Wed. Nov 20th, 2024

Mangalore: ದಿ.ಮುತ್ತಪ್ಪ ರೈ ಎರಡನೇ ಪತ್ನಿ ಮತ್ತು ಪುತ್ರರ ನಡುವಿನ ಆಸ್ತಿ ವಿವಾದ ಅಂತ್ಯಕ್ಕೆ – ರಾಜಿ ಸಂಧಾನಕ್ಕೆ ಸಹಮತ – ಮಾಜಿ ಡಾನ್ ರೈ ಮಾಡಿಟ್ಟ ಆಸ್ತಿ ವಿವರ ಎಷ್ಟು ಗೊತ್ತೇ?

ಮಂಗಳೂರು :(ಸೆ.23) ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ (68 ವ) ಅವರ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯ 4 ವರ್ಷಗಳ ಹಿಂದೆ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಇದೀಗ ಅದು ರಾಜಿಯಲ್ಲಿ ಮುಕ್ತಾಯಗೊಂಡು ಸುಖಾಂತ್ಯ ಕಾಣುವತ್ತ ಹೊರಟಿದೆ. ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರು ಆಗಿದ್ದ ಮುತ್ತಪ್ಪ ರೈ ಸಾವಿರಾರು ಕೋಟಿಗಳ ಆಸ್ತಿಯ ಒಡೆಯರಾಗಿದ್ದರು.

ಇದನ್ನೂ ಓದಿ: 🔴ಉಜಿರೆ:(ಅ.15- 24) ಉಜಿರೆ ರುಡ್‌ ಸೆಟ್‌ ಸಂಸ್ಥೆಯಲ್ಲಿ ಹಪ್ಪಳ, ಉಪ್ಪಿನಕಾಯಿ, ಮಸಾಲ ಪೌಡರ್‌ ತಯಾರಿಕೆ ಉಚಿತ ತರಬೇತಿ

ಅವರ ನಿಧನ ನಂತರ ಅವರ ಎರಡನೇ ಪತ್ನಿ ಅನುರಾಧ ಹಾಗೂ ಅವರ ಮೊದಲ ಪತ್ನಿಯ ಇಬ್ಬರು ಪುತ್ರರಾದ ರಾಕಿ ರೈ ಹಾಗೂ ರಿಕ್ಕಿ ರೈ ಮಧ್ಯೆ ಆಸ್ತಿ ಹಂಚಿಕೆ ಕುರಿತಾಗಿ ವಿವಾದ ಉಂಟಾಗಿತ್ತು.

ಮುತ್ತಪ್ಪ ರೈಯವರು 2022ರ ಮೇ 15 ರಂದು ನಿಧನರಾಗಿದ್ದರು. ಮುತ್ತಪ್ಪ ರೈ ಅವರು ಸಾಯುವ ಮುನ್ನವೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದು ಇಟ್ಟಿದ್ದರು. ಇದರಲ್ಲಿ ಅವರ ಆಸ್ತಿ ಯಾರಿಗೇ ಸೇರಬೇಕು ಮತ್ತು ಎಷ್ಟು ಸೇರಬೇಕು ಎಂದು ತಿಳಿಸಿದ್ದರು. ಅನುರಾಧ ಅವರಿಗೆ ಈಗಾಗಲೇ ಆಸ್ತಿಯಲ್ಲಿ ಪಾಲು ನೀಡಲಾಗಿದೆ ಎಂದು ರೈ ವಿಲ್ನಲ್ಲಿ ತಿಳಿಸಿದ್ದರು.

ಎರಡನೇ ಪತ್ನಿ ಅನುರಾಧಾಗೆ ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್ನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಹಾಗೂ ಇನ್ನು ಯಾವುದೇ ಪಾಲು ಅವರಿಗೆ ನೀಡಬೇಕಾಗಿಲ್ಲ ಎಂದು ವಿಲ್ ನಲ್ಲಿ ನಮೊದಿಸಲಾಗಿತ್ತು ಎಂದು ಈ ಹಿಂದೆ ವರದಿಯಾಗಿತ್ತು.

