ಮಂಗಳೂರು (ಸೆ. 22) : ಮಂಗಳೂರಿನ ಪ್ರತಿಷ್ಟಿತ ಎ.ಜೆ ಆಸ್ಪತ್ರೆಯಲ್ಲಿ ಕಿರಿಯ ವೈದ್ಯನೊಬ್ಬ ಕುಡಿದು ಬಂದು ಡ್ಯೂಟಿ ಮಾಡಿರುವ ಬಗ್ಗೆ ವಿಡಿಯೋ ವೈರಲ್ ಆಗಿದೆ. ಎಜೆ ಆಸ್ಪತ್ರೆಯ ತುರ್ತು ನಿಗಾ ಕೊಠಡಿಯೊಳಗೆ ರಾತ್ರಿ ಪಾಳಯದಲ್ಲಿ ಎಜೆ ಆಸ್ಪತ್ರೆಯ ವೈದ್ಯ ಎನ್ನಲಾದ ಯುವಕ ಕಂಠಪೂರ್ತಿ ಕುಡಿದು ಕಾರ್ಯನಿರ್ವಹಿಸಿದ್ದ. ಈ ಬಗ್ಗೆ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.
ವಿಡಿಯೋದಲ್ಲಿ ಏನಿದೆ..?
ವ್ಯಕ್ತಿಯೊಬ್ಬರು ವಿಡಿಯೋ ಮಾಡುತ್ತ ಇದು ಎ.ಜೆ ಆಸ್ಪತ್ರೆಯ ಅವ್ಯವಸ್ಥೆ. ಎಜೆ ಆಸ್ಪತ್ರೆಯ ತುರ್ತು ನಿಗಾ ಘಟಕದ ಕೊಠಡಿಯಲ್ಲಿ ವೈದ್ಯನೊಬ್ಬ ಕುಡಿದು ತೂರಾಡುತ್ತಿದ್ದಾನೆ ಎಂದಿದ್ದಾರೆ. ಅಲ್ಲಿದ್ದ ಸೆಕ್ಯೂರಿಟಿ ಜೊತೆಗೂ ಮಾತುಕತೆ ಮಾಡುವ ವಿಡಿಯೋ ಮಾಡುವ ವ್ಯಕ್ತಿ, ಈತ ನಿಮ್ಮ ವೈದ್ಯನಾ ಎಂದು ಪ್ರಶ್ನಿಸುತ್ತಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುವ ಸೆಕ್ಯೂರಿಟಿ, ನಮಗೆ ಗೊತ್ತಿಲ್ಲ ಇಲ್ಲಿ ತುಂಬಾ ಜನ ವೈದ್ಯರು ಇದ್ದಾರೆ ಎಂದು ಹೇಳುತ್ತಾರೆ. ನಂತರ ಕುಡಿದಿದ್ದ ಆ ಯುವಕನನ್ನೇ ಪ್ರಶ್ನಿಸುವಾಗ. ನನ್ನ ಹೆಸರು ಶ್ರೀಕಾಂತ್, ಎಜೆ ಆಸ್ಪತ್ರೆಯ ವೈದ್ಯ ಎನ್ನುತ್ತಾನೆ. ಈ ವೇಳೆ ಸೆಕ್ಯೂರಿಟಿ ಯುವಕನನ್ನು ಕಾರಿನಲ್ಲಿ ಕಳುಹಿಸುತ್ತಾರೆ. ಈ ವೇಳೆ ವಿಡಿಯೋ ಮಾಡುವ ವ್ಯಕ್ತಿ ಆಸ್ಪತ್ರೆಯ ಮುಂದಿನ ಭಾಗ, ಎಜೆ ಆಸ್ಪತ್ರೆಯ ಬೋರ್ಡ್ ತೋರಿಸಿ, ಇದು ಎಜೆ ಆಸ್ಪತೆಯ ಅವ್ಯವಸ್ಥೆ ಎಂದು ಆರೋಪಿಸುತ್ತಾರೆ.
ಕುಡಿದಿದ್ದ ಯುವಕ..?
ಎಜೆ ಆಸ್ಪತ್ರೆಯ ವೈದ್ಯ ಎಂದು ಹೇಳಲಾಗುತ್ತಿರುವ ಯುವಕ ಕುಡಿದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಜೊತೆಗೆ ಆತನ ಶರ್ಟ್ ನ ಹಿಂದಿನ ಭಾಗ ಸಂಪೂರ್ಣ ಮಣ್ಣು ಮೆತ್ತಿದ ರೀತಿಯಲ್ಲಿ ಇದೆ. ಎಲ್ಲೋ ಬಿದ್ದಿರುವಂತಿದೆ. ಇದು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.