ಮಂಗಳೂರು :(ಸೆ.3) ಎರಡು ವರ್ಷದ ಹಿಂದೆ 98 ಶಾಲೆಗಳು ಉಡುಪಿ, ದಕ್ಷಿಣ ಕನ್ನಡದಲ್ಲಿ ಮುಚ್ಚಿದ್ದರೆ, ಈ ವರ್ಷ 20 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ.
ಇದನ್ನೂ ಓದಿ: 🔵ಬೆಳ್ತಂಗಡಿ: ವಿಪರೀತ ಮಳೆ ಕಾರಣ ಕಾಶಿಪಟ್ಣ ಸ.ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಕುಸಿತ
ಫಲಿತಾಂಶದಲ್ಲಿ ಸದಾ ಮುಂಚೂಣಿಯಲ್ಲಿರುವ ಈ ಎರಡು ಜಿಲ್ಲೆಗಳ ಸರಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಸ್ಥಿತಿಯೇ ಈ ರೀತಿಯಾದರೆ, ಇತರ ಜಿಲ್ಲೆಗಳ ಕಲ್ಪನೆಯೂ ಭೀತಿ ಹುಟ್ಟಿಸುತ್ತದೆ. ವಿದ್ಯಾರ್ಥಿಗಳ ಕೊರತೆ ನಿರಾಸಾದಾಯಕವಾಗಿದ್ದು, ಇನ್ನೊಂದೆಡೆ ಕಾಯಂ ಶಿಕ್ಷಕರ ಕೊರತೆಯೂ ಎದ್ದು ಕಾಣುತ್ತಿದೆ.
ಈ ಶೈಕ್ಷಣಿಕ ವರ್ಷದಲ್ಲಿ ಅವಿಭಜಿತ ಕರಾವಳಿ ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14, ಉಡುಪಿ ಜಿಲ್ಲೆಯಲ್ಲಿ 16 ಶಾಲೆಗಳಲ್ಲಿ ದಾಖಲಾತಿಯಲ್ಲಿ ಶೂನ್ಯ ಕಾಣಿಸಿಕೊಂಡಿದೆ.
ಶೈಕ್ಷಣಿಕ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವ ಜಿಲ್ಲೆಯಲ್ಲಿ ಈ ಶೂನ್ಯ ದಾಖಲಾತಿ ಕೊಂಚ ನಿರಾಸದಾಯಕವಾದ ವಿಚಾರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಸರಕಾರಿ, ಆರು ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಒಳಗೊಂಡಿದೆ.
ಇದರಲ್ಲಿಎರಡು ಸುಳ್ಯ ತಾಲೂಕಿನ ಕಿರಿಯ ಪ್ರಾಥಮಿಕ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ಎರಡು ಪ್ರೌಢಶಾಲೆ, ನಾಲ್ಕು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಮೂರು ಪ್ರೌಢಶಾಲೆ, ಎರಡು ಹಿರಿಯ ಪ್ರಾಥಮಿಕ ಹಾಗೂ ಒಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಒಳಗೊಂಡಿದೆ.
ಇವುಗಳಲ್ಲಿ ಒಟ್ಟು ಏಳು ಮಂಗಳೂರು ಉತ್ತರ ವಲಯದಲ್ಲಿದೆ. ಉಳಿದಂತೆ ಮಂಗಳೂರು ದಕ್ಷಿಣ ವಲಯದಲ್ಲಿ ಮೂರು, ಬಂಟ್ವಾಳ ವಲಯದಲ್ಲಿ ಎರಡು ಹಾಗೂ ಮೂಡುಬಿದಿರೆ ಹಾಗೂ ಬೆಳ್ತಂಗಡಿ ತಾಲೂಕಿನಲ್ಲಿ ತಲಾ ಒಂದು ಇವೆ. ಉಡುಪಿ ಜಿಲ್ಲೆಯಲ್ಲಿ 6 ಸರಕಾರಿ, ಒಂದು ಖಾಸಗಿ ಹಾಗೂ ಒಂಬತ್ತು ಅನುದಾನಿತ ಶಾಲೆಗಳಲ್ಲಿ ಈ ಬಾರಿ ಶೂನ್ಯ ದಾಖಲಾತಿ ದಾಖಲಾಗಿದೆ.
ಸರಕಾರಿ ಶಾಲೆಯಲ್ಲಿ ದಾಖಲಾತಿ ಕುಸಿತವಾಗಲು ವಿದ್ಯಾರ್ಥಿಗಳ ಕೊರತೆ ಕಾರಣವಾದರೆ ಅನುದಾನಿತ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಕಾರಣವಾದರೆ ಅನುದಾನ ರಹಿತದಲ್ಲಿ ವಿದ್ಯಾರ್ಥಿಗಳ ಕೊರತೆಯಾದರೆ ಬಹಳ ಮುಖ್ಯವಾಗಿ ಶಿಕ್ಷಕರಿಗೆ ವೇತನ ನೀಡಲು ಶಾಲೆ ನಡೆಸುವ ಸಮಿತಿಗೆ ಕಷ್ಟಕರವಾಗಿರುವುದು ಕಾರಣವಾಗಿದೆ.
ಮುಖ್ಯವಾಗಿ 2022-23ನೇ ಸಾಲಿನಲ್ಲಿ ಸರಕಾರಿ ಶಾಲೆಗಳಿಗಿಂತ ಹೆಚ್ಚಾಗಿ ಅನುದಾನಿತ ಶಾಲೆಗಳೇ ಬಾಗಿಲು ಮುಚ್ಚಿಕೊಳ್ಳುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 40 ಶಾಲೆಗಳು ಶೂನ್ಯ ದಾಖಲಾತಿಯನ್ನು ದಾಖಲಿಸಿಕೊಂಡಿದೆ. ಅವುಗಳಲ್ಲಿಆರು ಸರಕಾರಿ, 17 ಅನುದಾನಿತ ಹಾಗೂ 20 ಅನುದಾನರಹಿತ ಶಾಲೆಗಳು ಪಟ್ಟಿಯಲ್ಲಿ ಸೇರಿಕೊಂಡಿದೆ.
2022ರಲ್ಲಿ ದಕ, ಉಡುಪಿಯಲ್ಲಿ 98 ಶಾಲೆಗಳು ಮುಚ್ಚಿದೆ. ಉಡುಪಿಯಲ್ಲಿ 79 ಪ್ರಾಥಮಿಕ ಹಾಗೂ ಒಂದು ಪ್ರೌಢಶಾಲೆ ಮತ್ತು ದಕ ಜಿಲ್ಲೆಯಲ್ಲಿ 11 ಪ್ರಾಥಮಿಕ ಹಾಗೂ 8 ಪ್ರೌಢಶಾಲೆಗಳು ಸೇರಿದೆ. ಇದಕ್ಕೆ ಬಹಳ ಮುಖ್ಯವಾಗಿ ಕೋವಿಡ್ ಕಾರಣವಾಗಿದೆ. ಅನಂತರದ ವರ್ಷಗಳಲ್ಲಿ ಮುಚ್ಚಿರುವ ಶಾಲೆಗಳ ಪ್ರಮಾಣ ಕಡಿಮೆಯಿದೆ.