Tue. Apr 8th, 2025

Mangaluru: ಬೇರೊಬ್ಬನ ಜೊತೆ ಮದುವೆಗೆ ಮುಂದಾಗಿದ್ದ ಪ್ರೇಯಸಿ ಕೊಲೆ ಪ್ರಕರಣ – ಪ್ರಿಯತಮನಿಗೆ ಜೀವಾವಧಿ ಶಿಕ್ಷೆ !

ಮಂಗಳೂರು :(ಸೆ.5) ಬೇರೊಬ್ಬನನ್ನು ಮದುವೆಯಾಗಲು ಮುಂದಾಗಿದ್ದ ಪ್ರೇಯಸಿಯ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿ ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.

ಇದನ್ನೂ ಓದಿ: 🛑Delhi: ನಡು ಬೀದಿಯಲ್ಲಿ ಬಟ್ಟೆ ಹರಿದುಕೊಂಡು ಹೊಡೆದಾಡಿದ ಮಹಿಳೆಯರು


ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟ್ಟಿ ತಾಂಡಾದ ಸಂದೀಪ್ ರಾಥೋಡ್ (23) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಶಿಕ್ಷೆಯ ಜೊತೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.

ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. ಒಟ್ಟು 100 ದಾಖಲೆಗಳನ್ನು ಗುರುತಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಎಮ್ ಜೋಶಿಯವರು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25,000/- ರೂಪಾಯಿ ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಸಜೆ ಮತ್ತು ಭಾ.ದಂ.ಸಂ ಕಲಂ 380 ಅಪರಾದದಲ್ಲಿ 3 ತಿಂಗಳ ಸಜೆ ಮತ್ತು 1,000/- ರೂಪಾಯಿ ದಂಡ ದಂಡ ತೆರಲು ತಪ್ಪಿದ್ದಲ್ಲಿ 15 ದಿನಗಳ ಸಾದಾ ಸಜೆ, ಭಾ.ದಂ.ಸಂ ಕಲಂ 403 ಅಪರಾಧಕ್ಕೆ 3 ತಿಂಗಳ ಸಜೆ ಮತ್ತು 500/- ರೂಪಾಯಿ ದಂಡ. ದಂಡ ಕಟ್ಟಲು ತಪ್ಪಿದಲ್ಲಿ 15 ದಿನಗಳ ಸಾದಾ ಸಜೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತರ ಪರಿಹಾರ ಯೋಜನೆ ಅಡಿಯಲ್ಲಿ ಮೃತಳ ಮನೆಯವರಿಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.

ಏನಿದು ಪ್ರಕರಣ?
ಸಂದೀಪ್ ರಾಥೋಡ್ ಮತ್ತು ಅಂಜನಾ ವಸಿಷ್ಠ ಅವರು 2018ನೇ ಇಸವಿಯ ಜುಲೈ ತಿಂಗಳಿನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಉದ್ಯೋಗ ಪಡೆದ ಬಳಿಕ ಮದುವೆಯಾದರೆ ಜೀವನ ಸಾಗಿಸಲು ಹಣಕಾಸಿನ ತೊಂದರೆ ಇರುವುದಿಲ್ಲ ಮತ್ತು ಮನೆಯವರನ್ನು ಕೂಡ ಒಪ್ಪಿಸಿ ಮದುವೆಯಾಗಬಹುದು ಎಂದು ಅವರಿಬ್ಬರು ಮಾತನಾಡಿಕೊಂಡಿದ್ದರು.

ಅದರಂತೆ ಸಂದೀಪ್ ರಾಥೋಡ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆಯ ಪೂರ್ವ ತಯಾರಿಗಾಗಿ ಮಂಗಳೂರಿನ ಹಂಪನಕಟ್ಟೆಯ ಕೋಚಿಂಗ್ ಸೆಂಟರ್‌ಗೆ ಬಂದಿದ್ದನು. ತರಬೇತಿಗೆ ಹಾಜರಾಗಲು ಮಂಗಳೂರಿನಲ್ಲಿ ಉಳಿದುಕೊಳ್ಳುವ ಸಲುವಾಗಿ ತಾವಿಬ್ಬರು ಗಂಡ ಹೆಂಡತಿ ಎಂದು ಹಾಗೂ ಆರೋಪಿ ತಾನು ಕಾನ್ಸ್‌ಟೇಬಲ್ ಆಗಿದ್ದು, ಪಿಎಸ್‌ಐ ಹುದ್ದೆಯ ತರಬೇತಿಗಾಗಿ ಮಂಗಳೂರಿಗೆ ಬಂದಿರುವುದಾಗಿ ಹೇಳಿ ರೂಂ ಪಡೆದುಕೊಂಡಿದ್ದ.

ಅಂಜನಾ ವಸಿಷ್ಠಳು ಊರಿಗೆ ಹೋಗಿದ್ದ ಅವಧಿಯಲ್ಲಿ ಆಕೆಗೆ ವಿವಾಹ ಮಾಡಲು ಆಕೆಯ ತಂದೆ ತಾಯಿ ನಿರ್ಧರಿಸಿ ಹುಡುಗನನ್ನು ತೋರಿಸಿ, ಮಾತುಕತೆ ನಡೆಸಿದ್ದರು. ಅಂಜನಾ ವಸಿಷ್ಠ ತಂದೆ ತಾಯಿಯ ಆಸೆಯಂತ ಮದುವೆಗೆ ಒಪ್ಪಿಕೊಂಡು, ಆ ವಿಚಾರವನ್ನು ಸಂದೀಪ್ ರಾಥೋಡ್‌ಗೆ ತಿಳಿಸಿ, ತನ್ನನ್ನು ಮರೆತುಬಿಡುವಂತೆ ಆಕೆ ವಿನಂತಿಸಿದ್ದಳು. ಇದರಿಂದ ಕೋಪಗೊಂಡ ಸಂದೀಪ್ ಆಕೆಯನ್ನು ಆತ ಉಳಿದುಕೊಂಡಿದ್ದ ಮಂಗಳೂರಿಗೆ ಕರೆಸಿಕೊಂಡಿದ್ದ.

ಅಂಜನಾ ಬೇರೆಯವರನ್ನು ಮದುವೆಯಾಗಲು ಹೋಗುತ್ತಿದ್ದಾಳೆ ಎಂದು ಕೋಪದಿಂದ ಆಕೆಯ ಜೊತೆ ಜಗಳ ತೆಗೆದು ಕೊಲೆ ಮಾಡಿ ಮೃತಳ ಮೃತದೇಹದ ಫೋಟೋವನ್ನು ನೆನಪಿಗಾಗಿ ವೀಡಿಯೋ ರೆಕಾರ್ಡ್ ಮಾಡಿಕೊಂಡು, ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್‌ನ್ನು ತೆಗೆದುಕೊಂಡು ಪರಾರಿಯಾಗಿದ್ದ. ಆ ಬಳಿಕ ನಗರದ ಕೆಎಸ್ ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಬಳಸಿ 15,000/- ರೂಪಾಯಿ ಹಣವನ್ನು ಡ್ರಾ ಮಾಡಿದ್ದ.


ಸರ್ಕಾರದ ಪರವಾಗಿ ನಿವೃತ್ತ ಸರ್ಕಾರಿ ಅಭಿಯೋಜಕ ಬಿ. ಶೇಖರ್ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಒಲ್ಗ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *