ಪುತ್ತೂರು; ಪದವಿಪೂರ್ವ ಕಾಲೇಜಿನ ಪ್ರ.ಪಿಯುಸಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನ ಹಿಂದೂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ತನಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದು, ವಿದ್ಯಾರ್ಥಿ ಮೇಲೆ ಮಹಿಳಾ ಠಾಣೆಯಲ್ಲಿ ಫೊಕ್ಸೊ ಪ್ರಕರಣ ದಾಖಲಾಗಿದೆ. ಆದರೆ ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ವಿದ್ಯಾರ್ಥಿನಿಯ ಆರೋಪ ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೇ `ಕಟ್ಟುಕಥೆ’ ಹೆಣೆದಿದ್ದಾಳೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಪುತ್ತೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿರುವ ಬನ್ನೂರು ಗ್ರಾಮ ವ್ಯಾಪ್ತಿಯ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿ ಮಂಗಳವಾರ ಮಧ್ಯಾಹ್ನ ವೇಳೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ತಾನು ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ತೆರಳುತ್ತಿದ್ದ ವೇಳೆ ಪರಿಚಯಸ್ಥನಾದ ತನ್ನದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಾ ವಿಭಾಗದಲ್ಲಿ ಕಲಿಯುತ್ತಿರುವ ಹಿಂದೂ ಸಮುದಾಯದ ವಿದ್ಯಾರ್ಥಿಯೊಬ್ಬ ಹಿಂದುಗಡೆಯಿಂದ ಹಿಂಬಾಲಿಸಿಕೊಂಡು ಬಂದು ಹುಡುಗಿಯೊಬ್ಬಳ ಹೆಸರು ಹೇಳಿ ನೀನು ಅವಳಾ ಗೆಳತಿಯಾ ಎಂದು ಪ್ರಶ್ನಿಸಿದ. ಬಳಿಕ ನಾನು ಆಕೆಯನ್ನು ಪ್ರೀತಿಸುವುದಿಲ್ಲ. ನಿನ್ನನ್ನು ಪ್ರೀತಿಸುತ್ತೇನೆ ಎಂದು ಹರಿತವಾದ ಬ್ಲೇಡಿನಂತಹ ಆಯುಧದಿಂದ ಕೈಗೆ ಕೊಯ್ದು ಓಡಿ ಹೋದ ಎಂದು ದೂರು ನೀಡಿದ್ದಳು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರು ವಿದ್ಯಾರ್ಥಿನಿಯ ಆರೋಪಕ್ಕೆ ಸಾಕ್ಷ್ಯಾಧಾರ ಸಂಗ್ರಹಿಸುವ ನಿಟ್ಟಿನಲ್ಲಿ ವಿವಿಧ ಕೋನಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದರು. ಕಾನೂನಿನೊಂದಿಗೆ ಸಂಘರ್ಷಕ್ಕೋಳಗಾದ ಬಾಲಕನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಅಲ್ಲದೆ ವಿವಿಧ ಕಡೆಗಳಲ್ಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಸಿದ್ದರು. ಆದರೆ ವಿದ್ಯಾರ್ಥಿನಿಯ ಆರೋಪವನ್ನು ಮತ್ತು ಹೇಳಿಕೆಯನ್ನು ಪುಷ್ಠೀಕರಿಸುವ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದಾರೆ.
