ಉಡುಪಿ:(ಆ.23) ಆಗಸ್ಟ್ 26ರಂದು ನಡೆಯಲಿರುವ ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೃಷ್ಣ ನಗರಿ ಸಜ್ಜುಗೊಳ್ಳುತ್ತಿದೆ. ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಟಮಠಗಳಲ್ಲಿ ತಯಾರಿ ಭರದಿಂದ ಸಾಗಿದ್ದು, ಹಬ್ಬದ ಕಳೆ ಬಂದಿದೆ.
ಇದನ್ನೂ ಓದಿ: 🔴ಉಡುಪಿ: ಆ. 25ರಂದು ಗುರು ಸಂದೇಶ ಸಾಮರಸ್ಯ ಜಾಥ
ಸೋಮವಾರ ವಿವಿಧ ಕಾರ್ಯಕ್ರಮಗಳು ಮತ್ತು ರಾತ್ರಿ ಅಘ್ರ್ಯ ಪ್ರಧಾನ ಇದ್ದರೆ, ಮರುದಿನ ಮಂಗಳವಾರ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ಹಬ್ಬ ಪರಾಕಾಷ್ಟೆ ತಲುಪಲಿದೆ.
ಈ ಪ್ರಯುಕ್ತ ಕೃಷ್ಣ ಮಠದಲ್ಲಿ ಭಕ್ತರಿಗಾಗಿ ವಿತರಿಸಲು ಸಾವಿರಾರು ಚಕ್ಕುಲಿ -ಉಂಡೆಪ್ರಸಾದ ತಯಾರಿಸಲಾಗುತ್ತಿದೆ. ಉಂಡೆ ಚಕ್ಕುಲಿ ಪ್ರಸಾದವನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ವಿತರಿಸಲಾಗುತ್ತಿದೆ.
ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ ಚಕ್ಕುಲಿ ತಯಾರಿಸುವ ಕಾರ್ಯ ಕೃಷ್ಣಮಠದಲ್ಲಿ ನಡೆಯುತ್ತಿದೆ. ಈ ಬಾರಿ ಪರ್ಯಾಯ ಪುತ್ತಿಗೆ ಶ್ರೀಗಳು ಲಡ್ಡು ಪ್ರಿಯ ಕೃಷ್ಣನಿಗಾಗಿ 108 ಬಗೆಯ ಲಡ್ಡುಗಳನ್ನು ತಯಾರಿಸುತ್ತಿರುವುದು ವಿಶೇಷ.
ಎಲ್ಲ ಬಗೆಯ ಹಣ್ಣು ,ತರಕಾರಿ ,ಡ್ರೈ ಫ್ರುಟ್ ಮತ್ತು ಧಾನ್ಯಗಳಿಂದ ಬಗೆಬಗೆಯ ಲಡ್ಡು ಕೃಷ್ಣನಿಗಾಗಿ ತಯಾರಾಗುತ್ತಿದೆ. ಇದನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ಹಂಚಲಾಗುತ್ತದೆ.
ಸಾಮಾನ್ಯವಾಗಿ ಪ್ರತೀ ವರ್ಷ ಉಂಡೆ ಚಕ್ಕುಲಿ ತಯಾರಿ ನಡೆಯುತ್ತದೆಯಾದರೂ 108 ಬಗೆಯ ಉಂಡೆ ತಯಾರಿ ಇದೇ ಮೊದಲು ಎನ್ನುತ್ತಾರೆ ಬಾಣಸಿಗರು.