ಬೆಳ್ತಂಗಡಿ:(ಆ.13) ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಾಲೂಕಿನಲ್ಲಿ ಶೇ. 40 ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಆರೋಪಕ್ಕೆ ಶಾಸಕ ಹರೀಶ್ ಪೂಂಜ ತಿರುಗೇಟನ್ನು ನೀಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಶಾಸಕರು, ರಕ್ಷಿತ್ ಶಿವರಾಂ ಒಬ್ಬ ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿಯಾಗಿದ್ದು ರಾಜಕೀಯಕ್ಕೆ ನಾಲಾಯಕ್ ಎಂದಿದ್ದಾರೆ. ಅಲ್ಲದೇ ರಕ್ಷಿತ್ ಶಿವರಾಂ ಎಲ್ಲಾ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ⛔ಉಡುಪಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ವಿರೋಧಿಸಿ – ಮಾನವ ಸರಪಳಿ ರಚಿಸಿ ಪ್ರತಿಭಟನೆ
ಐಬಿ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ..!
ಬ್ರಿಟಿಷರು ಕಟ್ಟಿದ ಐಬಿ ಸೋರುತ್ತಿತ್ತು, ಗಬ್ಬು ವಾಸನೆ ಹರಡುತ್ತಿತ್ತು. ನಮ್ಮ ಸರ್ಕಾರ ಇರುವಂತಹ ಸಮಯದಲ್ಲಿ ಅತ್ಯಂತ ಹೆಚ್ಚು ಅಧಿಕಾರಿಗಳು ಬರುತ್ತಾರೆ. ಹೀಗಾಗಿ ನಮ್ಮ ತಾಲೂಕಿನ ಬಂಗಲೆ ಚೆನ್ನಾಗಿ ಇರಬೇಕು ಎನ್ನುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಮೂಲಕ ಸುಂದರ ಬಂಗಲೆಯನ್ನು ನಿರ್ಮಿಸಿದ್ದೇನೆ. ಇದರಲ್ಲಿ ನಾನು ಶೇ. 40 ಭ್ರಷ್ಟಾಚಾರ ಮಾಡಿದ್ದೇನೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಅದರಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಮಾಡಿಲ್ಲ ಎಂದು ಈ ವೇಳೆ ಹೇಳುತ್ತೇನೆ.
ಬಿಮಲ್ ಕಂಪನಿಯಲ್ಲಿ ನನ್ನ ಹೂಡಿಕೆ ಇಲ್ಲ.!
ಇನ್ನು ಆ ಬಂಗಲೆಯ ಕಾಮಗಾರಿಯನ್ನು ಬಿಮಲ್ ಕನ್ಸ್ಟ್ರಕ್ಷನ್ ಮಾಡಿತ್ತು. ಬಿಮಲ್ ಕನ್ಸ್ಟ್ರಕ್ಷನ್ ನಲ್ಲಿ ನನ್ನ ಪಾಲುದಾರಿಕೆ ಇದೆ, ಹೂಡಿಕೆ ಇದೆ ಎಂದು ಆರೋಪ ಮಾಡಿದ್ರು. ಆದರೆ ಬಿಮಲ್ ಕನ್ಸ್ಟ್ರಕ್ಷನ್ ನಲ್ಲಿ ನನ್ನದು ಯಾವುದೇ ಪಾಲುದಾರಿಕೆ, ಹೂಡಿಕೆ ಇಲ್ಲ ಎಂದು ಸ್ಪಷ್ಟನೆ ಕೊಡಲು ಇಚ್ಚೆ ಪಡುತ್ತೇನೆ. ಇದು ಪ್ರವೀಣ್ ಪೂಜಾರಿ ಎಂಬ ಯುವಕನಿಗೆ ಸೇರಿದ ಕಂಪನಿಯಾಗಿದೆ.
ರೆಖ್ಯ ದೇವಸ್ಥಾನದ ಕಾಮಗಾರಿ ಮಾಡಿದ್ದು ಯಾರು?
ರೆಖ್ಯ ದೇವಸ್ಥಾನದ ಸುತ್ತ ಕಟ್ಟಿರುವ ತಡೆಗೋಡೆ ಮೊನ್ನೆ ಸುರಿದ ಮಳೆಯಿಂದ ಬಿರುಕು ಬಿಟ್ಟಿತ್ತು. ಈ ಕಾಮಗಾರಿಯಲ್ಲೂ ನನ್ನ ಮೇಲೆ ಭ್ರಷ್ಟಚಾರ ಆರೋಪ ಮಾಡಿದ್ರು. ಆದರೆ ಈ ಕಾಮಗಾರಿಯನ್ನು ಮಾಡಿದ್ದು ಇದೇ ಎಂ.ಎಲ್.ಸಿ ಹರೀಶ್ ಕುಮಾರ್ ಅವರ ಸಂಬಂಧಿಕ ಗಂಗಾಧರ ಮಿತ್ತಮಾರ್ ಅವರ ಮಗ ದಿಶಾಂತ್. ಇಲಾಖೆಯ ನಿಯಾಮಾನುಸಾರವಾಗಿ ಟೆಂಡರ್ ಪಡೆದುಕೊಂಡು ಅವರು ಕಾಮಗಾರಿಯನ್ನ ಮಾಡಿದ್ದಾರೆ. ನಾನು ಒಂದು ರೂಪಾಯಿ ಕೂಡ ಭ್ರಷ್ಟಚಾರ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಡಿಪಿ ಜೈನ್ ಕಂಪನಿಯಿಂದ ನಯಾ ಪೈಸೆ ತಗೊಂಡಿಲ್ಲ!
ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಡಿಪಿ ಜೈನ್ ಕಂಪನಿಯಿಂದ ನಾನು ಮೂರು ಕೋಟಿ ಕಿಕ್ ಬ್ಯಾಕ್ ಪಡೆದಿದ್ದೇನೆ ಎಂದು ರಕ್ಷಿತ್ ಶಿವರಾಂ ಅಪಾದನೆ ಮಾಡಿದ್ದಾನೆ. ಸಾಮಾನ್ಯ ಜ್ಞಾನ ಇಲ್ಲದ ರಕ್ಷಿತ್ ಶಿವರಾಂ ರಾಜಕೀಯಕ್ಕೆ ನಾಲಾಯಕ್ , ಯಾಕಂದ್ರೆ ರಾ.ಹೆದ್ದಾರಿ, ನನ್ನ ಅಡಿಯಲ್ಲಿ ಬರೋದಿಲ್ಲ. ಅದು ಸಂಸದರ ಮೂಲಕ ಬರುವಂತದು. ಹೀಗಾಗಿ ನಾನು ಯಾವುದೇ ಲಂಚ ಡಿಪಿ ಜೈನ್ ಕಂಪನಿಯಿಂದ ಪಡೆದುಕೊಂಡಿಲ್ಲ ಎಂದು ಹೇಳ್ತಾ ಇದ್ದೇನೆ.