ವಿದ್ಯಾರ್ಥಿನಿಯು ಶ್ರೀಧರ್ ಭಟ್ ಅಂಗಡಿಯ ಬಳಿಯಿಂದಾಗಿ ಕಾಲೇಜಿಗೆ ಹೋಗುವ ವೇಳೆ ಈ ಘಟನೆ ನಡೆದಿರುವುದಾಗಿ ತಿಳಿಸಿದ್ದರು. ದೂರಿಗೆ ಸಂಬಂಧಿಸಿ ಪೊಲೀಸರು ವಿವಿಧ ಕಡೆಯ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾಲೇಜಿನ ಮಕ್ಕಳನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ತನಿಖೆಯ ವೇಳೆ ಸಿಕ್ಕಿರುವ ಮಾಹಿತಿಯಂತೆ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ ಸಮಯದಲ್ಲಿ ಶ್ರೀಧರ್ ಭಟ್ ಅಂಗಡಿ ಎದುರಿನ ರಸ್ತೆ ಮೂಲಕವಾಗಿ ಮೂಲಕವಾಗಿ ಕಾಲೇಜಿಗೆ ಹೋಗಿಲ್ಲ. ಬದಲಾಗಿ ಆಕೆ ಬೊಳುವಾರಿನಿಂದ ಸ್ನೇಹ ಜವುಳಿ ಅಂಗಡಿಯ ಮೂಲಕವಾಗಿ ಕೊಂಬೆಟ್ಟು ರಸ್ತೆಯಲ್ಲಿ ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಜತೆ ಹೋಗಿರುವುದು ದೃಢಪಟ್ಟಿದೆ. ಕಾನೂನಿನೊಂದಿಗೆ ಸಂಘರ್ಷಕ್ಕೋಳಗಾದ ಬಾಲಕ ಪುತ್ತೂರು ಬಸ್‌ನಿಲ್ದಾಣದಿಂದ ನೆಲ್ಲಿಕಟ್ಟೆ ರಸ್ತೆ ಮೂಲಕವಾಗಿ ದೇವಳದ ಎದುರಿನ ರಸ್ತೆ ಮೂಲಕವಾಗಿ ಕಾಲೇಜಿಗೆ ಹೋಗಿರುವುದು ಸ್ಪಷ್ಟಗೊಂಡಿದೆ.
ಇಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರೊಂದಿಗೆ ಸಂತ್ರಸ್ತೆ ವಿದ್ಯಾರ್ಥಿನಿ ಕಾಲೇಜಿನ ವಿಶ್ರಾಂತಿ ಕೊಠಡಿಗೆ ತೆರಳಿ ಬುರ್ಖಾ ತೆಗೆದಿದ್ದಳು. ಆ ಸಮಯದಲ್ಲಿ ಆಕೆಯ ಕೈಯಲ್ಲಿ ಗಾಯವಾಗಲೀ, ರಕ್ತದ ಗುರುತುಗಳಾಗಲೀ ಇರಲಿಲ್ಲ. ಕೈಯ ಭಾಗಕ್ಕೆ ಯಾವುದೋ ಹರಿತವಾದ ಆಯುಧದಿಂದ ತಿವಿದಿರುವುದಾಗಿ ಆರೋಪಿಸಲಾಗಿದ್ದರೂ ಆಕೆ ಧರಿಸಿದ್ದ ಬುರ್ಖಾದಲ್ಲಿ ಹರಿದ ಗುರತು ಇರಲಿಲ್ಲ. ವಿಶ್ರಾಂತಿ ಕೊಠಡಿಯಿಂದ ತರಗತಿ ಕೊಠಡಿಗೆ ಬಂದಿದ್ದ ಬಾಲಕಿ ಮತ್ತೆ ವಾಶ್ ರೂಮ್‌ಗೆ ಹೋಗಿ ಬರುವಾಗ ಆಕೆಯ ಕೈಯಲ್ಲಿ ಗಾಯ ಮತ್ತು ರಕ್ತವಿತ್ತು ಎಂಬ ವಿಚಾರ ಆಕೆಯ ಸ್ನೇಹಿತೆಯರ ವಿಚಾರಣೆಯಿಂದ ತಿಳಿದು ಬಂದಿದೆ ಎಂಬ ಮಾಹಿತಿ ಲಭಿಸಿದೆ.
