Wed. Nov 20th, 2024

BPL ಕಾರ್ಡ್ ರದ್ದತಿ ಆತಂಕದಲ್ಲಿ ಫಲಾನುಭವಿಗಳು.!!

BPL ಕಾರ್ಡ್ :(ಸೆ.25) ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅನ್ವಯ ಕೇಂದ್ರ ಸರಕಾರವು ಆದ್ಯತಾ ಪಡಿತರ ಚೀಟಿ(ಬಿಪಿಎಲ್) ಹೊಂದಲು ನಿಗದಿಪಡಿಸಿರುವ ಮಾನದಂಡಗಳ ಪೈಕಿ ಕುಟುಂಬದ ವಾರ್ಷಿಕ ಆದಾಯವು 1.20ಲಕ್ಷ ರೂ.ಗಳ ಒಳಗೆ ಇರಬೇಕು ಎಂದು ಮಿತಿ ನಿಗದಿಪಡಿಸಿರುವುದು ರಾಜ್ಯದಲ್ಲಿರುವ ಬಿಪಿಎಲ್ ಕಾರ್ಡುದಾರರ ಮನದಲ್ಲಿ ಆತಂಕ ಮನೆ ಮಾಡುವಂತಾಗಿದೆ.

ಇದನ್ನೂ ಓದಿ; 🛑ಕುಂದಾಪುರ : ಈಜಲು ಹೋದ ಬಾಲಕರು ಕೆರೆಯಲ್ಲಿ ಮುಳುಗಿ ಸಾವು

ಬಿಪಿಎಲ್ ಕಾರ್ಡುಗಳು ಕೇವಲ ಅನ್ನಭಾಗ್ಯ ಯೋಜನೆಯಡಿ ಪಡಿತರ ಪಡೆಯಲು ಅಷ್ಟೇ ಉಪಯೋಗಕ್ಕೆ ಬರುವುದಿಲ್ಲ. ಆರೋಗ್ಯ ಸಂಬಂಧಿ ಸೇವೆಗಳಿಗೂ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಪಿಎಲ್ ಕಾರ್ಡುಗಳಿಗೆ ಬೇಡಿಕೆ ಇದೆ.

ಅಗತ್ಯ ವಸ್ತುಗಳ ಏರಿಕೆ ಗಗನಕ್ಕೇರಿದೆ. ಆದರೆ, ಅದಕ್ಕೆ ತಕ್ಕಂತೆ ಜನ ಸಾಮಾನ್ಯರ ಆದಾಯ ಮಾತ್ರ ಹೆಚ್ಚಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕುಟುಂಬದ ವಾರ್ಷಿಕ ಆದಾಯ ಮಿತಿ 1.20ಲಕ್ಷ ರೂ.ಮೀರಬಾರದು ಎಂಬ ಮಾನದಂಡ ವಿಧಿಸಿರುವುದು ಅವೈಜ್ಞಾನಿಕ ಕ್ರಮ ಎಂದು ಸಾರ್ವಜನಿಕರು ಆಸಮಾಧಾನ ಹೊರಹಾಕಿದ್ದಾರೆ.

ಕುಟುಂಬದ ಉಪಯೋಗಕ್ಕಾಗಿ ಹಳೆಯ ಕಾರು ಇರಿಸಿಕೊಂಡಿದ್ದರೆ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇರುವುದಿಲ್ಲ. ಆದರೆ, ಲಕ್ಷಾಂತರ ರೂ.ಬೆಲೆ ಬಾಳುವ ದ್ವಿಚಕ್ರ ವಾಹನ ಹೊಂದಿರುವವರಿಗೆ ಯಾವುದೇ ಸಮಸ್ಯೆ ಇಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಸುಮಾರು 6 ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ, ಚಿಕ್ಕಮಗಳೂರು ತಾಲೂಕು ಒಂದರಲ್ಲೇ ಸುಮಾರು 5,100 ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಸುಮಾರು 18 ಸಾವಿರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಗೆ ವಾರ್ಷಿಕ 8ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.10 ಕೋಟಿ. ರಾಜ್ಯದಲ್ಲಿ ವಿತರಣೆಯಾಗಿರುವುದು 1.27 ಕೋಟಿ ಬಿಪಿಎಲ್ ಕಾರ್ಡುಗಳು. ಇವು 4.42 ಕೋಟಿ ಜನರನ್ನು ಒಳಗೊಳ್ಳುತ್ತವೆ. ಈ ಅಂಕಿ ಅಂಶ ರಾಜ್ಯದಲ್ಲಿ ಶೇ.72ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂಬುದನ್ನು ಬಿಂಬಿಸುತ್ತದೆ. ಆದರೆ, ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಶೇ.13.16ರಷ್ಟು ಜನ ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆ.

ಅಧಾರ್ ಹಾಗೂ ಪಾನ್ ಕಾರ್ಡ್ ಅನ್ನು ನಿಗದಿತ ಅವಧಿ ಮೀರಿದ ಬಳಿಕ 1 ಸಾವಿರ ರೂ.ದಂಡ ಪಾವತಿಯೊಂದಿಗೆ ಜೋಡಣೆ ಮಾಡಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಂಡ ಪಾವತಿಯ ಕಾರಣದಿಂದಾಗಿ ಬಿಪಿಎಲ್ ಕಾರ್ಡುದಾರರು ಆದಾಯ ತೆರಿಗೆ ಪಾವತಿದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾರತದಲ್ಲಿನ ಬಡತನ ಪ್ರಮಾಣದ ಸರಾಸರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಡತನದ ಪ್ರಮಾಣ ಕಡಿಮೆ ಇರಬೇಕು.

ವಿಶ್ವಬ್ಯಾಂಕ್ ಸಿದ್ಧಪಡಿಸುವಂತಹ ಜಾಗತಿಕ ಬಡತನ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಶೇ.10ರಷ್ಟು ಬಡತನ ಇದೆ. ನೀತಿ ಆಯೋಗದ ಅಂಕಿ ಅಂಶಗಳ ಪ್ರಕಾರ ಈ ಪ್ರಮಾಣವು ಶೇ.11.28ರಷ್ಟು ಇದೆ. ಹೀಗಿರುವಾಗ ಕರ್ನಾಟಕದಲ್ಲಿ ಬಡತನದ ಪ್ರಮಾಣ ಇನ್ನೂ ಕಡಿಮೆ ಇರಬೇಕು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *