ಉತ್ತರ ಪ್ರದೇಶ:(ಆ.13) ಈತ ಮಹಿಳೆಯರನ್ನು ಬೆತ್ತಲೆ ಮಾಡಿ ಕೊಲ್ಲುವ ಸೈಕೊ ಕಿಲ್ಲರ್, 13 ತಿಂಗಳು, 9 ಕೊಲೆ, ಒಂದೇ ವಯಸ್ಸು.! ಸರಣಿ ಕೊಲೆಗಳು, ಕಬ್ಬಿನ ಗದ್ದೆಯಲ್ಲಿ ಸಿಗುತ್ತಿತ್ತು ಶವಗಳು. ಈ ಮರ್ಡರ್ ಮಿಸ್ಟರಿಗೆ ಬೆಚ್ಚಿ ಬಿತ್ತು ಉತ್ತರ ಪ್ರದೇಶದ ಪೊಲೀಸ್ ಪಡೆ. ಯಾರು ಆ ಕೊಲೆಗಾರ.. ಏನಿದು ಮರ್ಡರ್ ಮಿಸ್ಟರಿ..?
ಉತ್ತರ ಪ್ರದೇಶದಲ್ಲಿ ಸೈಕೋ ಕಿಲ್ಲರ್ ಕಾಟದಿಂದ ತತ್ತರಿಸಿ ಹೋಗಿತ್ತು. ಸರಣಿ ಹಂತಕನ ಅಟ್ಟಹಾಸಕ್ಕೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆ ಬೆಚ್ಚಿ ಬಿದ್ದಿದೆ. ಆ ಮೂರು ಹಳ್ಳಿಗಳಲ್ಲಂತೂ ಮಹಿಳೆಯರು ಕನಸಲ್ಲೂ ಬೆಚ್ಚಿ ಬೀಳೋ ಹಾಗಾಗಿತ್ತು. ಹಾಗಾದ್ರೆ ಯೋಗಿ ನಾಡಿನ ಹೆಂಗಸರಲ್ಲಿ ಈ ಪರಿ ಕಾಡ್ತಾ ಇದ್ದ ಆ ಹಂತಕ ಯಾರು..? ಪೊಲೀಸರು ಸೀರಿಯಲ್ ಕಿಲ್ಲರ್ ನನ್ನು ರೋಚಕ ಕಾರ್ಯಾಚರಣೆ ಮೂಲಕ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನ ಕುಲ್ದೀಪ್ ಗಂಗಾವರ್ ಎಂದು ಗುರುತಿಸಲಾಗಿದೆ. ಅಸಲಿಗೆ ಇವನೊಬ್ಬ ಸೈಕೋಪಾತ್. ಒಡಲಲ್ಲಿ ಸ್ತ್ರೀ ದ್ವೇಷವೆಂಬ ಬೆಂಕಿಯನ್ನು ಇಟ್ಟುಕೊಂಡೇ ಬದುಕಿದ್ದ. ಸೈಕೋ ಕಿಲ್ಲರ್ ಕುಲದೀಪ್ ಗಂಗಾವರ್‌ನಿಗೆ ಸ್ತ್ರೀದ್ವೇಷ ಭಯಂಕರವಾಗಿತ್ತು. ಮಲತಾಯಿಯ ಚಿತ್ರಹಿಂಸೆಯಿಂದ ಈ ಕುಲದೀಪ್ ಗಂಗಾವರ್ ಅಕ್ಷರಶಃ ಸ್ತ್ರೀ ದ್ವೇಷಿಯಾಗಿ ಬದಲಾಗಿ ಬಿಟ್ಟ. ಈ ಕಾರಣಕ್ಕಾಗಿ 50 ರಿಂದ 60 ವರ್ಷದ ವಯಸ್ಸಿನ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದ. ಈ ಹಂತಕನನ್ನು ಯುಪಿ ಪೊಲೀಸರು ಹಳ್ಳಿಗರ ವೇಷ ತೊಟ್ಟು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವೆಲ್ಲವೂ ಅವನಲ್ಲಿ ಮಹಿಳಾ ದ್ವೇಷವನ್ನು ಹುಟ್ಟುಹಾಕಿದ್ದವು ಎಂದು ಯುಪಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಮೂಲಕ ಬರೇಲಿ ಮಹಿಳೆಯರು ನಿಟ್ಟುಸಿರು ಬಿಡುವಂತೆ ಆಗಿದೆ.
ಜುಲೈ 3 ರಂದು ಹೌಸ್ಪುರ್ ಎಂಬ ಗ್ರಾಮದಲ್ಲಿ ಯಾವಾಗ 9ನೇ ಮಹಿಳೆಯನ್ನು ಹಂತಕ ಹತ್ಯೆ ಮಾಡಿದನೋ ಅಂದಿನಿಂದ ಪೊಲೀಸರ ಮೇಲೆ ಸಾರ್ವಜನಿಕರ ಒತ್ತಡ ಜೋರಾಯ್ತು. ಆಗ ಅಲರ್ಟ್ ಆದ ಪೊಲೀಸರು ಒಂದೇ ಒಂದು ಸಾಕ್ಷಿಯೂ ಇಲ್ಲದ ಕೊಲೆಗಳ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡು ಆಪರೇಷನ್ ತಲಾಶ್ ಹೆಸರಲ್ಲಿ ಆಗಂತುಕನ ಹುಡುಕಾಟ ಶುರು ಮಾಡಿದರು.
ಜುಲೈ 3ರಂದು ನಡೆದ 9ನೇ ಮಹಿಳಾ ಹತ್ಯೆಯ ಬಳಿಕ ಆಗಂತುಕನ ಸೆರೆಗೆ ಸನ್ನದ್ಧಗೊಂಡ ಪೊಲೀಸ್ ಪಡೆ, ಹಂತಕನನ್ನು ಹಿಡಿಯಲು ಒಂದು ಟೀಮ್ ರೆಡಿ ಮಾಡಿತ್ತು, ಎಸ್ಎಸ್ಪಿ ಅನುರಾಗ್ ಆರ್ಯ ಅವರ ನೇತೃತ್ವದಲ್ಲಿ ಆಪರೇಷನ್ ತಲಾಶ್ ಹೆಸರಿನ ಅಡಿ ಕಾರ್ಯಾಚರಣೆಗೆ ಇಳಿಯಿತು ಪೊಲೀಸ ಪಡೆ. 22 ಜನರ ತಂಡದೊಂದಿಗೆ ಹುಡುಕಾಟಕ್ಕೆ ಇಳಿದ ಆಪರೇಷನ್ ತಲಾಶ್ ಹೆಸರಿನ ಪಡೆ ಒಟ್ಟು 600 ಸಿಸಿಟಿವಿ ಕ್ಯಾಮಾರಗಳನ್ನು ಜಾಲಾಡಿತು 1500 ದೃಶ್ಯಗಳನ್ನು ಪರೀಶಿಲನೆಗೆ ಒಳಪಡಿಸಿತು. ಇವೆಲ್ಲವನ್ನು ಆಧರಿಸಿ ಆರೋಪಿಯ ರೇಖಾಚಿತ್ರವನ್ನು ಬಿಡುಗಡೆ ಮಾಡಿತ್ತು. ಕೊನೆಗೆ ಈ ಸರಣಿ ಹತ್ಯೆಯ ಹಿಂದೆ ಕುಲ್ದೀಪ್ ಗಂಗಾವರ್ ಕೈಯೇ ಇರೋದು ಎಂದು ಖಚಿತವಾದ ದಿನ, ಅವನು ಉಳಿದುಕೊಂಡಿದ್ದ ಊರಿನಲ್ಲಿಯೇ ಪೊಲೀಸರು ಗ್ರಾಮಸ್ಥರ ವೇಷದಲ್ಲಿ ಬೀಡು ಬಿಟ್ಟರು. ಅವನ ದಿನನಿತ್ಯದ ಚಟುವಟಿಕೆಗಳ ಮೇಲೆ ಕಣ್ಣಿಟ್ಟರು. ಕೊನೆಗೆ ಸಮಯ ನೋಡಿ ಕುಲ್ದೀಪ್ ಕೈಗೆ ಕೋಳ ತೊಡಿಸಿಯೇ ಬಿಟ್ಟರು.
