ರಾಜ್ಯಪಾಲರ ವಿರುದ್ದ ವಿವಾದಾತ್ಮಕ ಹೇಳಿಕೆ, ಮಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಐವನ್ ಡಿಸೋಜಾರ ಮನೆಗೆ ಕಲ್ಲು ತೂರಾಟ..!
ಮಂಗಳೂರು : ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಅವರ ವಿವಾದಾತ್ಮಕ ಹೇಳಿಕೆ ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದ್ದು ಮಂಗಳೂರಿನಲ್ಲಿರುವ ಐವನ್ ಡಿಸೋಜ ಅವರ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ.
ಬುಧವಾರ ರಾತ್ರಿ ಸುಮಾರು 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಈ ಸಂದರ್ಭ ಐವನ್ ಡಿಸೋಜಾ ಅವರು ಮನೆಯಲ್ಲಿರದೆ ಬೆಂಗಳೂರಿನಲ್ಲಿ ಪಕ್ಷದ ಮೀಟಿಂಗ್ ಗೆ ಹೋಗಿದ್ದರು ಎನ್ನಲಾಗಿದೆ. ಸುಮಾರು 5 ರಿಂದ ಆರು ಜನರ ತಂಡ ರಾತ್ರಿ 11 ರ ಸುಮಾರಿಗೆ ನಗರದ ವಾಲೆನ್ಸಿಯದಲ್ಲಿರುವ ಐವನ್ ಡಿಸೋಜಾ ಅವರ ಮನೆಗೆ ಕಲ್ಲು ತೂರಾಟ ನಡೆಸಿ ಘೋಷಣೆಗಳನ್ನು ಕೂಗಿ ಬಳಿಕ ಪರಾರಿಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಯಾವುದೇ ಹಾನಿಯಾಗಿಲ್ಲವೆಂದು ಹೇಳಲಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.