ಉಡುಪಿ:(ಆ.23) ಅವರಿಬ್ಬರಿಗೂ ಮದುವೆಯಾಗಿ ಕೇವಲ 9 ತಿಂಗಳು ಕಳೆದಿತ್ತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ದಿನ ಕಳೆಯುತ್ತಲೇ ಪತಿ, ಪತ್ನಿಯ ನಡುವೆ ಜಗಳ ಶುರುವಾಗಿತ್ತು. ಕೊನೆಗೆ ಗಂಡ ಹೆಂಡತಿ ಜಗಳ ಅಂತ್ಯವಾಗಿದ್ದು ಕೊಲೆಯಲ್ಲಿ. ಕಾರ್ಕಡದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: 🛑ಹುಬ್ಬಳ್ಳಿ: ಪ್ರೀತಿ ಮಾಡುವಂತೆ ಒತ್ತಾಯ
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಸಮೀಪದ ಕಾರ್ಕಡದಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಗಂಡ, ಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ ಆದರೆ ಇಲ್ಲಿ , ಗಂಡ ಹೆಂಡತಿ ಜಗಳ ರಾತ್ರಿಯಿಂದ ಬೆಳಗಿನವರೆಗೂ ಸಾಗಿ, ಬೆಳಗಿನ ಜಾವ ಕೊಲೆಯಲ್ಲಿ ಅಂತ್ಯ ಕಂಡಿದೆ. ಹೀಗೆ ಸಾವನ್ನಪ್ಪಿರುವಾಕೆಯ ಹೆಸರು ಜಯಶ್ರೀ. ಬೀದರ್ ಜಿಲ್ಲೆಯ ದಂಬಳಾಪುರದ ನಿವಾಸಿಯಾಗಿರುವ ಜಯಶ್ರೀಗೆ ಕಳೆದ ಒಂಬತ್ತು ತಿಂಗಳ ಹಿಂದೆಯಷ್ಟೇ ಬ್ರಹ್ಮಾವರ ತಾಲೂಕಿನ ಗುಂಡ್ಮಿಯ ನಿವಾಸಿಯಾಗಿರುವ ಕಿರಣ್ ಅವರನ್ನು ಮದುವೆಯಾಗಿದ್ದರು.
ಮದುವೆಯಾದ ಹೊಸತರಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ದಿನ ಕಳೆದಂತೆ ಪತಿ ಪತ್ನಿಯ ನಡುವೆ ಜಗಳ ಶುರುವಾಗಿತ್ತು. ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಕಾರ್ಕಡದ ಪಡುಹೋಳಿ ಸಮೀಪದ ಬಾಡಿಗೆ ಮನೆಯೊಂದರಲ್ಲಿ ದಂಪತಿ ವಾಸವಾಗಿದ್ದರು. ಮದುವೆಯಾದ ದಿನದಿಂದಲೂ ಪತ್ನಿ ವಿಪರೀತ ಮೊಬೈಲ್ ಬಳಕೆ ಮಾಡುತ್ತಿದ್ದಳು. ಪತ್ನಿಯ ರೀಲ್ಸ್ ಹುಚ್ಚಿಗೆ ಪತಿ ಹಾಗೂ ಪತ್ನಿಯ ನಡುವೆ ಪದೇ ಪದೇ ಜಗಳವಾಗುತ್ತಲೇ ಇತ್ತು.
ರೀಲ್ಸ್ ಜೊತೆಗೆ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಸುತ್ತಿದ್ದ, ಜಯಶ್ರೀಯ ನಡವಳಿಕೆ ಪತಿ ಕಿರಣ್ ಗೆ ಇಷ್ಟವಾಗುತ್ತಿರಲಿಲ್ಲ. ನಿನ್ನೆ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿತ್ತು ಎನ್ನಲಾಗುತ್ತದೆ. ಇಬ್ಬರ ಜಗಳ ಶುಕ್ರವಾರ ಬೆಳಗಿನ ವರೆಗೂ ಮುಂದುವರಿದಿತ್ತು.
ಜಗಳ ವಿಪರೀತಕ್ಕೆ ತೆರಳುತ್ತಿದ್ದಂತೆಯೇ ಕಿರಣ್ ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಪತ್ನಿ ಜಯಶ್ರೀ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದಾಗಿ ಜಯಶ್ರೀ ಸಾವನ್ನಪ್ಪಿದ್ದಾಳೆ. ಪತ್ನಿಯನ್ನು ಕೊಲೆಗೈದು ಪತಿ ಕಿರಣ್ ಮನೆಯಲ್ಲಿಯೇ ಉಳಿದುಕೊಂಡಿದ್ದ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು, ಶವವನ್ನು ಆಸ್ಪತ್ರೆಗೆ ಸಾಗಿಸಿದ್ದು, ಕೊಲೆ ಆರೋಪಿ ಕಿರಣ್ ನನ್ನು ವಶಕ್ಕೆ ಪಡೆದುಕೊಂಡಿದ್ದರು ಎನ್ನಲಾಗುತ್ತಿದೆ.
ಸದ್ಯ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರೋದಕ್ಕೆ ಸಾಧ್ಯ. ಕ್ಷುಲಕ ಕಾರಣಕ್ಕೆ ಕೊಲೆಗೈದ ಪತಿ ಇದೀಗ ಜೈಲು ಸೇರಿದ್ದಾನೆ.