ರಾಯಚೂರು: (ಸೆ.28) ಈ ಜೀವನ ಅಂದ್ರೆನೇ ಹೀಗೆ ಪ್ರತಿ ದಿನವೂ ಕೂಡ ಸವಾಲಿನಿಂದ ಕೂಡಿರುತ್ತದೆ. ಕೆಲವೊಬ್ಬರು ಸುಖದ ಸುಪ್ಪತ್ತಿಗೆಯಲ್ಲಿ ಜೀವನ ನಡೆಸಿದ್ರೆ ಇನ್ನೂ ಕೆಲವೊಬ್ಬರು ಪ್ರತಿ ದಿನವೂ ಕಣ್ಣೀರಿನಲ್ಲೇ ಕೈ ತೊಳೆಯುವ ಪರಿಸ್ಥಿತಿ ಇದೆ.
ಇದನ್ನೂ ಓದಿ; 🟠ಉಜಿರೆ: ಕರ್ನಾಟಕ ಸಂಭ್ರಮ 50ರ ಅಂಗವಾಗಿ ಉಜಿರೆಗೆ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆ
ಸದ್ಯ ಅಂತಹುದೇ ಒಂದು ಸ್ಟೋರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಾ ಇದೆ. ಅಮ್ಮ ದಿನ ಕಷ್ಟ ಪಡುವುದನ್ನು ಕಂಡ ಇಲ್ಲೊಬ್ಬ ಬಾಲಕ ಸಂಜೆ ಶಾಲೆ ಬಿಟ್ಟ ನಂತರ ಬಸ್ ನಿಲ್ದಾಣವೊಂದರಲ್ಲಿ ಹಣ್ಣುಗಳನ್ನು ಮಾರಿ ಅಮ್ಮನಿಗೆ ಸಹಾಯ ಮಾಡುತ್ತಿದ್ದಾನೆ.
ಬಡತನ ಕಲಿಸುವ ಜೀವನ ಪಾಠವನ್ನು ಯಾವ ವಿಶ್ವವಿದ್ಯಾನಿಲಯವು ಕಲಿಸುವುದಿಲ್ಲ ಅನ್ನುವ ಹಿರಿಯರ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ.
4ನೇ ತರಗತಿ ಓದುವ ಆಕಾಶ ದಿನ ನಿತ್ಯ ಶಾಲೆ ಬಿಟ್ಟ ನಂತರ ತನ್ನ ಮನೆಗೆಲಸವನ್ನು ಮುಗಿಸಿ, ಲಿಂಗಸುಗೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹಣ್ಣು ವ್ಯಾಪಾರ ಮಾಡಿ ಬಂದ ಹಣದಲ್ಲಿ ಬಾಡಿಗೆ ಮನೆಯ ಹಣ ಕಟ್ಟುತ್ತಿದ್ದಾನೆ.
ಕೆಲಸ ಮಾಡಿಕೊಂಡು ಇವನ ಅಣ್ಣ, ತಂಗಿ, ಅವ್ವ, ಅಪ್ಪನ ಜೊತೆ ಸುಖವಾಗಿ ಇದ್ದಾನಂತೆ. ಈ ವಿಡಿಯೋದಲ್ಲಿ ಆಕಾಶ ಬಸ್ ನಿಲ್ದಾಣದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿರುವುದನ್ನು ನೋಡಬಹುದು.
ತಾಯಿಯು ಅದೇ ಬಸ್ ನಿಲ್ದಾಣದಲ್ಲಿ ಬೇರೊಂದು ಸ್ಥಳದಲ್ಲಿ ವ್ಯಾಪಾರವನ್ನು ಮಾಡುತ್ತಿದ್ದು, ಈ ಬಾಲಕನು ಬುಟ್ಟಿ ಹಿಡಿದುಕೊಂಡು ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರಿರುವಲ್ಲಿಗೆ ತೆರಳಿ, ಹಣ್ಣು ಬೇಕಾ ಎಂದು ಕೇಳುತ್ತಾನೆ. ಪ್ರಯಾಣಿಕರು ಬೇಕು ಎಂದರೆ ಹಣ್ಣನ್ನು ಕತ್ತರಿಸಿ ಉಪ್ಪು ಹಾಕಿ ನೀಡುವುದು.
ಈತನಿಗೆ ಕೆಲಸದ ಮೇಲೆ ಇರುವ ಪ್ರೀತಿಯನ್ನು ತೋರಿಸುತ್ತದೆ. ಅದಲ್ಲದೇ ಇದರಲ್ಲಿ ನಿಂಗೆಷ್ಟು ಲಾಭ ಕೇಳಿದರೆ, ಲಾಭ ಏನಿಲ್ಲ ಎಲ್ಲಾ ದುಡ್ಡನ್ನು ಅಮ್ಮನಿಗೆ ಕೊಡ್ತೇನೆ, ಅವರು ಪುಸ್ತಕ ಪೆನ್ನು ಪೆನ್ಸಿಲ್ ತೆಗ್ಸಿಕೊಡ್ತಾರೆ ಎನ್ನುತ್ತಾನೆ ಈ ಬಾಲಕ.
ಅಷ್ಟೇ ಅಲ್ಲದೇ, ಇವನ ಕೆಲಸಕ್ಕೆ ಜನರು ಕರುಣೆಯಿಂದ ಉಚಿತವಾಗಿ ಹಣ ಕೊಟ್ಟರೆ ತೆಗೆದುಕೊಳ್ಳದೆ ನಯವಾಗಿ ತಿರಸ್ಕರಿಸಿ ದುಡಿಮೆಯಲ್ಲಿ ತನ್ನ ಪ್ರಾಮಾಣಿಕತೆಯನ್ನು ಮೆರೆಯುತ್ತಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆಯು ಹರಿದು ಬಂದಿದೆ.