ಸದ್ಯ ಕುಲ್ದೀಪ್ ಗಂಗಾವರ್ ಮೇಲೆ ಹಲವು ರೀತಿಯ ಸೆಕ್ಷನ್ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿರುವ ಯುಪಿ ಪೊಲೀಸರು, ಹತ್ಯೆ ನಡೆದ ಜಾಗದ ಸುತ್ತಮುತ್ತ ಮೂರು ಗ್ರಾಮಗಳಿವೆ, ಆ ಗ್ರಾಮದಲ್ಲಿ ಹಂತಕ ಕುಲ್ದೀಪ್ ಗಂಗಾವರ್ ನ ಸಹೋದರಿಯರ ಮನೆಗಳಿವೆ. ಅಲ್ಲಿ ಉಳಿದುಕೊಳ್ಳುತ್ತಿದ್ದ ಹಂತಕ. ತನ್ನ ಕೆಲಸ ಮುಗಿಸಿ ಮತ್ತೊಂದು ಸಹೋದರಿಯ ಮನೆ ಸೇರಿಕೊಳ್ಳುತ್ತಿದ್ದ. ಹಗಲು ಇವನು ಪಗಂಡಿ ಹಾಗೂ ಚಕ್ರೋಡ ಊರಿನ ಹೊಲದಲ್ಲಿ ತಿರುಗಾಡುತ್ತಿದ್ದ. ಯಾವ ಹೊಲದಲ್ಲಿ ಏಕಾಂಗಿಯಾಗಿ ಮಹಿಳೆ ಕೆಲಸ ಮಾಡುತ್ತಿದ್ದಾಳೆ ಅನ್ನೋದನ್ನ ನೋಡುತ್ತಿದ್ದ.
ಏಕಾಂಗಿಯಾಗಿದ್ದ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರನ್ನು ಚೆನ್ನಾಗಿ ಮಾತನಾಡಿಸಿ ಹೊಲದಿಂದ ದೂರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸು ಎಂದು ಕೇಳುತ್ತಿದ್ದ. ಅವರ ನಿರಾಕರಿಸಿದಲ್ಲಿ ಇವನಿಗೆ ಕೆಂಡದಂತ ಕೋಪ ಬರ್ತಿತ್ತು, ಕೂಡಲೇ ಅವರ ಕುತ್ತಿಗೆ ಹಿಸುಕಿ ಸಾಯಿಸಿ ಬಿಡುತ್ತಿದ್ದ. ಕೆಲವೊಂದು ಪ್ರಕರಣದಲ್ಲಿ ಮಹಿಳೆಯರ ಸೀರೆ ಸೆರಗನ್ನೇ ಅವರ ಕುತ್ತಿಗೆಗೆ ಬಿಗಿದು ಸಾಯಿಸುತ್ತಿದ್ದ ಎಂದು ಬರೇಲಿ ಜಿಲ್ಲೆಯ ಎಸ್ಪಿ ಹೇಳಿದ್ದಾರೆ.
ಈಗಾಗಲೇ ಒಟ್ಟು ಆರು ಸ್ಥಳಗಳಲ್ಲಿ ಅವನನ್ನು ಕರೆದೊಯ್ದು ಸ್ಥಳ ಮಹಜರು ಮಾಡಲಾಗಿದೆ. ಆರೋಪಿಯನ್ನು ಜಿಲ್ಲಾ ಮ್ಯಾಜಿಸ್ಟ್ರೆಟ್ ಮುಂದೆ ಹಾಜರು ಮಾಡಲಾಗಿದ್ದು, ಇನ್ನು ಉಳಿದ ಮೂರು ಸ್ಥಳ ಮಹಜರಿಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಒಟ್ಟಾರೆ, ಬರೇಲಿ ಜಿಲ್ಲೆಯಲ್ಲಿ ದೊಡ್ಡ ಆತಂಕ ಸೃಷ್ಟಿಸಿದ್ದ ಕಿರಾತಕ ಪೊಲೀಸರ ಬಲೆಗೆ ಬಿದ್ದಿದ್ದು, ಸ್ಥಳೀಯ ಮಹಿಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.