ವಿದ್ಯಾರ್ಥಿನಿಯ ಕೈಯಲ್ಲಿ ಗಾಯವಾಗಿರುವ ವಿಚಾರವನ್ನು ಆಕೆಯ ಸ್ನೇಹಿತೆಯರು ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತಂದಿದ್ದಾರೆ. ಪ್ರಾಂಶುಪಾಲರು ಆಕೆಯ ತಾಯಿಗೆ ಈ ಕುರಿತು ಮಾಹಿತಿ ನೀಡಿ, ಇಬ್ಬರು ಉಪನ್ಯಾಸಕಿಯರ ಜತೆಗೆ ಆಕೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿ ಗಾಜು ತಾಗಿ ಗಾಯವಾಗಿದೆ ಎಂದು ವೈದ್ಯರ ಮುಂದೆ ಹೇಳಿಕೆ ನೀಡಿದ್ದಾಳೆ. ಆಸ್ಪತ್ರೆಗೆ ಬಂದ ತಾಯಿಯ ಉಪಸ್ಥಿತಿಯಲ್ಲೇ ವೈದ್ಯರು ಆಕೆಯ ಗಾಯಕ್ಕೆ ಬ್ಯಾಂಡೇಜ್ ಅಳವಡಿಸಿ ಔಷಧಿ ನೀಡಿದ್ದಾರೆ. ಬಳಿಕ ಉಪನ್ಯಾಸಕಿಯರು ಆಕೆಯನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಬಳಿಕ ತಾಯಿಯ ಜತೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆ ಬಳಿಕ ನಡೆದ ವಿದ್ಯಮಾನ ಪುತ್ತೂರಿನಲ್ಲಿ ಗೊಂದಲಕಾರಿ ವಾತಾವರಣ ಸೃಷ್ಠಿಗೆ ಕಾರಣವಾಗಿತ್ತು.
ಮನೆಯಿಂದ ಮನೆಗೆ ತಾಯಿಯ ಜತೆ ತೆರಳಿದ್ದ ವಿದ್ಯಾರ್ಥಿನಿ ತನ್ನ ತಾಯಿಯಲ್ಲಿ ತನ್ನ ಕೈಗೆ ಚೂರಿಯಿಂದ ಇರಿದಿದ್ದು ಎಂದಿದ್ದಾಳೆ. ಈ ವಿಚಾರವನ್ನು ಆಕೆಯ ತಾಯಿ ಮುಸ್ಲಿಂ ಸಂಘಟನೆಗಳ ಯುವಕರಿಗೆ ತಿಳಿಸಿ, ಮತ್ತೆ ಆಕೆಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸುವ ಕೆಲಸ ಮಾಡಿದ್ದಾರೆ. ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳಿಗೆ ಚೂರಿಯಿಂದ ಇರಿಯಲಾಗಿದೆ ಎಂಬ ಪ್ರಚಾರವಾದ ಹಿನ್ನಲೆಯಲ್ಲಿ ಎಸ್‌ಡಿಪಿಐ, ಪಿಎಫ್‌ಐ, ಕಾಂಗ್ರೆಸ್ ಪಕ್ಷದ ಸೇರಿದಂತೆ ವಿವಿಧ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆಯ ಒಳಗೆ ಮತ್ತು ಹೊರಗಡೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿ, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಳ್ಳು ಹೇಳಿಕೆ ನೀಡಲು ತಿಳಿಸಿರುವ ಉಪನ್ಯಾಸಕಿಯ ವಿರುದ್ದವೂ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿತೊಡಗಿದ ಹಿನ್ನಲೆಯಲ್ಲಿ ಗೊಂದಲಕಾರಿ ವಾತಾವರಣ ಸೃಷ್ಠಿಯಾಗಿತ್ತು.
ವಿದ್ಯಾರ್ಥಿನಿಯ ಹೇಳಿಕೆ ಹೀಗಿತ್ತು…..
ನಾನು ಯಾವಾಗಲು ಬೊಳುವಾರಿನಿಂದಾಗಿ ಕಾಲೇಜಿಗೆ ಬರುವುದು, ಇವತ್ತು ಬೆಳಿಗ್ಗೆ 8.45ರ ವೇಳೆಗೆ ಪುಸ್ತಕ ಖರೀದಿಸಲೆಂದು ಶ್ರೀಧರ್ ಭಟ್ ಅಂಗಡಿಯ ಬಳಿಯಾಗಿ ಬಂದಿದ್ದೆ. ಆದರೆ ಶ್ರೀಧರ್ ಭಟ್ ಅಂಗಡಿ ತೆರೆದಿರಲಿಲ್ಲ. ಅಲ್ಲಿ ಕಲಾ ವಿಭಾಗದ ಹಿಂದೂ ಸಮುದಾಯ ವಿದ್ಯಾರ್ಥಿ ಸೇರಿದಂತೆ ತುಂಬಾ ಜನರಿದ್ದರು. ಅವರು ನನ್ನ ಹಿಂದಿನಿಂದ ನನ್ನನ್ನು ಹಿಂಬಾಲಿಸಿಕೊಂಡು ಬಂದದ್ದು ನನಗೆ ಗೊತ್ತಾಗಿರಲಿಲ್ಲ. ಹೀಗೇಕೆ ಅವರು ಹಿಂಬಾಲಿಸಿಕೊಂಡು ಬರುತ್ತಿದ್ದಾರೆ ಎಂದು ನನಗೆ ಹೆದರಿಕೆಯಾಯಿತು. ಮತ್ತೆ ಒಬ್ಬನನ್ನು ಬಿಟ್ಟು ಅವರೆಲ್ಲರೂ ಓಡಿದರು. ಮತ್ತೆ ಅವನೊಬ್ಬನೇ ನನ್ನ ಹಿಂದಿನಿಂದ ಬಂದು ನಿಲ್ಲಿಸಿ ನೀನು (ಒಬ್ಬಳು ವಿದ್ಯಾರ್ಥಿನಿಯ ಹೆಸರು ಹೇಳಿ) ಅವಳ ಫ್ರೆಂಡ್ ಅಲ್ವಾ ಅಂತ ಕೇಳಿದ. ಹೌದು ಅಂದಾಗ, ಇಲ್ಲ ನಾನು ಅವಳ ಲೌವ್ ಮಾಡುವುದಿಲ್ಲ.ನಿನ್ನನ್ನೇ ಲೌವ್ ಮಾಡುತ್ತೇನೆ ಅಂದ. ಆಗ ನಾನು ಬಾಯಿಗೆ ಬಂದಂತೆ ಬೈದು, ಜಾತಿ ಗಲಾಟೆ ಎಬ್ಬಿಸಲು ಹೀಗೆಲ್ಲಾ ಮಾಡುವುದು ಅಂದೆ. ಆ ವೇಳೆ ಆತ ಹಾಗಲ್ಲ,ನಾನು ನಿನ್ನನ್ನೇ ಲೌವ್ ಮಾಡುತ್ತೇನೆ ಎಂದು ಅಡ್ಡ ಕೈಯಿಟ್ಟ. ಆಗ ನಾನು ಕೈಗೆ ಕುಟ್ಟಿದೆ.ಆ ವೇಳೆ ಆತ ಕೈಗೆ ಕೊಯ್ದು ಓಡಿದ. ಬ್ಲೇಡಿನಿಂದ ಕೊಯ್ದದ್ದು ಆಗಿರಬಹುದು ಎಂದು ವಿದ್ಯಾರ್ಥಿನಿ ಘಟನೆಯ ಕುರಿತು ಹೇಳಿಕೆ ನೀಡಿದ್ದಳು. ನಾನು ಕಾಲೇಜಿಗೆ ತೆರಳಿ ಮಾಹಿತಿ ನೀಡಿದಾಗ ಉಪನ್ಯಾಸಕಿಯೊಬ್ಬರು, ಕೈಗೆ ಕೊಯ್ದದ್ದೆಂದು ಹೇಳಬೇಡ,ಗ್ಲಾಸ್ ತಾಗಿ ಗಾಯಗೊಂಡದ್ದೆ ಎಂದು ಹೇಳು ಎಂದು ತಿಳಿಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಆಕೆ ತಿಳಿಸಿದ್ದಳು.