ಇದಾದ ಬಳಿಕ ಅನುರಾಧ ಪತಿಯ ಆಸ್ತಿಯಲ್ಲಿ ಮೂರನೇ ಒಂದು ಪಾಲು ಕೋರಿ ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಬಿಡದಿಯ 2.16 ಎಕರೆ ಜಮೀನಿನಲ್ಲಿರುವ 23 ಸಾವಿರ ಚದರ ಅಡಿಯ ಮನೆ, ಬೆಂಗಳೂರಿನ ಸದಾಶಿವನಗರದಲ್ಲಿರುವ ಎರಡು ಫ್ಲ್ಯಾಟ್, ಆರ್.ಎಂ.ವಿ. ಎಕ್ಸ್ ಟೆನ್ಸನ್ ನಲ್ಲಿರುವ ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಫ್ಲ್ಯಾಟ್, ದೇವನಹಳ್ಳಿ, ಸಕಲೇಶಪುರ, ಹಾಸನ, ಮೈಸೂರು, ಶಿವಮೊಗ್ಗ, ಮಂಡ್ಯ, ಹೆಚ್.ಡಿ.ಕೋಟೆ ಮತ್ತು ಮಡಿಕೇರಿಯಲ್ಲಿರುವ ಅಂದಾಜು 300 ಎಕರೆ ಜಮೀನಿನ ಮೂರರಲ್ಲಿ ಒಂದು ಭಾಗವನ್ನು ತನಗೆ ನೀಡುವಂತೆ ಅನುರಾಧಾ ಕೇಸು ದಾಖಲಿಸಿದ್ದರು.

ಈ ನಡುವೆ ಮುತ್ತಪ್ಪ ರೈ ಪುತ್ರರಾದ ರಾಕಿ ರೈ ಹಾಗೂ ರಿಕ್ಕಿ ರೈ ಕೆಲ ಆಸ್ತಿ ಮಾರಾಟ ಮಾಡಿದ್ದರು. ಆಗ ಆಸ್ತಿ ಮಾರಾಟ ಮಾಡದಂತೆ ಅನುರಾಧ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದರು. ಆದಾದ ಬಳಿಕ ಆಸ್ತಿ ವಿವಾದವು ಕೋರ್ಟ್ ನಲ್ಲಿ ವಿಚಾರಣ ಹಂತದಲ್ಲಿತ್ತು.

ಬೆಂಗಳೂರಿನ ಗಂಟಿಗಾನ ಹಳ್ಳಿಯ ಆಸ್ತಿಯ ಕೇಸಿನಲ್ಲಿ ಇತ್ತೀಚೆಗೆ ಅನುರಾಧಾರವರಿಗೆ ಹಿನ್ನಡೆಯಾಗಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಇದಾದ ಕೆಲ ದಿನಗಳ ಬಳಿಕ ಎರಡು ಪಕ್ಷಗಳು ಆಸ್ತಿ ವಿವಾದವನ್ನು ರಾಜಿಯಲ್ಲಿ ಮುಗಿಸುವ ನಿರ್ಧಾರಕ್ಕೆ ಬಂದಿದ್ದು, ಈ ಕುರಿತು ಪರಸ್ಪರ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ಎರಡು ತಂಡಗಳ ವಕೀಲರು ನ್ಯಾಯಾಲಯಕ್ಕೆ ಒಮ್ಮತದ ರಾಜಿ ಅರ್ಜಿ ಸಲ್ಲಿಸಿದರೆ, ಆಗ ಅದನ್ನು ನ್ಯಾಯಾಲಯ ಮಾನ್ಯ ಮಾಡುತ್ತದೆ. ಆಗ ವಿವಾದ ತಾರ್ಕಿಕ ಅಂತ್ಯ ಕಾಣಲಿದೆ. ಸೆ.24ರಂದು ಉಭಯ ತಂಡಗಳು ಅಧಿಕೃತವಾಗಿ ರಾಜಿ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.

ಅನುರಾಧ ರವರಿಗೆ ದೇವನಹಳ್ಳಿಯಲ್ಲಿರುವ 5 ಎಕರೆ ಜಮೀನು, ಮಂಡ್ಯದ ಪಾಂಡವಪುರ ತಾಲೂಕಿನ ತೊನ್ನೂರುಕೆರೆ ಎಂಬಲ್ಲಿರುವ 26 ಎಕರೆ ಕೃಷಿ ಭೂಮಿ, ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಇರುವ ಬಂಗಲೆ ಸೇರಿದಂತೆ ಒಟ್ಟು 50 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಏಳುಕೋಟಿ ನಗದು ಅನುರಾಧಾ ಅವರ ಪಾಲಿಗೆ ಬರಲಿದೆ ಎನ್ನಲಾಗಿದೆ. ಉಳಿದ ಆಸ್ತಿಗಳು ಅವರ ಪುತ್ರರಿಬ್ಬರ ಪಾಲಾಗಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *