Ballary Central jail:(ಆ.29) ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನೇನು ಸದ್ಯದಲ್ಲೇ ಜಾಮೀನಿಗೆ ಅರ್ಜಿ ಸಲ್ಲಿಸುವ ಕಾಲ ಹತ್ತಿರ ಬಂತೆಂದು ಎದುರು ನೋಡುವಾಗಲೇ ಅವರ ಜೈಲು ವಾಸ ಯಾಕೋ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಒಂದಾದರ ಮೇಲೊಂದರಂತೆ ಕಷ್ಟಗಳನ್ನು ಅವರೇ ಮೈ ಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: 💥Darshan Thoogudeepa : ದಾಸ ಬಳ್ಳಾರಿ ಜೈಲಿಗೆ ಶಿಫ್ಟ್
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಇದೀಗ ಜೈಲಲ್ಲಿ ಈ ನಟನ, ಆರೋಪಿಯ ಐಷಾರಾಮಿ ಆತಿಥ್ಯದ ಬಗ್ಗೆ ಎಲ್ಲರೂ ಗಮನಿಸಿದ್ದಾರೆ. ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಅವರನ್ನು ದೂರದ, ದೇಶದ ಅತೀ ಕಠಿಣ ಕಾರಾಗೃಹವಾಗಿರುವ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿ ಜೈಲು ಅಂದರೆ ಎಂತಾ ಖೈದಿಯು ಒಮ್ಮೆ ನಡುಗುತ್ತಾನೆ. ಅಷ್ಟೇ ಏಕೆ ತಪ್ಪು ಮಾಡಿದಾಗ ನಿನ್ನನ್ನು ಬಳ್ಳಾರಿ ಜೈಲಿಗೆ ಕಳುಹಿಸುತ್ತೇನೆ ಎಂಬ ಮಾತು ಸಾಮಾನ್ಯವಾಗಿ ಆಡುವುದಿದೆ. ಈ ಭಯಾನಕ ಕಾರಾಗೃಹದ ಇತಿಹಾಸವೇ ಹಾಗಿದೆ. ಗಣಿ ನಾಡಲ್ಲಿರೋ ‘ಕೇಂದ್ರ ಕಾರಾಗೃಹ ಬಳ್ಳಾರಿ’ಯ ಇತಿಹಾಸ ಬಗ್ಗೆ ತಿಳಿಯೋಣ.
ಗಣಿನಾಡು ಎಂದು ಪ್ರಸಿದ್ಧಿಯಾಗಿರುವ ಬಳ್ಳಾರಿ ಈ ಮೊದಲು ಜೈಲುಗಳ ತಾಣವಾಗಿತ್ತು. ಇಂದಿಗೂ ಕೂಡ ದೇಶದ ಅತ್ಯಂತ ಕಠಿಣ ಜೈಲುಗಳಲ್ಲಿ ಬಳ್ಳಾರಿ ಜೈಲು ಕೂಡ ಒಂದಾಗಿದೆ. ಇದರ ಇತಿಹಾಸ ಸ್ವಾತಂತ್ರ್ಯ ಪೂರ್ವದಿದಂಲೂ ಇದೆ. ದೇಶದ್ರೋಹಿಗಳನ್ನು ಹಿಂಸಿಸಲು, ಶಿಕ್ಷೆ ನೀಡಲು ಹೇಳಿ ಮಾಡಿಸಿದ ಅಂಡಮಾನ್ ಜೈಲು ಬಿಟ್ಟರೆ ದೇಶದಲ್ಲಿ ಬಳ್ಳಾರಿ ಜೈಲು ಎರಡನೇ ಅತೀ ಕಠಿಣ ಜೈಲು ಎಂಬ ಸ್ಥಾನ ಪಡೆದಿದೆಯಂತೆ. ಅಲ್ಲದೆ ಸಿನಿಮಾಗಳಲ್ಲಿ ಬಳ್ಳಾರಿ ಜೈಲನ್ನು ಉದಾಹರಣೆಯಾಗಿಟ್ಟುಕೊಂಡು ಅದೆಷ್ಟು ಡೈಲಾಗ್‌ಗಳು ಬಂದಿವೆಯೋ ಲೆಕ್ಕ ಹಾಕುವುದು ಕಷ್ಟ. ಬಳ್ಳಾರಿ ಜೈಲು ಎಂದರೆ ಅಷ್ಟು ಕಠಿಣ ಅನ್ನೋ ಭಾವನೆಯಿದೆ.
ಕರ್ನಾಟಕದಲ್ಲಿರುವ ಕೆಲವೇ ಕೆಲವು ದೊಡ್ಡ ಜೈಲುಗಳ ಪೈಕಿ ಬಳ್ಳಾರಿ ಜೈಲು ಕೂಡ ಒಂದು. ಇಲ್ಲಿ ಸಾವಿರಕ್ಕೂ ಅಧಿಕ ಕೈದಿಗಳನ್ನು ಇರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ವಾತಂತ್ರ ಹೋರಾಟದ ಸಮಯದಲ್ಲಿ ಸಾವಿರ ಮಂದಿ ಹೋರಾಟಗಾರರನ್ನು ಬಂಧಿಸುವುದಕ್ಕೆ ಈ ಜೈಲನ್ನು ಬಳಕೆ ಮಾಡುತ್ತಿದ್ದರು ಎಂದು ವರದಿಯಾಗಿದೆ. ಇಂದಿಗೂ ಈ ಜೈಲು ಅಷ್ಟೇ ಭದ್ರವಾಗಿದೆ.
ಅಂದಹಾಗೆ 1800 ರಲ್ಲಿ ಬಳ್ಳಾರಿಯನ್ನು ಮದ್ರಾಸ್ ಪ್ರೆಸಿಡೆನ್ಸಿಯೊಂದಿಗೆ ವಿಲೀನಗೊಳಿಸಿದ ನಂತರ, ಬ್ರಿಟಿಷರು ಇಲ್ಲಿ ಮೂರು ಜೈಲುಗಳನ್ನು ಸ್ಥಾಪಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ 1872 ರಲ್ಲಿ ಮೊದಲ ಕಾರಾಗೃಹವನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ಕೇಂದ್ರ ಕಾರಾಗೃಹ ಎಂದು ಕರೆಯಲಾಯಿತು. ಎರಡನೆಯದು ಅಲಿಪುರ ಬಯಲು ಜೈಲು, ಮತ್ತು ಮೂರನೆಯದು ಆರ್ಥರ್ ವೆಲ್ಲಿಸ್ಲಿ ಟಿ ಬಿ ಸ್ಯಾನಿಟೋರಿಯಂ ಜೈಲು, ಈ ಜೈಲಿನಲ್ಲಿ ಯುದ್ಧ ಕೈದಿಗಳನ್ನು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರು ಕೂಡಿ ಹಾಕುತ್ತಿದ್ದರು. ಬಳ್ಳಾರಿ ಕೇಂದ್ರ ಕಾರಾಗೃಹವನ್ನು ಇನ್ನೂ ಬಳಸಲಾಗುತ್ತಿದೆ.
ರಾಜರ ಕಾಲದಿಂದಲೂ ಬಳ್ಳಾರಿ ಜೈಲಿಗೆ ಇತ್ತು ಪ್ರಾಮುಖ್ಯತೆ:
ಬಳ್ಳಾರಿ ಜಿಲ್ಲೆಗೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಪಡೆದಿತ್ತು.
ಗಲ್ಲು ಶಿಕ್ಷೆಗೂ ಇದೆ ವ್ಯವಸ್ಥೆ:
ಬಳ್ಳಾರಿ ಜೈಲಿನಲ್ಲಿ ಗಲ್ಲು ಶಿಕ್ಷೆಗೂ ವ್ಯವಸ್ಥೆಯಿದೆ. ದೇಶದಲ್ಲಿ ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಇರುವ ಕೆಲವೇ ಕೆಲವು ಜೈಲುಗಳಲ್ಲಿ ಇದೂ ಕೂಡ ಒಂದು. ಇದೇ ಬಳ್ಳಾರಿ ಜೈಲ್‌ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರನ್ನು ಶಿಫ್ಟ್ ಮಾಡಲಾಗುತ್ತೆ. ಈ ಜೈಲಿಗೆ ಜನಪ್ರಿಯರ ವ್ಯಕ್ತಿಗಳು ಭೇಟಿ ಕೊಟ್ಟಿದ್ದರು ಎಂದು ವರದಿಯಾಗಿವೆ.