ಕೋಲ್ಕತ್ತಾ :(ಆ.11) ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡ್ತಿದ್ದಾಕೆ ಏಕಾಏಕಿ ಹೆಣವಾಗಿ ಸಿಕ್ಕಿದ್ದಾಳೆ. ಮಗಳನ್ನು ಕಳ್ಕೊಂಡ ಹೆತ್ತವರ ಕಣ್ಣೀರು ಮುಗಿಲು ಮುಟ್ಟಿದೆ. ಇದ್ರ ಬೆನ್ನಲ್ಲೆ ಆಕೆ ಸಾವು ಸಹಜ ಸಾವಲ್ಲ ಅನ್ನೋ ಸ್ಪೋಟಕ ಅಂಶ ಬಯಲಾಗಿದ್ದು, ಆಕೆ ಸಾಯುವ ಮುನ್ನ ಘನಘೋರ ದೌರ್ಜನ್ಯ ನಡೆದಿರುವ ವಿಚಾರ ಈಗ ಬೆಚ್ಚಿ ಬೀಳಿಸುತ್ತಿದೆ.
ಕೋಲ್ಕತ್ತಾದ ಮೆಡಿಕಲ್ ಕಾಲೇಜ್‌ನಲ್ಲಿ ಯಾರೂ ಊಹಿಸಲಾರದಂತಹ ಘನಘೋರ ಕೃತ್ಯವೊಂದು ನಡೆದು ಹೋಗಿದೆ. ರಾತ್ರಿ ವೇಳೆ ಕರ್ತವ್ಯಕ್ಕೆ ಬಂದ ಕಿರಿಯ ವೈದ್ಯೆ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದು, ಎಂದಿನಂತೆ ಕಿರಿಯ ವೈದ್ಯ ಮೌಮಿತಾ ದೇಬನಾಥ್ ಆಸ್ಪತ್ರೆಗೆ ಬಂದು ರೋಗಿಗಗಳ ಪರೀಕ್ಷೆ ಮಾಡ್ತಿದ್ರು. ಆದ್ರೆ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಆಕೆ ಹೆಣವಾಗಿ ಸಿಕ್ಕಿದ್ದಾಳೆ. ಈ ವಿಚಾರ ಸದ್ಯ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ಶುಕ್ರವಾರ ಬೆಳಗ್ಗೆ ಕೋಲ್ಕತ್ತಾದ ವೈದ್ಯಕೀಯ ಕಾಲೇಜಿನ ನಾಲ್ಕನೇ ಮಹಡಿಯಲ್ಲಿ, ನಿಗೂಢ ರೀತಿಯಲ್ಲಿ ಅರೆ ನಗ್ನವಾಗಿ ಮೌಮಿತಾ ಮೃತದೇಹ ಪತ್ತೆಯಾಗಿತ್ತು. ಆದ್ರೆ ಕರ್ತವ್ಯಕ್ಕೆ ಬಂದಿದ್ದ ಮೌಮಿತಾಗೆ ಏನಾಗಿತ್ತು? ಆಕೆಯನ್ನು ಕೊಂದವರು ಯಾರು ಅನ್ನೋದೇ ಗೊತ್ತಾಗಿರಲಿಲ್ಲ. ಹಾಗಾಗಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ವೈದ್ಯರು ಬೀದಿಗಿಳಿದಿದ್ರು.
ಮೌಮಿತಾ ಹತ್ಯೆ ಖಂಡಿಸಿ ಬೀದಿಗಿಳಿದ ವೈದ್ಯರು! ನ್ಯಾಯಕ್ಕಾಗಿ ಪಟ್ಟು!
ಅದ್ಯಾವಾಗ ಕಿರಿಯ ವೈದ್ಯೆಯೊಬ್ಬರು ಆಸ್ಪತ್ರೆಯಲ್ಲಿ ಹೆಣವಾಗಿ ಸಿಕ್ಕಿದ್ದಾರೆ ಎಂಬ ವಿಚಾರ ಎಲ್ಲೆಡೆ ಸುದ್ದಿಯಾಯ್ತು. ಆಸ್ಪತ್ರೆಯಲ್ಲಿದ್ದ ವೈದ್ಯರು ಮತ್ತು ವಿದ್ಯಾರ್ಥಿನಿಯ ನಿಗೂಢ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ರು. ದುರಂತ ಏನಂದ್ರೆ ಆಡಳಿತ ಮಂಡಳಿ ಇದನ್ನ ಆತ್ಮಹತ್ಯೆ ಅಂತ ಹೇಳಿತ್ತು. ಇದೇ ವಿಚಾರ ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿತ್ತು. ಹೀಗಾಗಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದ್ರು.
ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಲೆ! ಓರ್ವ ಅರೆಸ್ಟ್
ಯಾವಾಗ ಪ್ರತಿಭಟನೆ ಕಾವು ಜೋರಾಯ್ತ ಪೊಲೀಸರು ಕೂಡ ಮೌಮಿತಾ ನಿಗೂಢ ಸಾವಿನ ಬಗ್ಗೆ ತನಿಖೆ ಶುರು ಮಾಡಿದ್ರು. ಅಸಲಿಗೆ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ್ಲೆ ಬೆಚ್ಚಿ ಬೀಳಿಸುವ ಅಂಶ ಬಯಲಾಗಿತ್ತು. ಯಾಕಂದ್ರೆ ಮೌಮಿತಾಳನ್ನ ಭೀಕರವಾಗಿ ಕೊಲೆ ಮಾಡಲಾಗಿತ್ತು. ಆಡಳಿತ ಮಂಡಳಿ ಆರಂಭದಲ್ಲಿ ಇದನ್ನು ಆತ್ಮಹತ್ಯೆ ಅಂತ ಹೇಳಿತ್ತು. ಆದ್ರೆ ಮರಣೋತ್ತರ ಪರೀಕ್ಷೆಯ ವರದಿ ಭಯಾನಕ ವಿಚಾರಗಳನ್ನ ಹೊರ ಹಾಕಿದೆ. ವರದಿಯಲ್ಲಿ ಮೌಮಿತಾ ಮೇಲೆ ದೌರ್ಜನ್ಯ ಎಸಗಿರುವ ವಿಚಾರ ಗೊತ್ತಾಗಿದೆ. ಆಕೆಯ ದೇಹದ ಭಾಗಗಳಲ್ಲಿ ಗಾಯದ ಗುರುತುಗಳಿರೋದು ಕೂಡ ಪತ್ತೆಯಾಗಿದೆ.
ಶುಕ್ರವಾರ ಬೆಳಗಿನ ಜಾವ 3 ರಿಂದ 6 ಗಂಟೆಯ ಸುಮಾರು ಈ ಕೃತ್ಯ ನಡೆದಿರೋದಾಗಿ ತಿಳಿದು ಬಂದಿದೆ. ನಾಲ್ಕು ಪುಟಗಳ ವರದಿ ಪ್ರಕಾರ ವಿದ್ಯಾರ್ಥಿನಿಯ ಖಾಸಗಿ ಭಾಗಗಳಿಂದ ರಕ್ತಸ್ರಾವವಾಗಿದೆ. ದೇಹದ ಇತರ ಭಾಗಗಳ ಮೇಲೂ ಗಾಯದ ಗುರುತುಗಳಿವೆ. ಆಕೆಯ ಕಣ್ಣು ಮತ್ತು ಬಾಯಿಯಿಂದಲೂ ರಕ್ತ ಬಂದಿದೆ. ಆಕೆಯ ಮುಖ ಉಗುರುಗಳ ಮೇಲೆ ಗಾಯವಾಗಿದೆ. ಹೊಟ್ಟೆ, ಎಡ ಕಾಲು, ಕುತ್ತಿಗೆ ಹಾಗು ತುಟಿಯ ಮೇಲೂ ಗಾಯಗಳಾಗಿರೋದು ವರದಿಯಲ್ಲಿ ತಿಳಿದು ಬಂದಿದೆ. ಇದೀಗ ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನ ರಚಿಸಿರುವ ಕೊಲ್ಕತ್ತಾ ಪೊಲೀಸರು ಓರ್ವ ಆರೋಪಿ ಶಂಕಿತ ಸಂಜಯ್ ರಾಯ್‌ನ್ನ ಅರೆಸ್ಟ್ ಮಾಡಿದ್ದಾರೆ.
ಇನ್ನೊಂದೆಡೆ ಮಗಳನ್ನು ಕಳ್ಕೊಂಡಿರುವ ಮೌಮಿತಾ ತಂದೆ ಖಂಡಿತವಾಗಿಯೂ ಆತ್ಮಹತ್ಯೆ ಅಲ್ಲ. ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕೊಲೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ಇನ್ನೂ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ವಿರುದ್ಧವೂ ಕಿಡಿ ಕಾರಿರುವ ಮೌಮಿತಾ ತಂದೆ ಸತ್ಯವನ್ನು ಮರೆ ಮಾಚುವ ಕೆಲಸಗಳು ನಡೆಯುತ್ತಿವೆ ಅಂತ ಆಕ್ರೋಶ ಹೊರ ಹಾಕಿದ್ದಾರೆ. ತಮ್ಮ ಮಗಳ ಹತ್ಯೆಗೆ ನ್ಯಾಯ ಸಿಗಬೇಕು ಅಂತ ಆಗ್ರಹಿಸಿದ್ದಾರೆ.
ಈ ಮಧ್ಯೆ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪಿಜಿಟಿ ವೈದ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಘಟನೆ ಖಂಡಿಸಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು. ತುರ್ತು ಚಿಕಿತ್ಸಾ ವಿಭಾಗ ಹೊರತುಪಡಿಸಿ ಎಲ್ಲಾ ವಿಭಾಗಗಳಲ್ಲಿ ಕೆಲಸ ಸ್ಥಗಿತಗೊಳಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಹಿಳೆಯ ಪೋಷಕರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ತಪ್ಪಿತಸ್ಥರನ್ನು ನೇಣಿಗೆ ಹಾಕಲಾಗುವುದು. ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.