Wed. Nov 20th, 2024

Davangere: ನಾಗಮಂಗಲ ಬಳಿಕ ದಾವಣಗೆರೆಯಲ್ಲೂ ಕಲ್ಲುತೂರಾಟ – ಕಲ್ಲು ತೂರಾಟ ನಡೆಸಲು ಕಾರಣ ಏನು ಗೊತ್ತಾ?

ದಾವಣಗೆರೆ :(ಸೆ.20) ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣದಿಂದಾಗಿ ದಾವಣಗೆರೆ ನಗರ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಇದನ್ನೂ ಓದಿ: ⚖Daily Horoscope – ನೇರ ನುಡಿಯಿಂದ ಈ ರಾಶಿಯವರಿಗೆ ಶತ್ರುಗಳು ಹುಟ್ಟಿಕೊಂಡಾರು!!


ದಾವಣಗೆರೆ ನಗರಾದಾದ್ಯಂತ ಭಯದ ವಾತಾವರಣ ಮನೆ ಮಾಡಿದ್ದು, ಕಲ್ಲು ತೂರಾಟ ನಡೆದ ಇಮಾಂನಗರದಲ್ಲಿ ರಸ್ತೆಯದ್ದಕ್ಕೂ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಹಾವೇರಿ, ಶಿವಮೊಗ್ಗ ಜಿಲ್ಲೆಗಳ ರಿಸರ್ವ್ ಪೊಲೀಸ್ ತುಕಡಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು, ರಾತ್ರಿಯಿಡೀ ನಿದ್ರೆಗಟ್ಟು ಗಸ್ತು ನಡೆಸಿವೆ. ಮತ್ತೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ದಾವಣಗೆರೆ ಎಸ್ಪಿ ಉಮಾ ಅವರು, ಪರಿಸ್ಥಿತಿ ಹತೋಟಿಗೆ ತರಲು ಮುಂದಾಗಿದ್ದಾರೆ.


ಘಟನೆಯಿಂದಾಗಿ ಬೆಳ್ಳಂಬೆಳಗ್ಗೆ ಜನಜಂಗುಲಿಯಿಂದ ತುಂಬಿರ್ತಿದ್ದ ಇಮಾಂ ನಗರದ ಜನನಿಬಿಡ ರಸ್ತೆಗಳು ಖಾಲಿಖಾಲಿಯಾಗಿದ್ದು, ಬಿಕೊ ಎನ್ನುತ್ತಿವೆ. ಇಲ್ಲಿರುವ ಮಸೀದಿ ಬಳಿ 10ಕ್ಕೂ ಹೆಚ್ಚು ಪೊಲೀಸ್ ವಾಹನಗಳನ್ನು ನಿಲ್ಲಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. ಹಾಗೆಯೇ ಬೆಳಗಿನ ಜಾವ 5 ಗಂಟೆಗೆ ವ್ಯಾಪಾರ ವಹಿವಾಟಿಗೆ ತೆರಳುತಿದ್ದ ಜನರು ತಡವಾಗಿ ಹೊರಬರ್ತಿದ್ದು, ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಗಣೇಶ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆಸಿದ್ದು, ಏಕಾಏಕಿ ಮೆರವಣೆಗೆಯಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ನಗರದ ಅರಳಿಮರ ಸರ್ಕಲ್ ಬಳಿ ಮೊದಲು ಕಲ್ಲು ತೂರಾಟ ಶುರುವಾಗಿದ್ದು, ಬಳಿಕ ಕೆ.ಆರ್ ರಸ್ತೆ, ಹಂಸಬಾವಿ ಸರ್ಕಲ್, ಕೆಆರ್ ಮಾರ್ಕೇಟ್ ಸೇರಿದಂತೆ ಬಂಬೂ ಬಜಾರ್ ರಸ್ತೆ, ಮಟ್ಟಿಕಲ್ಲು ಏರಿಯಾದಲ್ಲಿಯೂ ಕಲ್ಲುತೂರಾಟ ನಡೆದಿದೆ.

ಇದನ್ನೂ ಓದಿ: ⭕Belthangady: ಪತಿ – ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ತಕ್ಷಣವೇ ಘಟನಾಸ್ಥಳಕ್ಕೆ ಆಗಮಿಸಿದ ಪೊಲೀಸರು ಎಷ್ಟೇ ನಿಯಂತ್ರಿಸಿದರೂ ಕಿಡಿಗೇಡಿಗಳು ಕಲ್ಲು ತೂರಾಟ ಮುಂದುವರಿಸಿದ್ದು, ಪೊಲೀಸರ ಎದುರೇ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಕೂಡ ಕಲ್ಲಿನಿಂದ ರಕ್ಷಿಸಿಕೊಳ್ಳಲು ಬೋರ್ಡ್ ಹಿಡಿದುಕೊಂಡು ತಿರುಗಾಡುವಂತಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸುತ್ತಲೇ ಕಿಡಿಗೇಡಿಗಳು ಅಲ್ಲಿಂದ ಪಾರಾಗಿ, ಏರಿಯಾಗಳಿಗೆ ನುಗ್ಗಿ, ಮಟ್ಟಿಕಲ್ಲು, ಅನೆಕೊಂಡಗಳಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪುಂಡರ ಕಲ್ಲು ತೂರಾಟಕ್ಕೆ ಮಟ್ಟಿಕಲ್ಲು ನಿವಾಸಿಗಳು ದೊಣ್ಣೆ ಹಿಡಿದು ಓಡಿಸಿಕೊಂಡು ಹೋಗಿದ್ದಾರೆ.


60 ರಿಂದ 70 ಯುವಕರ ಗುಂಪು ಮಟ್ಟಿಕಲ್ಲು, ಅನೆಕೊಂಡದ ಹಲವು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಿದ್ದು, ಜೊತೆಗೆ ಮನೆ ಮುಂಭಾಗದಲ್ಲಿ ಇರುವ ವಾಹನಗಳಿಗೆ ಹಾನಿ ಮಾಡಿದ್ದಾರೆ. ಅಲ್ಲದೆ ಏಕಾಏಕಿ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ಹಿನ್ನಲೆ ಭಯದ ವಾತಾವರಣ ಸೃಷ್ಟಿಯಾಗಿದೆ. ಮನೆಗಳಿಗೂ ಕೂಡ ಬೀಗ ಹಾಕಿಕೊಂಡು ಹೋಗಿದ್ದಾರೆ. ಇದರಿಂದಾಗಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದು, ಇದುವರೆಗೂ ಎರಡು ಕಡೆಯಿಂದ 20ಕ್ಕೂ ಹೆಚ್ಚು ಜನರನ್ನು ಸೆರೆಹಿಡಿದಿದ್ದಾರೆ. ಇಡೀ ರಾತ್ರಿ ಹಳೇ ದಾವಣಗೆರೆಯನ್ನು ಪೊಲೀಸರು ಗಸ್ತು ಹೊಡೆದಿದ್ದಾರೆ.

ಬೆಳ್ಳಂಬೆಳಿಗ್ಗೆ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು ಖಾಲಿಯಾಗಿದ್ದು, ಬಿಕೊ ಎನ್ನುತ್ತಿವೆ. ಹಾಲು ಖರೀದಿಸಲು ಕೂಡ ಅರಳಿಮರ ಸರ್ಕಲ್ ಜನ ಮನೆಯಿಂದ ಹೊರಬರುತ್ತಿಲ್ಲ. ಒಟ್ಟಿನಲ್ಲಿ ದಾವಣಗೆರೆಯ ಇಮಾಂನಗರ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಭಯದ ವಾತಾವರಣ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *