Wed. Nov 20th, 2024

Dharmasthala: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆ – “ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭಜನೆ ಪೂರಕ” – ಡಾ. ಡಿ. ವೀರೇಂದ್ರ ಹೆಗ್ಗಡೆಯವರು

ಧರ್ಮಸ್ಥಳ: (ಸೆ.28) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ವಿಶೇಷ ಸಭೆಯು ಸೆ.27 ರಂದು ಶ್ರೀಕ್ಷೇತ್ರದ ವಸಂತ ಮಹಲ್‌ನಲ್ಲಿ ನಡೆಯಿತು.

ಇದನ್ನೂ ಓದಿ: 🎬ಬೆಳ್ತಂಗಡಿ: ಇಂದು(ಸೆ.28) ಕೊಳಂಬೆ ಕನ್ನಡ ಕಿರುಚಿತ್ರದ ಟ್ರೈಲರ್ ಬಿಡುಗಡೆ

ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ಶ್ರೀ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, “ಸ್ವಸ್ಥ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಭಜನೆ ಪೂರಕ” ಎಂದು ಹೇಳಿದರು.

ಮಕ್ಕಳಿಗೆ ಭಜನಾ ಸಂಸ್ಕಾರ ಕಲಿಸಿಕೊಡಲಾಗುತ್ತದೆ. ಭಜನೆಯ ಜೊತೆಗೆ ಶ್ಲೋಕಗಳು, ವಚನಗಳನ್ನು ಮುಂದಿನ ತಲೆಮಾರಿಗೆ ಕಲಿಸಬೇಕಾಗಿದೆ. ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ.

ಮದುವೆಯ ಮುಂಚಿನ ದಿನ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಗೃಹಪ್ರವೇಶ, ನಾಮಕರಣ ಕಾರ್ಯಕ್ರಮದಲ್ಲಿ ಭಜನೆ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪರಿಷತ್ ಸಭೆಯಲ್ಲಿ ಭಾಗವಹಿಸಿದ ಅವರು ಮಾರ್ಗದರ್ಶನ, ಪ್ರೇರಣೆ ನೀಡಿದರು.

ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆಯವರು ಮಾತನಾಡಿ, ಭಜನಾ ಪರಿಷತ್ತಿನ ನಿರ್ವಹಣೆಗೆ 2 ಮಂದಿ ಸಮನ್ವಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಭಜನಾ ಮಂಡಳಿಗಳಿಗೆ ಗ್ರೇಡಿಂಗ್ ನೀಡಲಾಗುವುದು.

ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌ ನ ಮೂಲಕ ನಡೆಯುತ್ತಿದೆ. ಸಂಖ್ಯೆಗೆ ಮಹತ್ವ ನೀಡದೆ ಗುಣಮಟ್ಟಕೆ ಆದ್ಯತೆ ನೀಡಬೇಕು. ಪ್ರಸ್ತುತ ಭಜನಾ ಮಂಡಳಿಗಳಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಪರಿಷತ್‌ನವರು ಉತ್ತಮವಾಗಿ ದುಡಿಯುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ 25 ವರ್ಷಗಳಿಂದ ಭಜನೆ ಇತ್ತು. ಆದರೆ ರಾಗ, ತಾಳಗಳ ಜ್ಞಾನಗಳ ಕೊರತೆ ಇತ್ತು. ಭಜನಾ ಕಮ್ಮಟದ ಮೂಲಕ ಶಿಸ್ತು, ರಾಗ, ತಾಳದ ಜ್ಞಾನ ಬಂದಿದೆ. ಭಜನಾ ಮಂಡಳಿಗೆ ಸ್ವರೂಪ ಸಿಕ್ಕಿದೆ. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದ ರೀತಿಯಲ್ಲಿ ಕುಣಿತ ಭಜನೆಯ ತರಬೇತಿ ನೀಡಬೇಕು. ಮನೆಮನೆಯಲ್ಲಿ ಭಜನೆ ನಡೆಯುತ್ತಿದೆ ಎಂದು ಮಾರ್ಗದರ್ಶನ ನೀಡಿದರು.

ಭಜನಾ ಕಮ್ಮಟದ ಸಂಚಾಲಕರಾದ ಸುಬ್ರಹ್ಮಣ್ಯ ಪ್ರಸಾದ್, ಇವರು ಪ್ರಸ್ತಾವನೆ ನೆರವೇರಿಸಿದರು. ಭಜನಾ ಕಮ್ಮಟದ ಕಾರ್ಯದರ್ಶಿಯವರಾದ ವೀರು ಶೆಟ್ಟಿ, ಮಹಾವೀರ ಅಜ್ರಿ, ಭಜನಾ ಕಮ್ಮಟದ ಸದಸ್ಯರಾದ ಉಪಸ್ಥಿತರಿದ್ದರು.

ಭಜನಾ ಪರಿಷತ್‌ನ ಅಧ್ಯಕ್ಷರಾದ ಚಂದ್ರಶೇಖರ ಸಾಲ್ಯಾನ್ ಇವರು ಸ್ವಾಗತಿಸಿ, ಸಮನ್ವಯಾಧಿಕಾರಿ ಸಂತೋಷ್ ಪಿ. ವರದಿ ವಾಚಿಸಿದರು. ಭಜನಾ ಪರಿಷತ್‌ನ ಉಪಾಧ್ಯಕ್ಷರಾದ ರಾಜೇಂದ್ರ ಕುಮಾರ್ ಇವರು ಧನ್ಯವಾದವಿತ್ತರು. ಭಜನಾ ಪರಿಷತ್‌ನ ಸಮನ್ವಯಾಧಿಕಾರಿ ರಾಘವೇಂದ್ರ, ಇವರು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *