Wed. Nov 20th, 2024

Belthangady: ಅಪ್ರಾಪ್ತೆಯನ್ನು ಅತ್ಯಾಚಾರ ಗೈದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್

ಬೆಳ್ತಂಗಡಿ:(ಸೆ.23) 2022ರ ಅ.9ರಂದು ಬೆಳ್ತಂಗಡಿಯಲ್ಲಿ ನಡೆದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೋ ನ್ಯಾಯಾಲಯವು ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ.

ಇದನ್ನೂ ಓದಿ: 🟠ಉಜಿರೆ: ದ.ಕ. ಜಿಲ್ಲಾ ಪ.ಪೂ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರಿಗೆ ನಡೆದ ಒಂದು ದಿನದ ಕಾರ್ಯಾಗಾರ

ಆರೋಪಿ ಸದಾಶಿವ ಎಂಬಾತ 2022ರ ಅ.9ರಂದು ಬೆಳಗ್ಗೆ 10ಕ್ಕೆ ಬೆಳ್ತಂಗಡಿ ಸಮೀಪದಲ್ಲಿರುವ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆಗೆ ತೆರಳಿ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿತ್ತು.

2022 ಅ.10ರಂದು ಮತ್ತೆ ಫೇಸ್‌ಬುಕ್ ಸಂದೇಶ ಹಾಕಿದ್ದ ಆರೋಪಿ ಬಾಲಕಿ ಬಳಿ ‘ನನ್ನನ್ನು ಕ್ಷಮಿಸು, ಇನ್ನು ನಿನಗೆ ತೊಂದರೆ ಕೊಡಲ್ಲ, ನನ್ನಿಷ್ಟಕ್ಕೆ ನಾನಿರುವೆ’ ಎಂದು ಹೇಳಿದ್ದ. ಇದರಿಂದ ನೊಂದ ಬಾಲಕಿ ಡೀಸೆಲ್ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ 14 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿತ್ತು. 33 ದಾಖಲೆಗಳನ್ನು ಗುರುತಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಮಾನು ಕೆ.ಎಸ್. ಅವರು ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಕಲಂ-354 ಮತ್ತು ಕಲಂ 8 ಪೋಕ್ಸೋ ಕಾಯ್ದೆಯಂತೆ 3 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 67ರಂತೆ 1 ವರ್ಷ ಸಾದಾ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಲಾಗಿದೆ.


ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್ ಬಿ. ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದಾರೆ.

ಅಲ್ಲದೇ ಬಾಲಕಿಗೆ 50 ಸಾವಿರ ರೂ.ವನ್ನು ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ದಂಡ ಪ್ರಕ್ರಿಯೆ ಸಂಹಿತೆ ಕಲಂ 357(ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆಯಡಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 1,50,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ಆದೇಶಿಸಲಾಗಿದೆ.

Leave a Reply

Your email address will not be published. Required fields are marked *