Mon. Apr 7th, 2025

Bus Accident: ರಾಯಚೂರಲ್ಲಿ ಶಾಲಾ ಬಸ್-‌ ಸರ್ಕಾರಿ ಬಸ್‌ ನಡುವೆ ಭೀಕರ ಅಪಘಾತ – ಇಬ್ಬರು ಮಕ್ಕಳು ಸಾವು

ರಾಯಚೂರು:(ಸೆ.5) ಮಾನವಿ ತಾಲೂಕಿನ ಕಪಗಲ್ ಬಳಿ ಶಾಲಾ ವಾಹನ ಹಾಗೂ ಸಾರಿಗೆ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.

ಇದನ್ನೂ ಓದಿ: 🛑ಬೆಳ್ತಂಗಡಿ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ


ಸಮರ್ಥ (7) ಹಾಗೂ ಶ್ರೀಕಾಂತ (12) ಮೃತ ಬಾಲಕರು. ಇಂದು ಮುಂಜಾನೆ ಕಪ್‌ಗಲ್‌ನಿಂದ ಮಾನವಿ ಪಟ್ಟಣದತ್ತ ಹೊರಟಿದ್ದ ಶಾಲಾ ವಾಹನ. ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಭೀಕರ ಅಪಘಾತ ಸಂಭವಿಸಿದೆ.

ಶಾಲಾ ವಾಹನ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮಾನವಿ ಘಟಕದ ಬಸ್ ಡಿಕ್ಕಿಯಾಗಿ ಮೂವರು ಮಕ್ಕಳ ಕಾಲುಗಳು ತುಂಡಾಗಿದ್ದು, 25ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಒಟ್ಟು 40 ಮಕ್ಕಳು ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.

ಆ ಪೈಕಿ 18 ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 14 ಮಕ್ಕಳಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 14 ಮಕ್ಕಳ ಪೈಕಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದೆ.


ಆಸ್ಪತ್ರೆ ಮುಂದೆ ಪೋಷಕರು ಕಣ್ಣೀರು!

ರಿಮ್ಸ್ ಆಸ್ಪತ್ರೆಗೆ ದೌಡಾಯಿಸಿದ ಪೋಷಕರು. ಮಕ್ಕಳು ಸ್ಥಿತಿ ನೋಡಿ ಕಣ್ಣೀರಾಕಿ ‘ದೇವ್ರೇ ನಮಗೆ ಯಾಕಿಂತ ಶಿಕ್ಷೆ ಎಂದು ಗೋಳಾಡುತ್ತಿದ್ದಾರೆ. ಕೂಲಿನಾಲಿ ಮಾಡಿ ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದ ಪೋಷಕರು. ಇದೀಗ ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ಮಕ್ಕಳ ಸ್ಥಿತಿ ಕಂಡು ಅವರ ಆಕ್ರಂದನ ಮುಗಿಲುಮುಟ್ಟುವಂತಿದೆ.

ಸದ್ಯ ಎಲ್ಲ ಮಕ್ಕಳಿಗೂ ಚಿಕಿತ್ಸೆ ಮುಂದುವರಿದಿದೆ.
ಇಂದು ಶಿಕ್ಷಕರ ದಿನಾಚಣೆ ಹಿನ್ನೆಲೆ ಖುಷಿಯಿಂದ ಹೊರಟಿದ್ದ ವಿದ್ಯಾರ್ಥಿಗಳು, ಚಾಲಕನ ಮುಂಭಾಗದಲ್ಲಿದ್ದ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅತಿಯಾದ ವೇಗ, ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆ ಸಂಬಂಧ ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *