಬೇಕು ಎಂದು ತಿಳಿದು, ನನಗೆ ಅಂತ ಅಪ್ಪ ಮೈಸೂರಿನಲ್ಲಿ ಸೈಕಲ್ ಕೊಡಿಸಿದ್ದರು. ದಿನಾಲು ಬೆಳಗ್ಗೆ 6 ಗಂಟೆ ಎದ್ದು, ಕಾಲೇಜಿಗೆ ರೆಡಿ ಆಗಿ, ಸಮವಸ್ತ್ರ ಧರಿಸಿ ತಿಂಡಿ ತಿಂದು ಹೋಗುತ್ತಿದ್ದೆ. ಕೆಲವೊಮ್ಮೆ ಮನೆಯಲ್ಲಿ ತಿಂಡಿ ಸಿಕ್ಕಿದರೆ ಪುಣ್ಯ ಇಲ್ಲವಾದರೆ.. ಕಾಫಿಯಲ್ಲೇ ದಿನ ಕಳೆದುಹೋಗುತ್ತಿತ್ತು.

ಮನೆಯಿಂದ 2 ಕಿಲೋ ಮೀಟರ್ ಅಷ್ಟು ದೂರದಲ್ಲಿರುವ ಕಾಲೇಜಿಗೆ ಸೈಕಲ್ ನಲ್ಲಿ ದಿನಾ ಹೋಗಿ ಬರಬೇಕಿತ್ತು. ಕಾಲೇಜಿನಲ್ಲಿ ಸೈಕಲ್ ನೋಡಿ ಅಡಿಕೊಳ್ಳುತ್ತಿದ್ದವರೇ ಹೆಚ್ಚು.. ಹೀಗಿರುವಾಗ ಕಾಲೇಜಿನಲ್ಲಿ ಕೆಲವರು ಸೈಕಲ್ ಚಕ್ರದ ಗಾಳಿಯನ್ನು ಬಿಡುತ್ತಿದ್ದರು. ಆ ದಿನವೆಲ್ಲಾ ನಡೆದುಕೊಂಡೇ ಮನೆಗೆ ಹೋಗಬೇಕು. ನನ್ನ ಹತ್ತಿರ ದುಡ್ಡು ಇರುತ್ತಿರಲಿಲ್ಲ. ಮನೆಯಲ್ಲಿ ಹೇಳಿ ದುಡ್ಡು ಕೇಳಿ ಸೈಕಲ್‌ಗೆ ಗಾಳಿ ಹಾಕಿಸಿ ಬರುತ್ತಿದ್ದೆ.

ಪಿಯುಸಿ ಹೇಗೋ ಮುಗಿಯತು. ಅಲ್ಲಿಯೇ ಪದವಿ ಮಾಡಲು ನಿರ್ಧರಿಸಿದೆ. ಒಳ್ಳೆಯ ವಿಷಯ ಆರಿಸಿಕೊಂಡು ಓದಲು ಶುರು ಮಾಡಿದೆ. ಓದಿಗೆ ಶಿಕ್ಷಕರು ಸಾಥ್ ನೀಡುತ್ತಿದ್ದರು. ಅಮ್ಮ ಆಗಾಗ ಫೋನ್ ಮಾಡುತ್ತಿದ್ದರು. ಅಮ್ಮನ ದನಿ ಕೇಳಿದಾಗ ಏನೋ ಒಂಥರಾ ನೋವು, ದುಗುಡ ಮನೆಮಾಡುತಿತ್ತು. ಅಂದು ನಾನು ಮನೆಯಿಂದ ಹೊರಗೆ ಬಂದ ಮೇಲೆ ಅಮ್ಮನಿಗೆ ಸರಿಯಾಗಿ ನಿದ್ರೆ ಇರುತ್ತಿರನಿಲ್ಲ ಎಂದು ಅಪ್ಪ ಆಗಾಗ ಫೋನ್ ಮೂಲಕ ಹೇಳುತ್ತಿದ್ದರು. ಅಮ್ಮನ ನನ್ನ ಮೇಲೆ ಅವಲಂಬಿತಳಾಗಿದ್ದಳು ಎಂದು ತಿಳಿಯಿತು.

ಹೊರಗೆ ಜೋರು ಮಳೆ,ಸಿಡಿಲು..
ಮಗು ಎದ್ದು ಸಮಯ ಆಯ್ತು…
ಪಾಪು ಎದ್ದು ಸ್ಕೂಲಿಗೆ ಹೋಗಬೇಕು ಎಂದು ಕರೆದಹಾಗೆ ಭಾಸವಾಯಿತು.. ಒಮ್ಮೆಲೆ.., ಸಿಡಿಲಿಗೆ ಎದೆ ಝಲ್!!! ಎಂದಿತು. ನಿದ್ರೆ ಇಂದ ಎಚ್ಚರವಾಯಿತು, ನೋಡಿದರೆ ನಾನು ಇದ್ದದ್ದು ಮೈಸೂರಿನಲ್ಲಿ…ಕಣ್ಣು ಒದ್ದೆಯಾಗಿತ್ತು.. ಇಷ್ಟು ಹೊತ್ತು ಕಂಡಿದ್ದೆಲ್ಲಾ ಕನಸಾ..? ಚಿಕ್ಕವಯಸ್ಸಿನಲ್ಲಿ ಆದ ನೆನಪುಗಳು ಮರುಕಳುಸಿತ್ತು..

