ಉಡುಪಿ:(ಆ.31) ಎಂಟು ಗಂಡಂದಿರ ಮೋಸದ ಮಡದಿಯ ಮದುವೆ ಮಸಲತ್ತು ಈಗ ಬಟಾ ಬಯಲಾಗಿದೆ. ಈಕೆ ಮದುವೆ ಅನ್ನೋದನ್ನೆ ಬ್ಯುಸಿನೆಸ್ ಮಾಡಿಕೊಂಡಿದ್ದಳು, ಮದುವೆಯಾಗದ ಪುರುಷರನ್ನೇ ಟಾರ್ಗೆಟ್ ಮಾಡಿ ಪಂಗನಾಮ ಹಾಕಿದ್ದಾಳೆ. ಉಡುಪಿ ಮೂಲದ ತಬಸುಮಾ ತನ್ನನ್ನು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಕಾರ್ಯಾಧ್ಯಕ್ಷೆ ಎಂದು ಪರಿಚಯಿಸಿಕೊಂಡು ಹಲವರನ್ನು ಮದುವೆಯಾಗಿ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು, ಶಿವಮೊಗ್ಗ, ತುಮಕೂರು ಅಂತೆಲ್ಲ ಊರು ತುಂಬಾ ಗಂಡಂದಿರು. ಈಕೆಯ ಖತರ್ನಾಕ್ ಪ್ಲಾನ್ ಏನೂ.!? ಮದುವೆ ಆದ ಮೇಲೆ ಈಕೆ ಮಾಡುತ್ತಿದ್ದ ನಾಟಕ ಎಂತಹದ್ದು.? ಕೊನೆಗೂ ಊಸರವಳ್ಳಿ ಬಣ್ಣ ಬಯಲಾಗಿದ್ದು ಹೇಗೆ ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.!!!
ಯಾರೀ ಈ ಚೆಲುವೆ?
ಈಕೆಯ ಹೆಸರು ತಬಸುಮ್. ಊಸರವಳ್ಳಿ ಬಣ್ಣ ಬದಲಾಯಿಸುವಂತೆ ಈಕೆ ಗಂಡಂದಿರನ್ನು ಬದಲಾಯಿಸುತ್ತಿದ್ದಳು. ಸದ್ಯ ಈಕೆಯ ಬಣ್ಣ ಬಯಲಾಗಿದೆ. ಹೊಸಪೇಟೆಯ ಮಾಜಿ ಪತಿ ತಬಸುಮಾಳ ಮುಖವಾಡವನ್ನು ಬಯಲು ಮಾಡಿದ್ದಾರೆ. ಉಡುಪಿ ನಿವಾಸಿ ತಬುಸುಮ್ ತಾಜ್ (40) ಎಂಬಾಕೆ ಇದುವರೆಗೆ 8 ಜನರನ್ನು ಮದುವೆಯಾಗಿ ವಂಚಿಸಿದ್ದಾಳೆ. ಮದುವೆಯಾಗಿ ಹೆಂಡತಿ ಬಿಟ್ಟಿರುವ ಅಥವಾ ವಿಧುರ ಶ್ರೀಮಂತ ಗಂಡಸರನ್ನೇ ಈಕೆ ಟಾರ್ಗೆಟ್ ಮಾಡುತ್ತಿದ್ದಳು. ಹೀನಾ ಎಂಟರ್‌ಪ್ರೈಸಸ್ ಎಂಬ ಆಫೀಸ್ ಮಾಡಿಕೊಂಡು ಮುದ್ರಾ ಲೋನ್, ಸರ್ಕಾರಿ ನೌಕರಿ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ಕೊಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದಳು. 18 ವರ್ಷದಿಂದ ಈ ವ್ಯವಹಾರ ಮಾಡಿಕೊಂಡಿದ್ದಳು.
ತಬಸುಮ್ ಟಾರ್ಗೆಟ್ ಮಾಡ್ತಿದ್ದದ್ದು, ಮದುವೆಯಾಗಿದ್ದ ಮುಸ್ಲಿಂ ಪುರುಷರನ್ನು. ಅಂತವರನ್ನೇ ತನ್ನ ಬಲೆಗೆ ಹಾಕೊಂಡು ಆಮೇಲೆ ತನ್ನ ವರಸೆ ಬದಲಾಯಿಸಿಬಿಡ್ತಿದ್ದಳು. ಮದುವೆಗೂ ಮುಂಚೆ ತಾನು ತುಂಬಾ ಸೈಲೆಂಟ್?? ಅಂತ ಬಿಂಬಿಸಿಕೊಳ್ತಿದ್ದಳು. ಒಮ್ಮೆ ಮದುವೆಯಾದ್ರೆ ಸಾಕು ಈಕೆ ಮದುವೆಯಾದವನ ಪಾಡು ದೇವರಿಗೆ ಗೊತ್ತು. ಯಾಕಂದ್ರೆ ಮದುವೆಯಾದ ಆರು ತಿಂಗಳಿಗೆ ಈ ಚಾಲಾಕಿ ಅಸಲಿ ಆಟ ಆರಂಭಿಸ್ತಿದ್ದಳು. ಮದುವೆಯಾದ ಪುರುಷರನ್ನ ಸಂಪರ್ಕ ಮಾಡಿ ನಮ್ಮ ಮನೆಗೆ ಬನ್ನಿ ನನ್ನ ಬಳಿಯೇ ಇರಿ ಅಂತ ನಾಟಕ ಮಾಡೋದು. ಬಳಿಕ 2 ತಿಂಗಳಿಗೊಮ್ಮೆ ನನ್ನತ್ರ ಬಂದ್ರೆ ಸಾಕು ಅಂತ ಮದುವೆಗೆ ಒಪ್ಪಿಸೋದು. ಮದುವೆಯಾದ್ಮೇಲೆ ನಾನು ಗರ್ಭಿಣಿ ಅಂತೆಲ್ಲ ಸುಳ್ಳು ಕತೆ ಕಟ್ಟಿ ಹಣ ಪೀಕೋದಕ್ಕೆ ಶುರು ಮಾಡ್ತಿದ್ದಳು.
ಒಂದ್ವೇಳೆ ಈಕೆಯನ್ನು ಮದುವೆಯಾದ ಬಡಪಾಯಿ ಈಕೆ ನಾಟಕಕ್ಕೆ ಬಗ್ಗದೇ ಇದ್ರೆ. ಅವರ ಹೆಂಡತಿಗೆ ಹೇಳ್ತೀನಿ ಅಂತ ಬ್ಲಾಕ್ ಮೇಲ್ ಮಾಡ್ತಿದ್ಳಂತೆ. ಅದಕ್ಕೂ ಬಗ್ಗದೇ ಇದ್ರೆ ರೇಪ್ ಕೇಸ್ ಹಾಕ್ತೀನಿ ಅಂತ ಗಂಡಂದಿರಿಂದ ಹಣ ಪೀಕುವ ಕೆಲಸ ಮಾಡ್ತಿದ್ಲಂತೆ. ಗಲಾಟೆ ಜಗಳ ಮಾಡಿ ಕೊನೆ ರಾಜಿ ಪಂಚಾಯ್ತಿ ಮಾಡೋ ಮೂಲಕ ಬಂದಷ್ಟು ಬರಲಿ ಅಂತ ಲಕ್ಷ ಲಕ್ಷ ಹಣ ಕಿತ್ಕೊಂಡು ಮಕ್ಕರ್ ಮಾಡ್ತಿದ್ಳಂತೆ. ಹೀಗೆ ಮಕ್ಕರ್ ಮಾಡಿ ಈ ಐನಾತಿ ತಬಸುಮ ಒಂದಲ್ಲ ಎರಡಲ್ಲ ಬರೋಬ್ಬರಿ 10 ರಿಂದ 15 ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಮದುವೆಯಾಗಿ 6 ತಿಂಗಳಿಗೊಬ್ಬರಂತ ಗಂಡಂದಿರನ್ನ ಚೇಂಜ್ ಮಾಡಿ, ಅವರ ಬಳಿಕ ಲಕ್ಷ ಲಕ್ಷ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ.
ಅಸಲಿಗೆ ಈ ತಬಸುಮ್ ಸಾಮಾನ್ಯ ಮಹಿಳೆಯಂತೂ ಅಲ್ಲಾ.. ಯಾಕಂದ್ರೆ ಈಕೆ ಜೆಡಿಎಸ್ ನ ಕಾರ್ಯಕರ್ತೆ. ಜೆಡಿಎಸ್ ನ ಮಹಿಳಾ ಘಟಕದ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾಳೆ. ಇದೇ ಕಾರಣಕ್ಕೆ ಏನೋ ಈಕೆ ಬೀಸಿದ ಬಲೆಗೆ ಅಮಾಯಕರು ಬಿದ್ದು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುರಂತ ಏನಂದ್ರೆ ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಸಾವಿರಾರು ಜನರಿಗೆ ಈಕೆ ಪಂಗನಾಮ ಹಾಕಿದ್ದಾಳೆ ಎನ್ನಲಾಗಿದೆ. ಉಡುಪಿಯಲ್ಲಿ ಇಬ್ಬರನ್ನ ಮದುವೆಯಾಗಿದ್ರೆ, ಶಿವಮೊಗ್ಗ, ಬೆಂಗಳೂರು, ತುಮಕೂರು, ಹೊಸಪೇಟೆ, ಕೋಲಾರ, ಹಾವೇರಿಯಲ್ಲಿ ತಲಾ ಒಬ್ಬರನ್ನ ಬಲೆ ಹಾಕೊಂಡು ಮದುವೆಯಾಗಿದ್ದಳು. ಇದೀಗ ಈಕೆ ಮೋಸದಾಟಕ್ಕೆ ಬೇಸತ್ತು 5 ಜನ ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದಲ್ಲಿ ಕೇಸ್ ಗಳು ನಡೀತಾ ಇದ್ರೂ ಈಕೆ ಮೋಸದ ಮದುವೆಯನ್ನು ಮಾತ್ರ ನಿಲ್ಲಿಸಿರಲಿಲ್ಲ.
