ಬೆಳ್ತಂಗಡಿ:(ಸೆ.12) ಸಾರ್ವಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನೆಲೆ ಇದೀಗ ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಜಿರೆ ಹಳೆಪೇಟೆಯ ಅಜಿತ್ ಹೆಗ್ಡೆ ಎಂಬುವವರು ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 08-09-24ರಂದು ಉಜಿರೆ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಜಾತಿ ವೈಮನಸ್ಯ ಉಂಟುಮಾಡಲು,
ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಧ್ವನಿವರ್ಧಕ ಮುಖೇನ ಅವಹೇಳನ ಮಾಡಿ ಅವಾಚ್ಯ ಮತ್ತು ಕೀಳು ಶಬ್ದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಅಧಿಕೃತ ದೂರು ಸಲ್ಲಿಕೆಯಾಗಿದೆ.
ಭಾರತೀಯ ನ್ಯಾಯ ಸಂಹಿತೆ 2023 ಕಾಯ್ದೆಯ ಕಲಂ 196, ಕಲಂ 197 ಮತ್ತು ಕಲಂ 299ರ ಅಡಿಯಲ್ಲಿ ದೂರು ಸಲ್ಲಿಕೆ ಮಾಡಲಾಗಿದೆ. ಚೌತಿ ಹಬ್ಬದ ಸಮಯದಲ್ಲಿ ಜೈನ ಸಮುದಾಯಕ್ಕೆ ಬೆದರಿಕೆ ಹಾಕಿ ಟೀಕೆ ಮಾಡಿದ್ದಲ್ಲದೆ ಜಾತಿ ಮತ್ತು ಧಾರ್ಮಿಕ ಸಾಮರಸ್ಯ ಭಂಗ ಮಾಡುವ ಉದ್ದೇಶದಿಂದ ಅವಹೇಳನಕಾರಿ ಭಾಷಣ ಮಾಡಿದ್ದಾರೆ.
ಜೈನ ಮತ್ತು ಹಿಂದೂ ಧರ್ಮ/ಸಮುದಾಯಗಳ ನಡುವೆ ಹಿಂಸಾತ್ಮಕ ಘಟನೆಗಳನ್ನು ಉಂಟುಮಾಡಲು ಮತ್ತು ಜನರು ಧಂಗೆ ಏಳುವಂತೆ ಪ್ರಯತ್ನಿಸಿದ್ದಾರೆ. ಅಲ್ಲದೆ, ಜೈನ ಹಾಗೂ ಹಿಂದೂ ಬಾಂಧವರ ಮಧ್ಯೆ ಜಾತಿ –ಧರ್ಮದ ಆಧಾರದಲ್ಲಿ ವೈರತ್ವ ಬೆಳೆಸುವ ದೊಡ್ಡ ಮಟ್ಟದ ಹಾಗೂ ದೂರಗಾಮಿ ಹುನ್ನಾರ ಮಾಡಿರುತ್ತಾರೆ.
ಇದು ದೇಶದ ಏಕತೆಗೆ ಮಾರಕವಾದ ದುರುದ್ದೇಶದ ಕಾನೂನು ಬಾಹಿರ ಕೃತ್ಯವಾಗಿರುತ್ತದೆ ಅಂತ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಅಲ್ಲದೆ, ಮಹೇಶ್ ಶೆಟ್ಟಿ ತಿಮರೋಡಿ ವಿರುದ್ದ ತ್ವರಿತವಾಗಿ ತನಿಖೆ ನಡೆಸಿ ಸಾರ್ವಜನಿಕ ಶಾಂತಿ ಮತ್ತು ನ್ಯಾಯಕ್ಕಾಗಿ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.