ನವದೆಹಲಿ:(ಆ.25) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಏಕೀಕೃತ ಪಿಂಚಣಿ ಯೋಜನೆಗೆ ಅನುಮೋದನೆ ನೀಡಿದೆ. ಇದರ ಅಡಿಯಲ್ಲಿ ಕೇಂದ್ರ ನೌಕರರಿಗೆ ವೇತನದ ಶೇಕಡಾ 50 ರಷ್ಟು ಪಿಂಚಣಿ ಸಿಗಲಿದೆ.
ನೂತನ ಪಿಂಚಣಿ ಸ್ಕೀಮ್ 2025 ಏಪ್ರಿಲ್ 1 ರಂದು ಜಾರಿಗೆ ಬರಲಿದೆ. ಕೇಂದ್ರದ ಹೊಸ ಪಿಂಚಣಿ ಯೋಜನೆ ಉದ್ದೇಶ ತನ್ನ ನೌಕರರಿಗೆ ಗ್ಯಾರಂಟಿ ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ಕನಿಷ್ಠ ಖಚಿತ ಪಿಂಚಣಿ ಒದಗಿಸುವುದಾಗಿದೆ. ಸಂಪುಟ ಸಭೆ ಬೆನ್ನಲ್ಲೇ ಮಾತನಾಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸರ್ಕಾರಿ ನೌಕರರಿಗೆ 50% ಗ್ಯಾರಂಟಿ ಪಿಂಚಣಿ ಯೋಜನೆ ಸಿಗಲಿದೆ.
ನೌಕರನ ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ 50 ಪ್ರತಿಶತವನ್ನು ಪಿಂಚಣಿಯಾಗಿ ಪಡೆಯುತ್ತಾರೆ ಎಂದು ತಿಳಿಸಿದ್ದಾರೆ.
ಕುಟುಂಬ ಪಿಂಚಣಿ ಯೋಜನೆಯಡಿಯಲ್ಲಿ.. ಪಿಂಚಣಿದಾರ ಸೇವಾ ಅವಧಿಯಲ್ಲಿ ಸಾವನ್ನಪ್ಪಿದ್ರೆ ಕುಟುಂಬ ಶೇಕಡಾ 60 ರಷ್ಟು ಪಿಂಚಣಿ ಪಡೆಯುತ್ತದೆ. ಅದೇ ಸಮಯದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂಪಾಯಿ ಪಿಂಚಣಿ ಸಿಗಲಿದೆ.
ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇಕಡಾ 10 ರಷ್ಟು ಕೊಡುಗೆ ನೀಡಿದರೆ ಕೇಂದ್ರ ಸರ್ಕಾರವು ಶೇಕಡಾ 14 ರಷ್ಟು ಕೊಡುಗೆ ನೀಡುತ್ತದೆ. ಇದನ್ನು ಯುಪಿಎಸ್‌ನೊಂದಿಗೆ ಶೇಕಡಾ 18ಕ್ಕೆ ಹೆಚ್ಚಿಸಲಾಗುತ್ತದೆ.
ರಾಜ್ಯ ಸರ್ಕಾರ ಯುಪಿಎಸ್ ಜಾರಿಗೊಳಿಸಲು ಬಯಸಿದರೆ ಜಾರಿಗೆ ತರಬಹುದು. ಸಮಗ್ರ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ರಾಜ್ಯ ಸರ್ಕಾರಗಳಿಗೂ ನೀಡಲಾಗುವುದು.
ರಾಜ್ಯ ಸರ್ಕಾರಗಳು ಯುಪಿಎಸ್ ಆಯ್ಕೆಯನ್ನು ಆರಿಸಿದರೆ, ಫಲಾನುಭವಿಗಳ ಸಂಖ್ಯೆ ಅಂದಾಜು 90 ಲಕ್ಷಕ್ಕೆ ಹೆಚ್ಚಾಗುತ್ತದೆ. ಈ ಯೋಜನೆಯು ಏಪ್ರಿಲ್ 1, 2025 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.