ಕೈಕಂಬ :(ಆ.11) ಉಪ್ಪಿನಂಗಡಿ- ಕುಕ್ಕೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕೈಕಂಬ ಎಂಬಲ್ಲಿ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳಿಗೆ ಬಾಳೆಗಿಡ ಹಾಗೂ ಕೆಸುವಿನ ಗಿಡನೆಟ್ಟು ಇಂದು ಆಟೋ ಚಾಲಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರುವ ರಾಜ್ಯ ಹೆದ್ದಾರಿ ಇದಾಗಿದೆ. ರಸ್ತೆ ತುಂಬಾ ಹೊಂಡಗಳು ನಿರ್ಮಾಣವಾಗಿ ವಾಹನ ಅಪಘಾತ ಹೆಚ್ಚಾಗಿದೆ. ಬೈಕ್ ಸವಾರರು ರಾತ್ರಿ ವೇಳೆ ಸಂಚರಿಸುವಾಗ ಹೊಂಡ ತಪ್ಪಿಸಲು ಹೋಗಿ ಚರಂಡಿಗೆ ಬಿದ್ದ ಘಟನೆಗಳು ನಡೆದಿದೆ. ಈ ಭಾಗದಲ್ಲಿ ತಕ್ಷಣಕ್ಕೆ ಯಾವುದೇ ಆಸ್ಪತ್ರೆಗಳು, ಆಂಬುಲೆನ್ಸ್ ಗಳು ಇರುವುದಿಲ್ಲ. ರಸ್ತೆ ಕೆಟ್ಟು ಹೋದ ಕಾರಣ ರಾತ್ರಿ ವೇಳೆ ಗಾಯಗೊಂಡವರನ್ನು ರಕ್ಷಿಸಲು ಕಡಬ, ಉಪ್ಪಿನಂಗಡಿ, ಮಂಗಳೂರು ಆಸ್ಪತ್ರೆಗೆ ದಾಖಲಿಸುವ ಪರಿಸ್ಥಿತಿ ಎದುರಾಗಿದೆ.
ಇಂದು ಕೈಕಂಬ ಆಟೋರಿಕ್ಷಾ ಚಾಲಕರು, ಸ್ಥಳೀಯ ಹಿರಿಯರು ಸೇರಿ, ರಸ್ತೆಯ ಹೊಂಡಕ್ಕೆ ಬಾಳೆಗಿಡ ಹಾಗೂ ಕೆಸುವಿನ ಗಿಡವನ್ನು ನೆಟ್ಟು ಪ್ರತಿಭಟಿಸಿದರು.
ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಟೋ ಚಾಲಕ ಯಕ್ಷಿತ್ ಚೇರು, ನಾಗೇಶ್, ಪ್ರವೀಣ್,ಲೋಕೇಶ್, ಶಶಿ, ಹರೀಶ್, ಮಂಜುನಾಥ್, ಮಾಧವ, ಚಂದ್ರ, ತಿಲಕ್, ಪುರುಷೋತ್ತಮ, ಅಖಿಲೇಶ್, ಉಮೇಶ್, ದಿನೇಶ್ ಮತ್ತಿತರರು ಭಾಗವಹಿಸಿದ್ದರು.