ಕಡಬ:(ಆ.29) ರಸ್ತೆ ಕನ್ಸ್ಟ್ರಕ್ಷನ್ ಕಂಪೆನಿಗೆ ಸೇರಿದ 40 ಕಬ್ಬಿಣದ ಪ್ಲೇಟ್ ಗಳನ್ನು ಕಳ್ಳತನ ಮಾಡಿದ ಪ್ರಕರಣದಡಿ ಅಂತರ್ ಜಿಲ್ಲಾ ಕಳ್ಳ ಹಾಗೂ ಕುಖ್ಯಾತ ಗರುಡ ಗ್ಯಾಂಗಿನ ಸದಸ್ಯನನ್ನು ಉಪ್ಪಿನಂಗಡಿ ಠಾಣಾ ತನಿಖಾ ಪಿಎಸ್ ಐ ರುಕ್ಮಾ ನಾಯ್ಕ್ ನೇತೃತ್ವದ ತಂಡ ಕಡಬದ ಆತನ ಮನೆಯಿಂದ ದಸ್ತಗಿರಿ ಮಾಡಿದ್ದಾರೆ.
ಇದನ್ನೂ ಓದಿ: 🛑Bengaluru Murder Case: ಸುಂದರಾಂಗಿಯೇ ಬೇಕೆಂದು ಪ್ರೀತಿಸಿ ಮದುವೆಯಾದ
10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ರಾಜ್ಯದ ವಿವಿಧ ಠಾಣೆಯ ಪೊಲೀಸರಿಗೆ ಬೇಕಾಗಿದ್ದ, ಕಡಬ ತಾಲೂಕಿನ ಐತ್ತೂರು ಗ್ರಾಮದ ಕಾರ್ಯತಡ್ಕ ನಿವಾಸಿ ಅಬ್ದುಲ್ ಹಮೀದ್ ಅಲಿಯಾಸ್ ಹಮೀದ್ (27) ಎಂಬಾತನೇ ಬಂಧಿತ ಆರೋಪಿ.
ಆರೋಪಿಯು ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಪೆರಿಯಶಾಂತಿ, ಬೆದ್ರೋಡಿ, ನೀರಕಟ್ಟೆ ಎಂಬಲ್ಲಿ ಕಳೆದ ವರ್ಷ ಹಾಗೂ ಈ ವರ್ಷ ಕಳ್ಳತನ ಮಾಡಿರುವುದಾಗಿ ತಪ್ಪೋಪ್ಪಿ ಗೊಂಡಿರುತ್ತಾನೆ. ಆರೋಪಿಯು 10-10-2023 ರಂದು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಹೆದ್ದಾರಿ 75 ರ ಅಗಲೀಕರಣ ಕಾಮಗಾರಿಗೆ ಉಪಯೋಗಿಸುವ ಕೆಎನ್ಆರ್ ಸಂಸ್ಥೆಯ ಕಬ್ಬಿಣದ ಸೀಟ್ಗಳನ್ನು ಕಳ್ಳತನ ಮಾಡಿದ್ದ.
ಈತನ ವಿರುದ್ದ ವಿವಿಧ ಪೋಲಿಸ್ ಠಾಣೆಗಳಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಮಂಗಳೂರು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಗಂಗೋಳ್ಳಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಚೋದನೆ ಪ್ರಕರಣ,
ದಾವಣಗೆರೆ ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದ ವಶಕ್ಕೆ ಪ್ರಕರಣ, ಸಕಲೇಶಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಮಾನ್ಯ ಕಳವು ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಕಳವು ಹಾಗೂ ಕನ್ನ ಕಳವು ಪ್ರಕರಣ, ಬೆಂಗಳೂರು ಕೊತ್ತುಲೂರು ಪೊಲೀಸ್ ಠಾಣೆಯಲ್ಲಿ ದರೊಡೆ ಪ್ರಕರಣ, ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದರೊಡೆ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳಲ್ಲಿ ಈತ ಅರೋಪಿಯಾಗಿರುತ್ತಾನೆ. ಈ ಎಲ್ಲಾ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು ಹಾಗೂ ದಸ್ತಗಿರಿ ವಾರಂಟ್ ಕೂಡಾ ಈತನ ವಿರುದ್ಧ ಇತ್ತು.
ಈತನ ಪತ್ತೆ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೋಲಿಸ್ ಠಾಣಾ ತನಿಖಾ ಪಿಎಸ್ಐ ರುಕ್ಮಾ ನಾಯ್ಕ್, ಹೆಡ್ಕಾನ್ಸ್ಟೇಬಲ್ ಹಿತೋಷ್, ಸಿಬ್ಬಂದಿಗಳಾದ ಹೇಮರಾಜ್, ಗಿರೀಶ್, ಶಿವರಾಜ್ ಟಕ್ಕಳಿಕೆ, ಕಡಬ ಪೊಲೀಸ್ ಠಾಣಾ ಸಿಬ್ಬಂದಿಗಳಾದ ರಾಜು ನಾಯ್ಕ ಸಹಕರಿಸಿದರು.