ಆಂಧ್ರ ಪ್ರದೇಶ:(ಸೆ.19) ಆಸ್ಪತ್ರೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ರೋಗಿಯೊಬ್ಬರು ಆಸ್ಪತ್ರೆಯಲ್ಲಿ ಬೆಡ್‌ನಲ್ಲಿ ಮಲಗಿಕೊಂಡು ಸಿನಿಮಾ ನೋಡುತ್ತಿರುವ ವೇಳೆಯೇ ವೈದ್ಯರು ಯಶಸ್ವಿಯಾಗಿ ಮೆದುಳಿನ ಶಸ್ತ್ರ ಚಿಕಿತ್ಸೆ ನಡೆಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: 🟠ಮಂಗಳೂರು ಮಹಾ ನಗರ ಪಾಲಿಕೆಯ ನೂತನ ಮೇಯರ್ ಆಗಿ ಮನೋಜ್ ಕುಮಾರ್ ಹಾಗೂ
ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಸರ್ಕಾರಿ ಜನರಲ್ ಆಸ್ಪತ್ರೆಯ ವೈದ್ಯರ ತಂಡವು ರೋಗಿಯೊಬ್ಬರ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿದೆ.
ಕೈಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ನಿರಂತರ ತಲೆನೋವಿನಂತಹ ಸಮಸ್ಯೆಯಿಂದ ಕೊತಪಲ್ಲಿಯ ಎ ಅನಂತಲಕ್ಷ್ಮಿ ಬಳಲುತ್ತಿದ್ದರು. ಈ ಹಿನ್ನೆಲೆ ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಅವರ ಮೆದುಳಿನ ಎಡ ಭಾಗದಲ್ಲಿ 3.3 x 2.7 ಸೆಂ.ಮೀ ಗಡ್ಡೆಯಿರುವುದು ಪತ್ತೆಯಾಗಿತ್ತು.
ಇನ್ನೂ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸಾ ವೆಚ್ಚದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡು ಶಸ್ತ್ರ ಚಿಕಿತ್ಸೆ ಮಾಡಿಸಲು ಮುಂದಾಗುತ್ತಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಅವೇಕ್ ಬ್ರೈನ್ ಸರ್ಜರಿ ಮಾಡಲಾಯಿತು. ಈ ಅವೇಕ್ ಬ್ರೈನ್ ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ರೋಗಿಯು ಎಚ್ಚರವಾಗಿರಬೇಕಾಗುತ್ತದೆ. ಮೆದುಳಿನ ನರಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಎಚ್ಚರಿಕೆಯಿಂದ ಈ ಸರ್ಜರಿಯನ್ನು ನಡೆಸಬೇಕಾಗುತ್ತದೆ. ಆಗಾಗ ರೋಗಿಯ ಬಳಿ ಶಸ್ತ್ರಚಿಕಿತ್ಸಾ ತಂಡ ಸಂವಹನ ನಡೆಸಬೇಕಾಗುತ್ತದೆ.
ಹೀಗಾಗಿ ರೋಗಿ ಎಚ್ಚರದಿಂದ ಇರಬೇಕಾದ ಹಿನ್ನೆಲೆಯಲ್ಲಿ, ಅನಂತಲಕ್ಷ್ಮಿ ಸರ್ಜರಿ ನಡೆಸುವಾಗ ಎಚ್ಚರದಿಂದ ಇದ್ದು ತನ್ನ ನೆಚ್ಚಿನ ಹೀರೋ ಜೂ. ಎನ್ ಟಿಆರ್ ಅವರ ಸಿನಿಮಾವನ್ನು ನೋಡಿದ್ದಾರೆ.
ಮೂರು ಗಂಟೆಗಳ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸ್ವಲ್ಪ ಸಮಯದ ನಂತರ ರೋಗಿಯು ಎದ್ದು ಉಪಹಾರ ಸೇವಿಸಿದರು ಎಂದು ವರದಿ ತಿಳಿಸಿದೆ.