Wed. Nov 20th, 2024

Muda Scam: ಸಿಎಂಗೆ ಮುಡಾ ಸಂಕಷ್ಟ – ರಾಜೀನಾಮೆ ಗ್ಯಾರಂಟಿ ಎಂದು ಬಿಜೆಪಿ ವ್ಯಂಗ್ಯ

Muda Scam:(ಆ.17) ಮುಡಾ ಸೈಟ್ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು (ಪ್ರಾಸಿಕ್ಯೂಷನ್) ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ರಾಜ್ಯ ಬಿಜೆಪಿ ಸ್ವಾಗತಿಸಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದೆ.

ಇದನ್ನೂ ಓದಿ: 🔴ಕೊಕ್ಕಡ: ಶಾಸಕ ಹರೀಶ್ ಪೂಂಜರವರ ಜನ್ಮದಿನದ ಪ್ರಯುಕ್ತ

ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಅತ್ಯಂತ ಸ್ವಾಗತಾರ್ಹ. ದಲಿತರ ಭೂಮಿಯನ್ನು ನುಂಗಿ, ಅಕ್ರಮವಾಗಿ ಅತ್ಯಂತ ಬೆಲೆಬಾಳುವ 14 ಸೈಟುಗಳನ್ನು ಕಬಳಿಸಿರುವ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಮುಂದುವರೆಯಲು ಅರ್ಹರಲ್ಲ. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ತನಿಖೆಗೆ ಒಳಗಾಗಲಿ ಎಂದು ರಾಜ್ಯ ಬಿಜೆಪಿ ಎಕ್ಸ್ನಲ್ಲಿ ಪೋಸ್ಟ್ ಹಾಕಿ ಒತ್ತಾಯಿಸಿದೆ.

ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿರುವುದು ಬಿಜೆಪಿ ಪಾದಯಾತ್ರೆಗೆ ಸಿಕ್ಕಿರುವ ಯಶಸ್ಸು. ಕಾಂಗ್ರೆಸ್ ಈಗ ದ್ವೇಷದ ರಾಜಕಾರಣ ಮಾಡಿದರೆ ಅರ್ಥವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಸಿಬಿಐ ತನಿಖೆಯಾಗಬೇಕು ಹಾಗೂ ಎಲ್ಲ ನಿವೇಶನಗಳನ್ನು ವಾಪಸ್ ಪಡೆಯಬೇಕೆಂಬುದು ನಮ್ಮ ಬೇಡಿಕೆ. ನಿವೇಶನ ವಂಚಿತರಾದ ಜನರಿಗೆ ನ್ಯಾಯ ಸಿಗಬೇಕೆಂದು ನಮ್ಮ ಆಗ್ರಹ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸ್ವಾಗತಾರ್ಹ. ಅಧಿಕಾರದ ದುರುಪಯೋಗ, ನಿಯಮಾವಳಿಗಳ ಉಲ್ಲಂಘನೆ, ಅರ್ಹ ನಿವೇಶನದಾರರ ಹಿತಾಸಕ್ತಿಯನ್ನು ಬಲಿಕೊಟ್ಟು, ತಮ್ಮ ಸ್ವಹಿತಾಸಕ್ತಿಗಳಿಗೆ ನಿಯಮಾವಳಿಗಳನ್ನು ಉಲ್ಲಂಘಿಸಿ ಬದಲಿ ನಿವೇಶನಗಳನ್ನು ಮಂಜೂರು ಮಾಡಿಸಿಕೊಂಡ ಮುಖ್ಯಮಂತ್ರಿಗಳ ತನಿಖೆ ಎದುರಿಸಬೇಕು. ಈ ಕೂಡಲೇ ಸಿದ್ದರಾಮಯ್ಯ ನವರು ರಾಜೀನಾಮೆ ನೀಡುವ ಮೂಲಕ ತನಿಖೆ ಎದುರಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ನಲ್ಲಿ ಪೋಸ್ಟ್ ಹಾಕಿ ಆಗ್ರಹಪಡಿಸಿದ್ದಾರೆ.

ಮಾಜಿ ಸಚಿವ ಸುನಿಲ್ ಕುಮಾರ್ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರೇ ಭಂಡತನವನ್ನು ಬಿಡಿ. ನಿಮ್ಮ ವಿರುದ್ಧದ ಆಪಾದನೆ ಮೇಲ್ನೋಟಕ್ಕೆ ಸತ್ಯ ಎಂದೆನಿಸಿದ ಕಾರಣಕ್ಕೆ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿದ್ದಾರೆ. ಈಗ ನೀವು ಸಂಪುಟದಲ್ಲಿ ರಾಜ್ಯಪಾಲರ ವಿರುದ್ಧ ನಿರ್ಣಯ ತೆಗೆದುಕೊಳ್ಳುವುದಲ್ಲ, ರಾಜೀನಾಮೆಗೆ ನಿರ್ಧಾರ ತಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *