Wed. Nov 20th, 2024

Mangaluru: ಟ್ರೆಂಡ್ ಆಯ್ತು ಪಿಯು ವಿದ್ಯಾರ್ಥಿ ಕೈಚಳಕದಲ್ಲಿ ಮೂಡಿದ ಹುಲಿವೇಷದ ತಲೆ – ಒಂದಿಚಿನ ಹುಲಿತಲೆಗೆ ಸಖತ್ ಬೇಡಿಕೆ

ಮಂಗಳೂರು:(ಸೆ.30) ಇನ್ನೇನು ದಸರಾಕ್ಕೆ ದಿನಗಣನೆ ಶುರುವಾಗಿದೆ. ದಸರಾ ಅಂದ್ರೆ ಕರಾವಳಿಯಲ್ಲಿ ಹುಲಿವೇಷ ಕುಣಿತದ ಅಬ್ಬರ ಎಲ್ಲರನ್ನೂ ಸೆಳೆಯುತ್ತದೆ.

ಇದನ್ನೂ ಓದಿ: 🔴ಬೆಳ್ತಂಗಡಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಶಿರ್ಲಾಲಿನ ಹರಿಶ್ಚಂದ್ರ ಅವರಿಗೆ ಬೇಕಾಗಿದೆ ಸಹಾಯ ಹಸ್ತ

ಇದೀಗ ಪಿಯುಸಿ ವಿದ್ಯಾರ್ಥಿಯ ಕೈಚಳಕದಲ್ಲಿ ಮೂಡಿಬಂದಿರುವ ಹುಲಿವೇಷದ ತಲೆಯ ಪ್ರತಿಕೃತಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಆಗಿದ್ದು, ಸಖತ್ ಬೇಡಿಕೆ ಕುದುರಿದೆ.

ಹುಲಿವೇಷದ ತಲೆಯನ್ನು ಕೈಯಿಂದಲೇ ಮಾಡುತ್ತಾ ಸೂಕ್ಷ್ಮವಾಗಿ ಬಣ್ಣ ಬಳಿಯುತ್ತಿರುವ ವಿದ್ಯಾರ್ಥಿ ಕೆ.ಜೆ.ಜೇಷ್ಠ ಆಚಾರ್ಯ. ಕೋಟೆಕಾರು ನಿವಾಸಿಯಾದ ಈತ, ನಂತೂರಿನ ಎನ್ಎಸ್ಎಎಂ ನಿಟ್ಟೆ ಕಾಲೇಜಿನ ಪಿಯು ವಿದ್ಯಾರ್ಥಿ.

ಮೂರು ವರ್ಷದ ಬಾಲಕನಿದ್ದಾಗಲೇ ಚಿತ್ರಕಲೆಯತ್ತ ಆಕರ್ಷಿತನಾದ ಜೇಷ್ಠ ಆಚಾರ್ಯರಿಗೆ ಕಲಾವಿದ ತಂದೆ ಕೆ.ಆರ್.ಜಯಪ್ರಸಾದ್ ಅವರೇ ಗುರು. ಜಯಪ್ರಸಾದ್ ಚಿತ್ರಕಲಾವಿದ, ಸ್ತಬ್ಧಚಿತ್ರ ಕಲಾವಿದ.

ಸದ್ಯದ ಟ್ರೆಂಡ್ ಹುಲಿವೇಷ ಕುಣಿತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವಾಗಿ ಕೊಡುವ ಹುಲಿವೇಷದ ತಲೆಯ ಪ್ರತಿಕೃತಿಯನ್ನು ಜಯಪ್ರಸಾದ್ ರಚಿಸಿಕೊಡುತ್ತಾರೆ.

ತಂದೆಯ ಕುಂಚಕಲೆ, ಸ್ತಬ್ಧಚಿತ್ರ ರಚನೆಯೇ ಜೇಷ್ಠರಿಗೆ ಉತ್ತೇಜನ. ತಂದೆಯ ಕೈಚಳಕವನ್ನೇ ಗಮನಿಸಿ ಜೇಷ್ಠ ಒಂದಿಂಚು, ಎರಡಿಂಚು ಅಳತೆಯ ಹುಲಿವೇಷದ ತಲೆಯ ಪ್ರತಿಕೃತಿಯನ್ನು ರಚಿಸಿದ್ದಾರೆ.

ಹಾಗೇ ಸುಮ್ಮನೆ ಎಂದು ರಚಿಸಿದ್ದ ಹುಲಿವೇಷದ ತಲೆಯ ಪ್ರತಿಕೃತಿಯ ವೀಡಿಯೋವೊಂದನ್ನು ಜೇಷ್ಠ ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ಸೆಟ್ ಆಗಿದೆ. ಈ ಪ್ರತಿಕೃತಿಗೆ ಸಖತ್ ಬೇಡಿಕೆ ಕುದುರಿದೆ.

ಆದ್ದರಿಂದ ಕಾಲೇಜು ವ್ಯಾಸಂಗದ ನಡುವೆಯೇ ಹುಲಿವೇಷದ ತಲೆ ಪ್ರತಿಕೃತಿ ಮಾಡಲಾರಂಭಿಸಿದ್ದಾರೆ. ಈ ಹುಲಿತಲೆ ಕಾರ್ ಡ್ಯಾಶ್ ಬೋರ್ಡ್‌ನಲ್ಲಿಡಲು, ಹ್ಯಾಂಗಿಂಗ್ ಮಾದರಿ ಸೇರಿದಂತೆ ವೈವಿಧ್ಯಮಯ ರೂಪದಲ್ಲಿ ದೊರಕುತ್ತದೆ.

Leave a Reply

Your email address will not be published. Required fields are marked *