ಸುಳ್ಯ:(ಸೆ.23) ಬಸ್ಸಿನಲ್ಲಿ ಸಹ ಪ್ರಯಾಣಿಕಳಾಗಿದ್ದ, ವಿದ್ಯಾರ್ಥಿನಿ ಜೊತೆ ಅನುಚಿತವಾಗಿ ವರ್ತಿಸಿದ ಯುವಕನೋರ್ವನಿಗೆ ತಂಡವೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸುಳ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ: 🟣ಮೊಗ್ರು : ಜೈ ಶ್ರೀ ರಾಮ್ ಮಹಿಳಾ ಸಂಘ ರಚನೆ – ಪದಾಧಿಕಾರಿಗಳ ನೇಮಕ
ಅಬ್ದುಲ್ ನಿಯಾಝ್ ಎಂಬಾತ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ್ದ ಎನ್ನಲಾಗಿದೆ. ಆತನಿಗೆ ತಂಡ ಹಿಗ್ಗಾಮುಗ್ಗಾ ಥಳಿಸಿದ್ದು, ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ಆತ ಅಲ್ಲಿಂದ ತೆರಳಿರುವುದಾಗಿ ತಿಳಿದುಬಂದಿದೆ.
ಬೆಂಗಳೂರಿನಿಂದ ಸುಬ್ರಹ್ಮಣ್ಯ ಮೂಲಕ ಸುಳ್ಯಕ್ಕೆ ಬರುತ್ತಿದ್ದ ಸರಕಾರಿ ಬಸ್ಸಿಗೆ ಬಿಸಿಲೆ ಘಾಟ್ ಬಳಿ ಸುಳ್ಯದ ಕಾಲೇಜೊಂದರ ವಿದ್ಯಾರ್ಥಿನಿ ಏರಿದ್ದಾಳೆ. ಯುವಕನೋರ್ವ ಕುಳಿತಿದ್ದ ಸೀಟಿನ ಪಕ್ಕದ ಸೀಟು ಖಾಲಿ ಇದ್ದುದರಿಂದ ಆಕೆ ಅಲ್ಲಿ ಕುಳಿತಿದ್ದಾಳೆನ್ನಲಾಗಿದೆ.
ಈ ವೇಳೆ ಆಕೆಯ ಜೊತೆ ಯುವಕ ಅನುಚಿತವಾಗಿ ವರ್ತಿಸಿದ್ದಾನೆ. ಈ ವಿಚಾರವನ್ನು ಬಸ್ ನಿರ್ವಾಹಕನ ಗಮನಕ್ಕೆ ತಂದ ಯುವತಿ ಬಳಿಕ ತನ್ನ ಸಹಪಾಠಿಗಳಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.
ಈ ನಡುವೆ ಬಸ್ ಸುಬ್ರಹ್ಮಣ್ಯಕ್ಕೆ ತಲುಪಿದಾಗ ಆರೋಪಿ ಯುವಕ ಬಸ್ಸಿನಿಂದ ಇಳಿದಿದ್ದಾನೆ. ವಿದ್ಯಾರ್ಥಿನಿ ಅದೇ ಬಸ್ಸಿನಲ್ಲಿ ಸುಳ್ಯಕ್ಕೆ ಬಂದಿದ್ದಾಳೆ. ಅಲ್ಲಿ ವಿದ್ಯಾರ್ಥಿನಿಯ ಸಹಪಾಠಿಗಳು ಜಮಾಯಿಸಿದ್ದರು.
ಬಳಿಕ ತಂಡವೊಂದು ಆರೋಪಿ ಯುವಕನನ್ನು ಹುಡುಕಿ ಕಾರಿನಲ್ಲಿ ಹೊರಟಿದೆ. ಆರೋಪಿ ಕೇರಳದ ಮೂಲದವನಾಗಿರುವ ಬಗ್ಗೆ ಶಂಕೆ ಇದ್ದುದರಿಂದ ತಂಡವು ಪೈಚಾರ್ ನಲ್ಲಿ ಕಾದು ನಿಂತಿತ್ತು.
ಅಷ್ಟರಲ್ಲಿ ಸುಬ್ರಹ್ಮಣ್ಯದಿಂದ ಬಸ್ಸಿನಲ್ಲಿ ಬಂದು ಪೈಚಾರಿನಲ್ಲಿ ಇಳಿದ ಅಬ್ದುಲ್ ನಿಯಾಝ್ ಹಿಡಿದು ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನನ್ನು ಗುಂಪಿನಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈ ನಡುವೆ ಹಲ್ಲೆಗೊಳಗಾದ ನಿಯಾಝ್ ಆಸ್ಪತ್ರೆಯಿಂದು ಬಿಡುಗಡೆಗೊಂಡು ತೆರಳಿರುವುದಾಗಿ ತಿಳಿದುಬಂದಿದೆ.