ಅಧಿಕೃತ ದಾಖಲೆಯ ಪ್ರಕಾರವೇ ತಬಸುಮ್ ಎಂಟು ಜನರನ್ನ ಮದುವೆಯಾಗಿದ್ದಾಳೆ. ಇನ್ನು ದಾಖಲೆ ಇಲ್ಲದೇ ಅನೇಕರನ್ನು ಮದುವೆಯಾಗಿರೋದಾಗಿ ತಬಸುಮ್ ಮುಖವಾಡವನ್ನು ಹೊಸಪೇಟೆಯ ಮಾಜಿ ಪತಿ ಜೀ ರಾಜಾಹುಸೇನ್ ಕಳಚಿ ಹಾಕಿದ್ದಾರೆ. ತಬಸುಮ್ ಮಾಡಿದ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈ ರಾಜಾಹುಸೇನ್ ಕೂಡ ತಬಸುಮ್ ಹೇಳಿದ್ದ ಕಾಗಕ್ಕ ಗುಬ್ಬಕ್ಕನ ಕತೆಗೆ ಮರುಳಾಗಿ ಆಕೆಯನ್ನ ಮದುವೆಯಾಗಿದ್ದರು. ಆದ್ರೆ ಆಕೆ ಅಸಲಿ ಮುಖದ ಪರಿಚಯವಾದ ತಬಸುಮ್ ಳಿಂದ ದೂರವಾಗಿದ್ರು. ರಾಜಾಹುಸೇನ್ ಮೇಲೆ ಕೇಸ್ ಕೂಡ ಹಾಕಿದ್ಳು. ಆದ್ರೀಗ ಈ ತಬಸುಮ್ ಮಾಡಿದ್ದ ವಂಚನೆಯನ್ನ ಆಕೆಯ ಮಾಜಿ ಪತಿಯೇ ಬಯಲು ಮಾಡಿದ್ದಾರೆ. ವಿಚಿತ್ರ ಏನಂದ್ರೆ ಉಡುಪಿಯಲ್ಲಿ ಈ ತಬಸುಮ್ ಐಷಾರಾಮಿ ಬಂಗಲೆಯಲ್ಲಿದ್ದಾಳಂತೆ. ಮನೆ ಬಾಡಿಗೆಯನ್ನೆ ತಬಸುಮ್ 25 ಸಾವಿರ ಕಟ್ತಿದ್ಲಂತೆ. ಮನೆ ಮುಂದೆ ಕಾರು ಬೈಕ್. 4 ಜನ ಕೆಲಸಗಾರರು ಎಲ್ಲ ಇದ್ರಂತೆ, ಇದನ್ನೆಲ್ಲ ನೋಡಿದ್ದ ರಾಜಾಹುಸೇನ್ ಅಕ್ಷರಶಃ ಬೆಚ್ಚಿ ಬಿದ್ದಿದ್ರು. ಆದ್ರೆ ಯಾವಾಗ ಈ ತಬಸುಮ್? ಜಾತಕವನ್ನ ರಾಜಾಹುಸೇನ್ ಜಾಲಾಡೋದಕ್ಕೆ ಶುರು ಮಾಡಿದ್ರು. ಆಗ್ಲೇ ನೋಡಿ ಈ ಐನಾತಿ ಮಹಿಳೆಯ ಮಸಲತ್ತು ರಿವೀಲ್ ಆಗಿದೆ.
ಹೀಗೆ ಈ ಊಸರವಳ್ಳಿ 10 ರಿಂದ 15 ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾಳೆ. ಸದ್ಯ ತಬಸುಮ್ ವಿರುದ್ಧ ಪ್ರಕರಣ ದಾಖಲಾಗಿದ್ದುಮ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ ಮೂರು ಮತ್ತೊಂದು ಅನ್ನೋ ಹಾಗೆ.. ಇವಳು ಕೂಡ ಮಳ್ಳಿ ಮಳ್ಳಿ ಮದುವೆ ಎಷ್ಟು ಅಂದ್ರೆ 10 ರ ಮೇಲೆ ಇನ್ನೊಂದು ಅಂತ ಮಕ್ಮಲ್ ಟೋಪಿ ಹಾಕಿದ್ದಾಳೆ.