ಸಮಯ ಸಂಜೆ 6 ಗಂಟೆ ಆಗಿತ್ತು ಇನ್ನೂ ತಡ ಮಾಡೋದು ಬೇಡ ಎಂದನಿಸಿ.. ಬಟ್ಟೆ ಬರೆಯನ್ನು ತಕ್ಷಣವೇ ಬ್ಯಾಗಿಗೆ ಹಾಕಿಕೊಂಡೆ, ದೊಡ್ಡಮ್ಮ ದೊಡ್ಡಪ್ಪ ಇಬ್ಬರ ಕಾಲಿಗೂ ನಮಸ್ಕರಿಸಿ..ಬೇಗನೆ ಮಳೆಯಲ್ಲೇ ಊರಿನ ಬಸ್ ಹತ್ತಿದೆ. ಅಮ್ಮನನ್ನು ನೋಡುವ ಹಂಬಲ ಹೆಚ್ಚಾಯಿತು, ಡ್ರೈವರ್ ಬೇಗ ಬಸ್ ಓಡಿಸಿ ಎನ್ನುವ ಹಾಗಿಲ್ಲ. ಮನದಲ್ಲಿ ತವಕ, ಅಮ್ಮನ ನೋವು ಅರ್ಥ ಮಾಡಿಕೊಳ್ಳದೆ ಇಷ್ಟು ದೂರ ಬಂದೆನಲ್ಲ ಎನ್ನುವ ಪಾಪ ಪ್ರಜ್ಞೆ ಮೂಡಲು ಆರಂಭಿಸಿತು. ಇನ್ನು ಮುಂದೆ ಮನೆ ಇಂದಲೇ ಕಾಲೇಜಿಗೆ ಹೋಗುವ ನಿರ್ಧಾರ ಮಾಡಿದೆ..

ಅಮ್ಮನಿಗೆ ಫೋನ್ ಮಾಡಿ ಬರುವ ವಿಷಯವನ್ನು ತಿಳಿಸಿದೆ..ಅಮ್ಮನಿಗೆ ಆದ ಸಂತೋಷವನ್ನು ಅವರ ಧ್ವನಿಯ ಮೂಲಕ ತಿಳಿದುಕೊಂಡೆ. ಊರು ಸಮೀಪ ಬರುತ್ತಿದ್ದಂತೆಯೇ ಅಮ್ಮನನ್ನು ನೋಡುವ ತವಕ ಹೆಚ್ಚಾಯಿತು. ಮನೆಗೆ ರಿಕ್ಷಾ ಮಾಡಿಕೊಂಡು ಹೊರಟೆ, ನಾನಿದ್ದ ಊರು, ನಾನು ಓಡಾಡಿದ್ದ ಜಾಗಗಳನ್ನು ನೋಡಿ ಬಹಳ ಖುಷಿ ಆಯಿತು. ಮನೆಗೆ ಬಂದ ಕೂಡಲೇ ನಮ್ಮ ಮನೆಯ ಮುಂದೆ ಅಮ್ಮ ನನಗಾಗಿ ಕಾಯುತ್ತಿರುವುದನ್ನು ಕಂಡು ಚಿಕ್ಕವಯಸ್ಸಿನಲ್ಲಿ ಶಾಲೆಯಿಂದ ನನಗಾಗಿ ಕಾಯುತ್ತಿದ್ದ ದೃಶ್ಯ ಎದುರಾಯಿತು.

ಮನೆ ಒಳಗೆ ಬಂದ ಕೂಡಲೇ ಅಮ್ಮ ನನ್ನನ್ನು ನೋಡಿ ತಬ್ಬಿಕೊಂಡರು. ತಬ್ಬಿಕೊಂಡ ಕ್ಷಣ ಮನಸ್ಸಿಗೆ ಆನಂದ, ಹಸು ಕರುವನ್ನು ಸೇರಿದ ಹಾಗೆ, ಒಂದು ರೀತಿಯ ಸಮಾಧಾನ.. ಹಣೆಗೆ ಒಂದು ಮುತ್ತು ಕೊಟ್ಟ ಕೂಡಲೇ ಎಂಥಾ ಆನಂದ.. ಸಮುದ್ರದ ಆಳವನ್ನು ಮುಟ್ಟಿದಷ್ಟು ಖುಷಿ.. ಇನ್ನೊಮ್ಮೆ ಚಿಕ್ಕ ಮಗುವಾಗುವ ಆಸೆ ಹುಟ್ಟಿತು..ಅವಳ ಮಡಿಲಲ್ಲಿ ಮಲಗಿದರೆ ಮತ್ತೊಮ್ಮೆ ಮಗುವಾಗುವ ಆಸೆ ಪ್ರತೀ ಬಾರಿ ಚಿಗುರೊಡೆಯುವುದಂತು ನಿಜ..

– ಮೇಘನಾ ಬಸವಣ್ಣ

Leave a Reply

Your email address will not be published. Required fields are marked *