ಸುಬ್ರಹ್ಮಣ್ಯ (ಆ.13): ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರುಗಿತು.
ಇದನ್ನೂ ಓದಿ: 🔹 Daily Horoscope – ಇಂದು ಈ ರಾಶಿಯವರಿಗೆ ಕಚೇರಿಯಲ್ಲಿ ಕೆಲಸದ ಒತ್ತಡ ಅಧಿಕವಾಗಲಿದೆ.
ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ವೆಂಕಟೇಶ ಎಚ್ ಎಲ್, ನೋಡಲ್ ಅಧಿಕಾರಿ ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚನ್ನಪ್ಪ ಗೌಡ ಕಜೆ ಮೂಲೆ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ, ಹಾಗೂ ಎಲ್ಲಾ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯದಲ್ಲಿ ಹಲವಾರು ಸಮಯಗಳಿಂದ ಅನಧಿಕೃತವಾಗಿ ಅಂಗಡಿ ನಡೆಸುತ್ತಿರುವವರಿಗೆ ನೋಟಿಸ್ ನೀಡಿ ಕಾರ್ಯಾಚರಣೆಯ ಮೂಲಕ ತೆರವುಗೊಳಿಸಬೇಕು. ರಸ್ತೆಗೆ ತಾಗಿ ಕಾಂಪೌಂಡು ಬಹಳಷ್ಟು ಕಡೆ ನಿರ್ಮಿಸಲಾಗಿದೆ. ಅವರಿಗೆ ನೋಟಿಸ್ ನೀಡಿ ತೆರವುಗೊಳಿಸಲು ಆದೇಶಿಸಬೇಕು, ಅಲ್ಲದೇ ಇನ್ನು ಮುಂದೆ ಕಾಂಪೌಂಡ್ ರಸ್ತೆ ಬದಿ ಕಟ್ಟದಂತೆ ನಿಗ ವಹಿಸಬೇಕೆಂದು ಗ್ರಾಮಸ್ಥರು ಅಗ್ರಹಿಸಿದರು. ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ ಈ ಹಿಂದೆ ಇಲಾಖೆಯಿಂದ ಮಂಜೂರಾದ ತುರ್ತು ಚಿಕಿತ್ಸಾ ಘಟಕವನ್ನು ಸದ್ದಿಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ ಬಗ್ಗೆ ವ್ಯಾಪಕಕ್ಕೆ ಚರ್ಚೆ ನಡೆಯಿತು. ಅಲ್ಲದೆ ಕೂಡಲೇ 24*7 ತುರ್ತು ಚಿಕಿತ್ಸಾ ಘಟಕವನ್ನು ಆರಂಭಿಸಬೇಕು ,ವೈದ್ಯರನ್ನ ನೇಮಕ ಮಾಡಬೇಕು ಎಂದು ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.
ಸುಬ್ರಹ್ಮಣ್ಯ ದೇವಳದ ವತಿಯಿಂದ ಐನೀಕಿದುನಲ್ಲಿ ಗೋಶಾಲೆಯನ್ನು ನಿರ್ಮಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಮೆಸ್ಕಾಂ ಹಾಗೂ ಅರಣ್ಯ ಇಲಾಖೆಯವರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಮಾರ್ಗದ ಬದಿ ಇರುವ ವಿದ್ಯುತ್ ಲೈನಿಗೆ ತಾಗುವ ಗೆಲ್ಲುಗಳನ್ನು ಕಡಿಯಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಗುಣಮಟ್ಟದ ವಿದ್ಯುತ್ತನ್ನು ಸರಬರಾಜು ಮಾಡಲು ಕಡಬ ಹಾಗೂ ಗುತ್ತಿಗಾರಿಂದ ಭೂಗತ ಕೇಬಲ್ ಹಾಗೂ ಮೇಲ್ಗಡೆ ಕೇಬಲ್ ಬಂದಿರುವ ಲೈನ್ ಗಳನ್ನು ಸರಿಯಾಗಿ ಕೆಲಸ ಮಾಡುವಂತೆ ಮೆಸ್ಕಾಂ ಅವರು ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳಾದ ಕಂದಾಯ, ಅರಣ್ಯ, ಪಶು ಸಂಗೋಪನ ,ಮೆಸ್ಕಾಂ ,ಶಿಶು ಯೋಜನಾ ಅಭಿವೃದ್ಧಿ, ಲೋಕೋಪಯೋಗಿ ,ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ,ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿ ಸಿಬ್ಬಂದಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಿದರು.