ಮಂಗಳೂರು :(ಆ.11) ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್ ಗಳಲ್ಲಿ 26 ಸೋಮರ್ ಸಾಲ್ಟ್ಸ್ (ಪಲ್ಟಿ)ಗಳ ಮೂಲಕ ಮಂಗಳೂರಿನ 13ರ ಹರೆಯದ ಪೋರ ನೊಬೆಲ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ.
ನೊಬೆಲ್ ವಲ್ಡ್ ರೆಕಾರ್ಡ್ಸ್ ನ ರಾಜ್ಯ ನಿರ್ದೇಶಕ ಡಾ. ಕೃಷ್ಣಮೂರ್ತಿ ಅವರು ಹ್ಯಾಡ್ರಿಯನ್ ಅವರ ಪಲ್ಟಿ ಸಾಹಸವನ್ನು ದಾಖಲಿಸಿಕೊಂಡರು. ಸಾಮಾನ್ಯವಾಗಿ ಈಜುಕೊಳದ ಅಂಚು ಹಿಡಿದುಕೊಂಡು ಪಲ್ಟಿ ಹಾಕಲಾಗುತ್ತದೆ. ಆದರೆ ಈಜುಕೊಳದ ಮಧ್ಯ ನೀರಿನಲ್ಲಿ ಏಕಕಾಲಕ್ಕೆ 26 ಪಲ್ಟಿ ಹೊಡೆಯುವುದು ಹ್ಯಾಡ್ರಿಯನ್ ಅವರ ದಾಖಲೆಯಾಗಿದ್ದು, ಆತನಿಗೆ ತರಬೇತಿ ನೀಡಿದ ನನಗೂ ಹೆಮ್ಮೆಯ ವಿಚಾರ ಇದು ಎಂದು ಸ್ವಿಮ್ಮಿಂಗ್ ಕೋಚ್ ಅರೋಮಲ್ ಎ.ಎಸ್. ಸಂತಸ ವ್ಯಕ್ತಪಡಿಸಿದರು.
15 ವರ್ಷದೊಳಗೆ ಈ ನೀರೊಳಗಿನ ಪಲ್ಟಿ ಸಾಹಸ ಪ್ರಥಮ ದಾಖಲೆ ಎನ್ನಲಾಗಿದ್ದು, ಖ್ಯಾತ ಈಜುಪಟು ಚಂದ್ರಶೇಖರ ರೈ ಎಂಬವರು ಈ ಹಿಂದೆ ಹಿರಿಯ ವಿಭಾಗದಲ್ಲಿ ನೀರೊಳಗೆ 1 ನಿಮಿಷ 2 ಸೆಕೆಂಡುಗಳಲ್ಲಿ 28 ಪಲ್ಟಿ ಹೊಡೆದಿರುವ ದಾಖಲೆ ಮಾಡಿದ್ದರು.
ಬೇಸಿಗೆ ರಜೆಯ ವೇಳೆ ಹ್ಯಾಡ್ರಿಯನ್ ನ ಪ್ರತಿಭೆಯನ್ನು ನೋಡಿ ಆತನಿಗೆ ವಿಶೇಷ ರೀತಿಯ ತರಬೇತಿ ನೀಡಲಾಯಿತು. ನಗರದ ಪ್ರೆಸ್ಟೀಜ್ ಅಂತಾರಾಷ್ಟ್ರೀಯ ಶಾಲೆಯ ಈಜುಕೊಳದಲ್ಲಿ ತರಬೇತಿ ನೀಡಲಾಗಿದ್ದು, ಬಳಿಕ ಎಮ್ಮೆಕೆರೆ ಈಜುಕೊಳದಲ್ಲೂ ತರಬೇತಿ ಮುಂದುವರಿಸಲಾಯಿತು. ಕಳೆದ ಸುಮಾರು 10 ತಿಂಗಳಿನಿಂದ ಆತ ತರಬೇತಿ ಪಡೆಯುತ್ತಿದ್ದಾನೆ ಎಂದು ಅರೋಮಲ್ ತಿಳಿಸಿದರು.